ಹೊಸ ವರ್ಷಕ್ಕೆ ಕೊಡಗಿಗೆ ಕರೋನಾ ಆತಂಕ

Corona worry for Kodagu for the new year
Published on

ಮಡಿಕೇರಿ
ಮತ್ತೊಮ್ಮೆ ಕೊರೊನಾ ಸದ್ದು ಮಾಡುತ್ತಿದೆ. ಪಕ್ಕದ ಕೇರಳದಲ್ಲಿ ಈಗಾಗಲೇ ಕೊರೊನಾ ನಾಲ್ವರನ್ನು ಬಲಿ ತೆಗೆದುಕೊಂಡಿದ್ದು ಗಡಿ ಜಿಲ್ಲೆ ಕೊಡಗಿನಲ್ಲಿ ಸಾಕಷ್ಟು ಮಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ೨೦೨೪ರ ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧತೆ ನಡೆದಿರುವ ಬೆನ್ನಲ್ಲೇ ಕೊರೊನಾ ಅಲೆಯ ಸದ್ದು ಜಿಲ್ಲೆಯ ಪ್ರವಾಸೋದ್ಯಮಿಗಳ ಉತ್ಸಾಹಕ್ಕೆ ತಣ್ಣೀರು ಎರಚಿದಂತೆ ಆಗಿದೆ.
ಸದ್ಯದ ಸ್ಥಿತಿಯಲ್ಲಿ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರಲ್ಲಿ ಕೇರಳಿಗರ ಸಂಖ್ಯೆಯೇ ಹೆಚ್ಚು ಇದೆ. ಅದರಲ್ಲೂ ಅಲ್ಲಿನ ಶಾಲಾ ಮಕ್ಕಳು ದೊಡ್ಡ ಪ್ರಮಾಣದಲ್ಲಿ ಜಿಲ್ಲೆಗೆ ಬರುತ್ತಿದ್ದಾರೆ. ಪ್ರತಿನಿತ್ಯವೂ ೪೦-೫೦ ಬಸ್‌ಗಳಲ್ಲಿ ಪ್ರವಾಸಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಇದರ ಜತೆಯಲ್ಲಿ ಕೌಟುಂಬಿಕ ಪ್ರವಾಸಿಗರೂ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಗಡಿಯಾಚೆಯಿಂದ ಬರುವ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದ್ದು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ.
ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎನ್. ಬೋಸರಾಜು ಈ ಸಂಬಂಧ ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಕೇರಳದಲ್ಲಿ ರೂಪಾಂತರಿ ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಹೊಸ ವರ್?ಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಹಾಗಾಗಿ ಈಗಿನಿಂದಲೇ ಅಗತ್ಯ ವ್ಯವಸ್ಥೆಗಳನ್ನ ಹಾಗೂ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು. ಎಲ್ಲಾ ರೀತಿಯ ಪರಿಸ್ಥಿತಿಗಳನ್ನ ನಿಭಾಯಿಸಲು ಸಜ್ಜಾಗಿರಬೇಕು ಎಂದು ಹೇಳಿದ್ದಾರೆ.
ಕೊರೊನಾ ಭೀತಿ ಒಂದು ಕಡೆಯಾದರೆ ಮತ್ತೊಂದು ಕಡೆಯಲ್ಲಿ ಈ ವರ್ಷಾಂತ್ಯ ಮತ್ತು ಹೊಸ ವರ್ಷದ ಸ್ವಾಗತಕ್ಕೆ ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಲ್ಲಿ ಸ್ಥಳೀಯ ಪ್ರವಾಸೋದ್ಯಮಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರನ್ನು ಬರ ಮಾಡಿಕೊಳ್ಳಲು ಕಳೆದ ಒಂದು ತಿಂಗಳಿನಿಂದಲೇ ಸಿದ್ಧತೆ ನಡೆಸಲಾಗಿದೆ. ಬಹುತೇಕ ಕೊಠಡಿಗಳ ಬುಕ್ಕಿಂಗ್ ಮುಗಿದಿದ್ದು, ಹೋಮ್ ಸ್ಟೇ, ರೆಸಾರ್ಟ್‌ಗಳಿಗೆ ಕರೆ ಮಾಡಿದರೆ ’ರೂಂ ಖಾಲಿ ಇಲ್ಲ’ ಎನ್ನುವ ಉತ್ತರ ಬರುತ್ತಿದೆ. ಇದೇ ಸಂದರ್ಭ ಉಪಯೋಗಿಸಿಕೊಂಡು ಕೆಲವೆಡೆ ಕೊಠಡಿ ದರವನ್ನು ಮನಸ್ಸು ಬಂದಂತೆ ಏರಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಇದನ್ನು ಹೊರತು ಪಡಿಸಿದರೆ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮಿಗಳು ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಕ್ಯಾಂಪ್ ಫೈಯರ್, ಡಿಜೆ ಪಾರ್ಟಿ, ನ್ಯೂ ಇಯರ್ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಟ್ರಕ್ಕಿಂಗ್, ಕ್ಯಾಂಪಿಂಗ್, ಎಸ್ಟೇಟ್ ರೈಡ್ ಸೇರಿ ವಿವಿಧ ಆಕರ್ಷಣೆಗಳನ್ನು ಪ್ರವಾಸಿ ಪ್ಯಾಕೇಜ್‌ನಲ್ಲಿ ಸೇರಿಸಲಾಗುತ್ತಿದ್ದು, ವಿವಿಧ ದರಗಳಲ್ಲಿ ಪ್ರವಾಸಿಗರಿಗೆ ಒದಗಿಸಲು ಸಿದ್ಧತೆ ನಡೆದಿದೆ. ಆದರೆ ಎಲ್ಲವೂ ಈಗ ಕೊರೊನಾದ ಸ್ಥಿತಿಗತಿ ಮೇಲೆ ನಿಂತಿದೆ. ಈ ಹಿನ್ನೆಲೆಯಲ್ಲಿ ವಿಜಯವಾಣಿ ಓದುಗರು ಪ್ರವಾಸೋದ್ಯಮ ಸಿದ್ಧತೆ ಬಗ್ಗೆ ಹಂಚಿಕೊಂಡಿರುವ ಅಭಿಪ್ರಾಯಗಳು ಇಲ್ಲಿದೆ.

