

ಮಂಗಳೂರು: ಹೆಸರಿಗೆ ‘ಕರೊನಾ ವಾರಿಯರ್ಸ್’. ಆದರೆ ಕೆಲವರಿಗಷ್ಟೇ ಎನ್-95 ಮಾಸ್ಕ್ ನೀಡಲಾಗುತ್ತಿದೆ. ಪಿಪಿಇ ಕಿಟ್ ದೂರದ ಮಾತು. ಸುರಕ್ಷತೆಗೆ ಯಾವುದೇ ರೀತಿಯಲ್ಲೂ ಆದ್ಯತೆ ನೀಡುತ್ತಿಲ್ಲ. ನಮ್ಮ ಮೂಲಕ ಮನೆಯಲ್ಲಿರುವ ಮಕ್ಕಳು, ಹಿರಿಯರಿಗೆ ಸೋಂಕು ಹರಡಿದರೆ ಯಾರು ಹೊಣೆ?
ಇದು ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾದಿಯರ ಅಳಲು.
ಕೆಎಂಸಿಯಿಂದ ವೆನ್ಲಾಕ್, ಲೇಡಿಗೋಷನ್ ಆಸ್ಪತ್ರೆಗಳಿಗೆ ನಿಯೋಜಿಸಲ್ಪಟ್ಟ ನಾಲ್ವರು ವೈದ್ಯರಿಗೆ ಪಾಸಿಟಿವ್ ಬರುತ್ತಿದ್ದಂತೆ ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯರು, ಶುಶ್ರೂಷಕಿಯರು, ಇತರ ಸಿಬ್ಬಂದಿ ಆತಂಕಕ್ಕೆ ಸಿಲುಕಿದ್ದಾರೆ. ಸೋಂಕು ಪತ್ತೆಯಾದ ಬಳಿಕ ಕೆಲವು ವಿಭಾಗಗಳಿಗೆ ಮಾತ್ರ ಎನ್95 ಮಾಸ್ಕ್ ವಿತರಿಸಲಾಗಿದೆ. ಉಳಿದವರಿಗೆ ಸಾದಾ ಎರಡು ಲೇಯರ್‌ಗಳ ಮಾಸ್ಕ್ ನೀಡಲಾಗುತ್ತಿದೆ. ಈ ಬಗ್ಗೆ ವಿಚಾರಿಸಿದಾಗ, ಎಕ್ಸ್‌ಪೋಸ್ ಆಗುವವರಿಗೆ ಮಾತ್ರ ನೀಡುತ್ತೇವೆ, ಉಳಿದವರಿಗೆ ಇಲ್ಲ. ಸ್ಟಾಕ್ ಖಾಲಿಯಾಗಿದ್ದು, ಸೀಮಿತ ಸಂಖ್ಯೆಯಲ್ಲಿ ಬಂದಿರುವುದನ್ನು ವಿತರಿಸಲಾಗುತ್ತಿದೆ ಎನ್ನುತ್ತಾರೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಕಾರ್ಯ ನಿರ್ವಹಿಸುವುದು ಹೇಗೆ ಎನ್ನುವುದು ಅವರ ಪ್ರಶ್ನೆ.
ಮಾನಸಿಕ ಒತ್ತಡ: ವೈದ್ಯರಿಗೆ ಕೋವಿಡ್ ಬಾಧಿಸಿರುವುದು ಹೊರಗಡೆ ಪ್ರಚಾರವಾಗುತ್ತಿದ್ದಂತೆ ನಮ್ಮನ್ನು ಪರಿಚಿತರು ನೋಡುವ ದೃಷ್ಟಿಯೇ ಬದಲಾಗಿದೆ. ಅಂಗಡಿಗಳಿಗೂ ಹೋಗುವಂತಿಲ್ಲ. ಪಕ್ಕದ ಮನೆಯವರೂ ನಮ್ಮನ್ನು ಮಾತನಾಡಿಸುತ್ತಿಲ್ಲ. ಮನೆಯಲ್ಲಿ ಮಕ್ಕಳು, ಹಿರಿಯರು, ಅನಾರೋಗ್ಯ ಪೀಡಿತರಿದ್ದಾರೆ, ಹಾಗಾಗಿ ಕೆಲಸಕ್ಕೆ ಹೋಗಬೇಡ ಎನ್ನುತ್ತಿದ್ದಾರೆ. ಇದನ್ನು ಆಸ್ಪತ್ರೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ನಮ್ಮನ್ನು ಆಸ್ಪತ್ರೆಯಲ್ಲೇ ಕ್ವಾರಂಟೈನ್ ಮಾಡಿ, ನಾವು ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ದಾದಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.
ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಅಗತ್ಯ ರಜೆಯನ್ನೂ ನೀಡುತ್ತಿಲ್ಲ. ಇಂಥ ಸಂದರ್ಭದಲ್ಲಿ ರಜೆ ಮಾಡುವುದು ನೈತಿಕವಲ್ಲ ಎಂಬ ಉತ್ತರ ಬರುತ್ತದೆ. ಆದರೆ ಸರ್ಕಾರಿ ಸೇವೆಯಲ್ಲಿರುವವರು ಎಂದಿನಂತೆ ರಜೆ ತೆಗೆದುಕೊಳ್ಳುತ್ತಿದ್ದಾರೆ ಎಂದೂ ದೂರಿದ್ದಾರೆ.
ಆತಂಕದಲ್ಲಿ ಶುಶ್ರೂಷಕಿಯರು ಲೇಡಿಗೋಷನ್‌ನ ಮೂವರು, ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಇಬ್ಬರು ವೈದ್ಯರಲ್ಲಿ ಕರೊನಾ ಪಾಸಿಟಿವ್ ಬಂದಿದೆ. ಆ ವೈದ್ಯರ ಮೂಲಕ ಇತರ ರೋಗಿಗಳು, ಶುಶ್ರೂಷಕಿಯರಿಗೂ ಸೋಂಕು ಹರಡಿರುವ ಸಾಧ್ಯತೆ ಇದೆ. ಇಂಥ ಪರಿಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಾದರೆ ಒಂದು ಮಹಡಿ ಅಥವಾ ವಿಭಾಗವನ್ನು ಸೀಲ್‌ಡೌನ್ ಮಾಡಲಾಗುತ್ತಿದೆ. ಆದರೆ ಇದುವರೆಗೆ ವೆನ್ಲಾಕ್, ಲೇಡಿಗೋಷನ್‌ನಲ್ಲಿ ಇಂಥ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ವಿಭಾಗವನ್ನು ಸ್ಯಾನಿಟೈಸ್ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸಿಬ್ಬಂದಿಯ ಗಂಟಲು ದ್ರವ ಮಾದರಿ ಪರೀಕ್ಷೆಯನ್ನೂ ನಡೆಸಿಲ್ಲ. ರೋಗ ಲಕ್ಷಣ ಇದ್ರೆ ಹೇಳಿ, ಇಲ್ಲದಿದ್ದರೆ ಪರೀಕ್ಷೆ ಮಾಡುವುದಿಲ್ಲ ಎನ್ನುತ್ತಾರೆ. ಹಿರಿಯ ಅಧಿಕಾರಿಗಳ ಛೇಂಬರ್‌ಗೆ ನಮ್ಮನ್ನು ಹೋಗಲು ಬಿಡುತ್ತಿಲ್ಲ, ಅವರಿಗೆ ಸೋಂಕು ತಗುಲುವ ಭೀತಿ ಇದೆ. ಆದರೆ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ ಎನ್ನುತ್ತಾರೆ ಶುಶ್ರೂಷಕಿಯರು.
ಐಸಿಎಂಆರ್ ಮಾರ್ಗಸೂಚಿ ಪ್ರಕಾರ ವೈದ್ಯರು, ದಾದಿಯರು ಮತ್ತು ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಅಗತ್ಯ ಪಿಪಿಇ ಕಿಟ್, ಎನ್ 95 ಮಾಸ್ಕ್ ಮುಂತಾದ ಸಲಕರಣೆ ಒದಗಿಸಲಾಗುತ್ತಿದೆ. ಈ ಕುರಿತು ನಿರ್ಲಕ್ಷೃ ವಹಿಸಿಲ್ಲ. - ಡಾ.ಸವಿತಾ, ಅಧೀಕ್ಷಕಿ, ಲೇಡಿಗೋಷನ್ ಆಸ್ಪತ್ರೆ, ಮಂಗಳೂರು