ಸದ್ದಿಲ್ಲದೆ ಕಾರ್ಯವೆಸಗುತ್ತಿದೆ ವಾರಿಯರ್ಸ್‌ ತಂಡ, ಫೇಕ್‌ನ್ಯೂಸ್ ಹಾವಳಿ ತಡೆ

warrior
Published on

ಮಂಗಳೂರು: ಕರೊನಾದಂಥ ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಬೇಕಾದ್ದು ಅಧಿಕೃತ ಮಾಹಿತಿ ಹಾಗೂ ಸುದ್ದಿ. ಈ ವೇಳೆ ಕರೊನಾ ವೈರಸ್‌ನಂತೆಯೇ ಕಾಡುವುದು ಸುಳ್ಳು ಸುದ್ದಿ, ಊಹಾಪೋಹ, ಗಾಳಿಸುದ್ದಿ.

ಇದರ ವಿರುದ್ಧ ಹೋರಾಡಿ, ಜನರಿಗೆ ಸೂಕ್ತ ಮಾಹಿತಿ ತಲುಪುವಂತೆ ಮಾಡುವುದಕ್ಕೆ ಶ್ರಮಿಸುತ್ತಿದೆ ಡಿ.ಕೆ.ಕರೊನಾ ವಾರಿಯರ್ಸ್‌ ಎನ್ನುವ ಸ್ವಯಂಸೇವಕರ ತಂಡ.

483 ಮಂದಿಯ ಈ ತಂಡದಲ್ಲಿ ಇರುವವರು ವಿವಿಧ ಕ್ಷೇತ್ರಗಳಲ್ಲಿನ ಪರಿಣಿತರು, ರಾಜ್ಯ ಸರ್ಕಾರದ ಮಾಹಿತಿ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆಯ ಕೋರಿಕೆಯಂತೆ ಸ್ವಯಂಸೇವಕರಾಗಿ ಮುಂದೆ ಬಂದವರು. ಇವರ ಮುಖ್ಯ ಕೆಲಸವೆಂದರೆ ಜಿಲ್ಲೆಯಲ್ಲಿ ಉದ್ಭವಿಸುವ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಫೇಕ್ ನ್ಯೂಸ್‌ಗಳೊಂದಿಗೆ ಹೋರಾಟ. ಅವುಗಳನ್ನು ಫೇಕ್ ಎಂದು ಘೋಷಿಸಿ, ಪೂರಕ ದಾಖಲೆ ಬಿಡುಗಡೆಗೊಳಿಸುವುದು. ಅಲ್ಲದೆ ಜಿಲ್ಲೆಯ ಜನರಿಗೆ ಉಪಯೋಗವಾಗುವ ಮಾಹಿತಿ ಪ್ರಸರಣ ಮಾಡುವುದು.

ದೈನಂದಿನ ಲಾಕ್‌ಡೌನ್ ಅಪ್‌ಡೇಟ್‌ಗಳು, ನೆರೆ ಜಿಲ್ಲೆಯ ಮಾಹಿತಿಗಳನ್ನೂ ಪ್ರಸರಿಸಲಾಗುತ್ತದೆ. ಮುಂದೆ ಯಾವುದೇ ತುರ್ತು ಪರಿಸ್ಥಿತಿ ಉದ್ಭವಿಸಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಾಗ ಜಿಲ್ಲಾಡಳಿತಕ್ಕೆ ಬೇಕಾದ ನೆರವು ನೀಡುವುದೂ ಪ್ರಮುಖ ಉದ್ದೇಶ. ಸದ್ಯ ಜಿಲ್ಲೆಯಲ್ಲಿ ಪರಿಹಾರ ಕಾರ್ಯ ಮಾಡುವಂಥ ಸನ್ನಿವೇಶ ಉದ್ಭವವಾಗಿಲ್ಲ.