ಕೇರಳದಲ್ಲಿ ರೂಪಾಂತರಿ ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊಡಗಿಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಸನ್ನದ್ದವಾಗಿದ್ದು ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ನಿಭಾಯಿಸಲು ಸಜ್ಜಾಗಿರಬೇಕು. ಹೊಸ ವರ್?ಾಚರಣೆಯ ಹಿನ್ನೆಲೆಯಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಹಾಗಾಗಿ ಈಗಿನಿಂದಲೇ ಅಗತ್ಯ ವ್ಯವಸ್ಥೆಗಳನ್ನ ಹಾಗೂ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಎನ್.ಎಸ್. ಬೋಸರಾಜು, ಜಿಲ್ಲಾ ಉಸ್ತುವಾರಿ ಸಚಿವ

ಹೊಸ ವರ್ಷಕ್ಕೆ ಹೋಂ ಸ್ಟೇ ಗಳಲ್ಲಿ ಪ್ರವಾಸಿಗರಿಗೆ ವಿಶೇಷ ಆಹಾರ ಮತ್ತು ರಿಯಾಯಿತಿಯನ್ನು ನೀಡಲಿದ್ದೇವೆ. ಫೈರ್ ಕ್ಯಾಂಪ್ ಮಾಡಿಕೊಡುತ್ತೇವೆ. ಬೆಟ್ಟ-ಗುಡ್ಡವೇರಲು ಫೋರ್‌ವ್ಹೀಲ್ ವಾಹನ ಮತ್ತು ಗೈಡ್ ವ್ಯವಸ್ಥೆ ಮಾಡಿಕೊಡುತ್ತೇವೆ. ಎಸ್ಟೇಟ್ ವಾಕ್‌ಗೂ ಅವಕಾಶವಿರುತ್ತದೆ. ಸೋಮವಾರಪೇಟೆ ತಾಲೂಕಿನಲ್ಲಿರುವ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಸಿ.ಕೆ. ರೋಹಿತ್, ಅಧ್ಯಕ್ಷ, ಸೋಮವಾರಪೇಟೆ ತಾಲೂಕು ಹೋಂ ಸ್ಟೇ ಅಸೋಸಿಯೇಷನ್

ಕೊಡಗು ಜಿಲ್ಲೆಯನ್ನು ಪ್ರವಾಸಿಗರ ಸ್ವರ್ಗ ಎಂದು ಹೇಳುತ್ತಾರೆ. ಆದರೆ ಅದೇ ಪ್ರವಾಸಿಗರಿಂದ ಕೊಡಗು ಪ್ರಕೃತಿ ಸೌಂದರ್ಯ ಹಾಳಾಗುತ್ತಿದೆ. ಪ್ರವಾಸಿಗರಿಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ಜಿಲ್ಲೆಯೂ ಪ್ರವಾಸೋದ್ಯಮದ ಅವಲಂಬಿತ ಎನ್ನುವುದು ಮಾತ್ರ ಸತ್ಯ. ಜಿಲ್ಲೆಯ ಮತ್ತ?್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರ ಚಿಂತನೆ ಹರಿಸಬೇಕಾಗಿದೆ.
ಉಮಾ ರಾಜ್, ಗೃಹಿಣಿ, ಕುಶಾಲನಗರ.

