

ಬಳ್ಳಾರಿ: ಕರೊನಾ ಸೋಂಕಿತ ಪತ್ತೆಯಾದ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಗುರುವಾರ ಸ್ಥಳೀಯರಿಂದ ಹೂವಿನ ಮಳೆಯ ಸ್ವಾಗತ ನೀಡಲಾಯಿತು.
ಸೋಂಕಿತ ಪತ್ತೆಯಾದ ದಿನದಿಂದ ಗುಗ್ಗರಹಟ್ಟಿ ಪ್ರದೇಶದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಆರೋಗ್ಯ ಸಮೀಕ್ಷೆ ಕಾರ್ಯ ಕೈಗೊಂಡಿದ್ದಾರೆ. ವೈಯಕ್ತಿಕ ಸುರಕ್ಷತೆಗಿಂತ ಜನರ ಆರೋಗ್ಯ ರಕ್ಷಣೆಗೆ ಮುಂದಾದ ಕಾರ್ಯಕರ್ತೆಯರ ಕೆಲಸಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಸಮೀಕ್ಷೆ ಕಾರ್ಯಕ್ಕೆ ಆಗಮಿಸಿದ ಕಾರ್ಯಕರ್ತೆಯರಿಗೆ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಸ್ಥಳೀಯ ನಿವಾಸಿಗಳು ರಸ್ತೆ ಬದಿ ಹಾಗೂ ಮನೆಗಳ ಮಹಡಿ ಮೇಲೆ ನಿಂತು ಹೂವು ಎರಚಿ ಕೃತಜ್ಞತೆ ಸಲ್ಲಿಸಿದರು.