9 ತಂಡಗಳಾಗಿ ವಿಭಜನೆ: ಇಡೀ ತಂಡವನ್ನು 9 ತಾಲೂಕು ತಂಡಗಳಾಗಿ ವಿಭಜಿಸಲಾಗಿದೆ. ಕಳುಹಿಸಲಾಗುವಂಥ ಮಾಹಿತಿಯನ್ನು ನಾಲ್ವರು ಇರುವ ಕೋರ್ ಟೀಂ ಸಿದ್ಧಪಡಿಸುತ್ತದೆ. ಇವರಿಗೆ ನೆರವಾಗುವುದಕ್ಕೆ 18 ಮಂದಿಯ ತಜ್ಞರ ತಾಂತ್ರಿಕ ಹಾಗೂ ತನಿಖಾ ತಂಡವಿದೆ. ಈ ತಂಡ ಮಾರ್ಚ್ 31ರಿಂದ ತೊಡಗಿ ಏಪ್ರಿಲ್ 6ರವರೆಗೆ ಒಟ್ಟು 81 ಮೆಸೇಜ್‌ಗಳನ್ನು ಪ್ರಸಾರ ಮಾಡಿದೆ. ಇದರಲ್ಲಿ 25 ಫೇಕ್ ನ್ಯೂಸ್ ಅಲರ್ಟ್‌ಗಳು ಸೇರಿವೆ. ಇದರಲ್ಲಿ 6ನ್ನು ಸ್ಥಳೀಯವಾಗಿಯೇ ಸಿದ್ಧಪಡಿಸಲಾಗಿರುವ ಫೇಕ್ ನ್ಯೂಸ್ ಎಂದು ತನಿಖಾ ತಂಡಗಳು ವರ್ಗೀಕರಿಸಿವೆ.

ವಾಟ್ಸಪ್ ಬ್ರಾಡ್‌ಕಾಸ್ಟ್ ಮೂಲಕ ಮಾಹಿತಿ: ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ಇರಿಸಬೇಕಾಗುತ್ತದೆ. ಅಲ್ಲದೆ ಕೊವಿಡ್ ಅಧಿಕೃತ ವೆಬ್‌ಸೈಟ್‌ಗಳ ಮೇಲೂ ಕಣ್ಣಿರಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಪೂರಕವೆನಿಸುವ ಮಾಹಿತಿಯನ್ನು ಪ್ರತ್ಯೇಕಿಸಿ ಜಿಲ್ಲೆಯಲ್ಲಿ ಬ್ರಾಡ್‌ಕಾಸ್ಟ್ ಮೆಸೇಜ್ ಮೂಲಕ ಪ್ರಸಾರ ಮಾಡಲಾಗುತ್ತದೆ. ಪ್ರತಿಯೊಬ್ಬ ಸದಸ್ಯನೂ ತನ್ನ ಸಂಪರ್ಕದಲ್ಲಿರುವವರಿಗೆ ವಾಟ್ಸಪ್ ಬ್ರಾಡ್‌ಕಾಸ್ಟ್ ಮೂಲಕ ಮಾಹಿತಿ ಪ್ರಸಾರ ಮಾಡುತ್ತಾರೆ. ಕನಿಷ್ಠ 2.64 ಲಕ್ಷ ಮಂದಿಗೆ ಈ ಮೆಸೇಜ್ ತಲುಪುತ್ತದೆ. ಕಾರ್ಮಿಕರಿಗೆ, ನಿರಾಶ್ರಿತರಿಗೆ ಆಹಾರ ಸಿಗದಿರುವ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗುತ್ತಿದೆ. ತಂಡವೇ ಅವರಿಗೆ ಆಹಾರ ವ್ಯವಸ್ಥೆ ಮಾಡಿದ್ದೂ ಇದೆ.