ಕೊಡಗು ಅಂದರೆ ಮಡಿಕೇರಿ, ಕುಶಾಲನಗರ ಮಾತ್ರವಲ್ಲ. ಜಿಲ್ಲೆಯಾದ್ಯಂತ ಅನೇಕ ಸ್ಥಳಗಳು ಪ್ರಚಲಿತಕ್ಕೆ ಬರಲೇ ಇಲ್ಲ. ಅಂತಹ ಎಲೆಮರೆಯ ಸ್ಥಳಗಳನ್ನು ಸರ್ಕಾರ ಪ್ರಚಾರ ಮಾಡಬೇಕು. ಜಿಲ್ಲೆಯಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಹೆಲ್ಪ್ ಲೈನ್ ಕೇಂದ್ರ ಸ್ಥಾಪಿಸಿದರೆ ಒಳ್ಳೆಯದು. ಬರುವ ಜನರು ಪ್ರಮುಖ ಸ್ಥಳಗಳಲ್ಲಿ ರಾತ್ರಿ ಉಳಿಯಬೇಕು. ಇನ್ನು ಅನೇಕ ಹೋಮ್ ಸ್ಟೇ, ರೆಸಾರ್ಟ್‌ಗಳ ಮಾಹಿತಿಯಿಲ್ಲದೆ ಆರ್ಥಿಕ ತೊಂದರೆಯಲ್ಲಿ ಇದೆ.
ಎಚ್.ಎನ್. ಸದಾಶಿವ, ಉದ್ಯಮಿ, ನಿಸರ್ಗಧಾಮ, ಕುಶಾಲನಗರ

ಕೊಡಗು ಜಿಲ್ಲೆ ಹೇಳಿ ಕೇಳಿ ಪ್ರವಾಸಿಗರ ನೆಚ್ಚಿನ ತಾಣ ಹೌದು. ಈಗ ಹೊಸ ವರ್ಷ ಎಲ್ಲೆಡೆ ಸಂಭ್ರಮದಿಂದ ಆಚರಿಸ್ಪಡಲಾಗುತ್ತಿದೆ. ಪ್ರವಾಸಿಗರು ಇಲ್ಲಿಗೆ ಆಗಮಿಸಿ ಸಂಭ್ರಮಿಸುತ್ತಾರೆ. ಆದರೆ ಕೆಲವು ಕಡೆ ಅನಧಿಕೃತ ಹೋಂ ಸ್ಟೇ ಗಳು ಜನರನ್ನು ಆಕರ್ಷಿಸಿ ದುಬಾರಿ ಬೆಲೆ ನಿಗದಿ ಪಡಿಸುತ್ತಾರೆ. ಇದರಿಂದ ಜಿಲ್ಲೆಯ ಹೆಸರು ಹಾಳಾಗುತ್ತಿದೆ. ಜಿಲ್ಲಾಡಳಿತ ಇಂತಹ ಸಂದರ್ಭದಲ್ಲಿ ಹೆಚ್ಚಿನ ಗಮನ ಹರಿಸಬೇಕು.
ಸುಭೀಶ್ ಆರ್., ಸಮಾಜ ಸೇವಕ, ಗೋಣಿಕೊಪ್ಪ

ಕೊಡಗು ಜಿಲ್ಲೆಯಲ್ಲಿ ಅದೆ?್ಟೋ ಪ್ರವಾಸಿ ತಾಣಗಳು ತೆರೆಮರೆಯಲ್ಲಿ ಉಳಿದುಹೋಗಿವೆ. ಅದನ್ನು ಪ್ರವಾಸೋದ್ಯಮ ಇಲಾಖೆ ಅವುಗಳನ್ನು ಬೆಳಕಿಗೆ ತರುವ ಕೆಲಸ ಮಾಡಬೇಕು. ಅಲ್ಲಿಗೆ ಮೂಲಭೂತ ಸೌಲಭ್ಯ ಒದಗಿಸಿದ್ದಲ್ಲಿ ಇದರಿಂದ ಇಲಾಖೆಗೂ ಆದಾಯ ಬರಲಿದೆ. ಪ್ರವಾಸಿಗರು ಒತ್ತಡ ಒಂದೇ ಕಡೆಯಲ್ಲಿ ಕಡಿಮೆಯಾಗಲಿದೆ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆ ಹೆಚ್ಚಿನ ಗಮನಹರಿಸಿ ಬೇಕು.
ಕುಂಜಿಲನ ಎಸ್. ಮಂಜುನಾಥ್, ಅಧ್ಯಕ್ಷ, ಸುಂಟಿಕೊಪ್ಪ ವಿವಿದೋದ್ಧೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ

