

ರಾಮದುರ್ಗ: ಕ್ವಾರಂಟೈನ್‌ನಲ್ಲಿ ಇರುವವರ ಬಗ್ಗೆ ತಾಲೂಕು ಆಡಳಿತ ತೀವ್ರ ನಿಗಾವಹಿಸಿದೆ. ಅವರಿಗೆ ಚಿಕಿತ್ಸೆ ಜತೆಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ತಾಲೂಕಿನ ಯಾವುದೇ ಗ್ರಾಮಸ್ಥರು ಕರೊನಾ ಸೋಂಕು ಸಂಬಂಧಿಸಿದಂತೆ ಕರೆ ಮಾಡಿದರೆ ತಕ್ಷಣ ಸ್ಪಂದಿಸಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ತಾಲೂಕಿನ ಹಳೇತೋರಗಲ್ಲ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಕರೊನಾ ವೈರಸ್ ತಡೆ ಕುರಿತು ಜಾಗೃತಿ ಮೂಡಿಸಿದ ಬಳಿಕ ಅವರು ಮಾತನಾಡಿದರು. ಗ್ರಾಮಸ್ಥರು ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಕೋವಿಡ್-19 ರೋಗ ತಡೆಯುವ ನಿಟ್ಟಿನಲ್ಲಿ ಎಲ್ಲ ಇಲಾಖೆ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ.
ರಾತ್ರಿ ಹೊತ್ತು ಆರೋಗ್ಯ ಇಲಾಖೆಯೊಂದಿಗೆ ಗ್ರಾಮಗಳಿಗೆ ತೆರಳಿ ಕಾರ್ಯನಿರ್ವಹಿಸಿದ್ದು ಹೆಮ್ಮೆಯ ಸಂಗತಿ ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮುರುಳೀಧರ ದೇಶಪಾಂಡೆ ಮಾತನಾಡಿ, ಪ್ರತಿ ಗ್ರಾಪಂ ಮಟ್ಟದಲ್ಲಿ ಸಮಿತಿ ರಚಿಸಿ ಕರೊನಾ ಸೋಂಕು ತಡೆಯುವಲ್ಲಿ ಸಫಲರಾಗಿದ್ದೇವೆ ಎಂದರು. ಜಿಪಂ ಸದಸ್ಯ ಜಹೂರ ಹಾಜಿ, ಮುಸ್ತಫಾ ದಾವಲಬಾಯಿ, ಸಿಂಗಾರೆವ್ವ ವಂಟಮೂರಿ, ಕಟಕೋಳ ಪಿಎಸ್‌ಐ ಶರಣೇಶ ಜಾಲಿಹಾಳ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪ್ರಕಾಶ ಮುಗಳಖೋಡ, ಗ್ರಾಪಂ ಅಧ್ಯಕ್ಷ ಹುದ್ದಾರ ಇದ್ದರು.