ಕರೊನಾ ವಾರಿಯರ್ಸ್‌ ತಂಡದ ಪ್ರಮುಖರಾಗಿ ನರೇನ್ ಕೊಡುವತ್ತಾಟ್, ಸಾಜಿದ್ ಸುಬೇರ್, ಸುದೀಪ್ ಘಾಟೆ ಹಾಗೂ ಸುಳ್ಯದ ಸಹನಾ ಇದ್ದಾರೆ. ತಾಂತ್ರಿಕ ತಂಡವನ್ನು ಬಂಟ್ವಾಳದ ಅಮಿತ್‌ರಾಜ್ ಶೆಟ್ಟಿ, ಶಮೀರ್ ಅಬ್ದುಲ್ ಖಾದರ್, ಮಂಗಳೂರಿನ ಶಶಿರೇಖಾ, ಜಯಪ್ರಕಾಶ್ ಉಳ್ಳಾಲ್, ಸಚಿನ್ ಪರಪ್ಪಗೌಡರ್, ವೈಶಾಲಿ ಸುವರ್ಣ, ನಿತೇಶ್ ಕುಮಾರ್, ತೌಸಿಫ್ ಹುಸೈನ್, ಪ್ರಿಯಲತಾ, ಶೋಯಬ್ ಸಿರಾಜ್, ಬೆಳ್ತಂಗಡಿಯ ವಲೇರಿಯನ್ ರಾಡ್ರಿಗಸ್, ಸುಳ್ಯದ ಮೊಹಮ್ಮದ್ ರಶೀದ್ ಹಾಗೂ ಮೊಹಮ್ಮದ್ ಶಫೀಕ್, ಪುತ್ತೂರಿನ ಲಲಿತಾ ಭಟ್, ಕಡಬದ ಸುದೀಶ್ ಕುಮಾರ್, ಮೂಡುಬಿದಿರೆಯ ನರೇಂದ್ರ ಮುನ್ನಡೆಸುತ್ತಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಸುವ ಕೆಲಸ, ಫೇಕ್ ನ್ಯೂಸ್‌ಗಳನ್ನು ವಿಶ್ಲೇಷಿಸಿ ಸರಿಯಾದ ಸುದ್ದಿ ಹಂಚುವ ಕೆಲಸ ಮಾಡುತ್ತಿದ್ದೇವೆ. ರಾಜ್ಯಮಟ್ಟದಲ್ಲಿ ವಾರ್ತಾ ಇಲಾಖೆ ನಿರ್ದೇಶಕ ಕ್ಯಾಪ್ಟನ್ ಮಣಿವಣ್ಣನ್ ನೇತೃತ್ವದಲ್ಲಿ ರಚಿಸಲಾದ ತಂಡವಿದ್ದು ರಾಜ್ಯಾದ್ಯಂತ ಕಾರ್ಯವೆಸಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಂಡ ಚೆನ್ನಾಗಿ ಕಾರ್ಯಾಚರಿಸುತ್ತಿದೆ.

ಸಹನಾ, ಪ್ರಧಾನ ಸ್ವಯಂಸೇವಕಿ, ಕರೊನಾ ವಾರಿಯರ್ಸ್‌

ಈ ತಂಡದಲ್ಲಿ ಯಾವುದೇ ಸಂಶಯಾಸ್ಪದ, ದ್ವೇಷ ಹಬ್ಬಿಸುವ ಹಾಗೂ ನಕಲಿ ಸುದ್ದಿಗಳು ಬಂದಾಗ ಅದನ್ನು ತನಿಖೆ ನಡೆಸಲಾಗುತ್ತದೆ. ತನಿಖಾ ತಂಡ ಪೂರ್ತಿಯಾಗಿ ಪರಿಶೀಲಿಸಿ ನಕಲಿ ಎಂದು ಗೊತ್ತಾದ ಬಳಿಕ ಪೂರಕ ಸಾಕ್ಷೃವನ್ನೂ ಸೇರಿಸಿ ತಾಲೂಕು ಗ್ರೂಪ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ.

ನರೇನ್ ಕೊಡುವತ್ತಾಟ್, ವಾರಿಯರ್ಸ್‌ ಪ್ರಮುಖರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net