ಕೊಡಗು ಪ್ರವಾಸಿಗರಿಗೆ ಹೇಳಿ ಮಾಡಿಸಿದಂತ ಜಿಲ್ಲೆಯಾಗಿದೆ. ಪ್ರವಾಸಿಗರು ಪ್ರತಿ ವರ್ಷದ ಕೊನೆಯಲ್ಲಿ ಜಿಲ್ಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಬಾರಿ ಆಗಮಿಸುವ ಪ್ರವಾಸಿಗರು ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಕ್ರಮಕ್ಕೆ ಮುಂದಾಗಬೇಕು, ಎಲ್ಲೆಂದರಲ್ಲಿ ಕಸ ಹಾಕದಂತೆ ಮುನ್ಸೂಚನೆ ಕೊಡಬೇಕು. ಪ್ರವಾಸಿಗರಿಂದ ದುಬಾರಿ ಹಣ ಪಡೆಯದಂತೆ ನೋಡಿಕೋಳ್ಳಬೇಕು.
ಎಸ್.ಎನ್.ರಘು, ಗ್ರಾಮ ಪಂಚಾಯತಿ ಸದಸ್ಯ, ಶನಿವಾರಸಂತೆ

ವರ್ಷಾಂತ್ಯ ಮತ್ತು ಹೊಸ ವರ್ಷದ ಸಂದರ್ಭಲ್ಲಿ ಜಿಲ್ಲೆಯಲ್ಲಿ ಉಂಟಾಗಬುದಾದ ಪ್ರವಾಸಿ ದಟ್ಟಣೆ ನಿಯಂತ್ರಿಸಲು ೧೨ ಮಂದಿ ಟೂರಿಸ್ಟ್ ಮಿತ್ರರನ್ನು ನಿಯೋಜಿಸಲಾಗಿದೆ. ಮಡಿಕೇರಿ ರಾಜಾಸೀಟ್ ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಇವರುಗಳು ಕಾರ್ಯ ನಿರ್ವಹಿಸಲಿದ್ದಾರೆ. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲೂ ಇಲಾಖೆ ಕಾರ್ಯೋನ್ಮುಖವಾಗಿದೆ. ಈಗಾಗಲೇ ಮೂಲಭೂತ ಸೌಕರ್ಯ ಇರುವಲ್ಲಿ ಅವುಗಳನ್ನು ಉತ್ತಮಪಡಿಸಲಾಗುವುದು. ಇಲ್ಲದಿರುವ ಕಡೆಗಳಲ್ಲಿ ಅವುಗಳ ವ್ಯವಸ್ಥೆ ಮಾಡಲಾಗುವುದು.
ಅನಿತಾ ಭಾಸ್ಕರ್, ಉಪನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ ಕೊಡಗು

ಕಳೆದ ಹಲವು ವರ್ಷಗಳಿಂದ ಪ್ರವಾಹ, ಪ್ರಕೃತಿ ವಿಕೋಪ, ಕೋವಿಡ್ ಕಾರಣದಿಂದ ಪ್ರವಾಸಿಗರು ಜಿಲ್ಲೆಗೆ ಬಾರದೆ ದೂರ ಇದ್ದರು. ಇದರಿಂದ ಪ್ರವಾಸೋದ್ಯಮ ನಂಬಿರುವ ಹೊಟೇಲ್, ಹೋಂಸ್ಟೇ, ರೆಸಾರ್ಟ್ ಮಾಲೀಕರು ಹಾಗೂ ವರ್ತಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಈ ಬಾರಿ ಯಾವುದೇ ಅಡೆತಡೆ ಇಲ್ಲದೆ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗಾಗಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಗೆ ಆಗಮಿಸುತ್ತಿದ್ದು ಇದರಿಂದ ವ್ಯಾಪಾರೋದ್ಯಮಗಳಲ್ಲಿ ಚೇತರಿಕೆ ಕಂಡಿದೆ.
ಕಾವೇರಿ, ಗ್ರೀನ್ ಏಕರ್ಸ್ ಹೋಂಸ್ಟೇ, ಮಾಲ್ದಾರೆ, ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net