

ಯಾದಗಿರಿ: ಜಿಲ್ಲಾದ್ಯಂತ ಕರೊನಾ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಪ್ರತಿದಿನ ಬೆಳಗ್ಗಿನ ಜಾವ 4ರಿಂದ ಸಂಜೆ 4ರವರೆಗೆ ಮಾತ್ರ ದಿನಸಿ, ತರಕಾರಿ, ಹಣ್ಣು ಹಂಪಲು ಅಂಗಡಿಗಳು ತೆರೆಯಬೇಕು. ಇತರ ಯಾವುದೇ ಅಂಗಡಿ ಮುಂಗಟ್ಟು ತೆರೆಯುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕೂಮರ್ಾರಾವ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ವೈರಸ್ಗೆ ಒಬ್ಬ ಮೃತಪಟ್ಟು ಹಾಗೂ ನಾಲ್ವರಲ್ಲಿ ಸೋಂಕು ಕಂಡುಬಂದಿದ್ದು ಮತ್ತು ನೆರೆ ರಾಜ್ಯಗಳ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದರಿಂದ 14ರ ಮಧ್ಯರಾತ್ರಿವರೆಗೆ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ವಿಧಿಸಿ ಆದೇಶಿಸಿದ್ದಾರೆ. ಪೆಟ್ರೋಲ್ ಬಂಕ್ಗಳು ಖಾಸಗಿ ವಾಹನಗಳಿಗೆ ಬೆಳಗ್ಗೆ 4ರಿಂದ ಸಂಜೆ 4ರವರೆಗೆ ಮಾತ್ರ ಇಂಧನ ವಿತರಿಸಬೇಕು. ಸರಕು ಸಾಗಣೆ ವಾಹನಗಳಿಗೆ ಈ ಆದೇಶ ಅನ್ವಯಿಸದು ಎಂದು ಹೇಳಿದ್ದಾರೆ.
ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ಖರೀದಿಗೆ ಪ್ರತಿ ಮನೆಯಿಂದ ಒಬ್ಬ ಆರೋಗ್ಯವಂತ ವ್ಯಕ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಅವಸರ ಪಡದೆ, ಗುಂಪುಗೂಡದೇ ವ್ಯಕ್ತಿಯಿಂದ ವ್ಯಕ್ತಿಗೆ ಕನಿಷ್ಠ ಒಂದು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಮಯ ನಿಗದಿಪಡಿಸಿದ್ದರೂ ನಿಷೇಧಾಜ್ಞೆ ಸಮಯದಲ್ಲಿ ವಿನಾಕಾರಣ ತಿರುಗಾಟ, ಗುಂಪುಗೂಡುವಿಕೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಮಳಿಗೆಗಳ ಮಾಲೀಕರು ತಮ್ಮ ಅಂಗಡಿ ಮುಂದೆ ಜನಸಂದಣಿ ಸೇರದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತು ಮಾಡುವ ಬಗ್ಗೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿ ಮಾಲೀಕರನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ಈ ಆದೇಶವು ಆಸ್ಪತ್ರೆ ಸೇವೆ, ಪಶು ಆಸ್ಪತ್ರೆ, ಔಷಧ ಅಂಗಡಿ, ಸಿಲಿಂಡರ್, ದಿನಪತ್ರಿಕೆಗಳ ವಿತರಣೆ, ಬ್ಯಾಂಕ್, ಎಟಿಎಂ, ಗೃಹ ಬಳಕೆ ಇಂಧನ ಟ್ಯಾಂಕರ್, ಪಡಿತರ ವಿತರಣೆ ಹಾಗೂ ಶವ ಸಂಸ್ಕಾರ ಇತ್ಯಾದಿ ಸೇವೆಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಆದೇಶದ ಪರಿಣಾಕಾರಿ ಅನುಷ್ಠಾನಕ್ಕೆ ಜಿಲ್ಲಾ ಮಟ್ಟದ ಪ್ರಮುಖ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಶಸ್ತ್ರಚಿಕಿತ್ಸಕ, ಸಹಾಯಕ ಆಯುಕ್ತರು, ಪ್ರಾದೇಶಿಕ ಸಾರಿಗೆ ಅಧಿಕಾರಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ಜಿಲ್ಲೆಯ ಎಲ್ಲ ತಹಸೀಲ್ದಾರ್, ಸ್ಥಳೀಯ ಸಂಸ್ಥೆಗಳು, ಯಾದಗಿರಿ, ಶಹಾಪುರ, ಸುರಪುರ ತಾಪಂ ಇಒ, ಲೀಡ್ ಬ್ಯಾಂಕ್ ವ್ಯವಸ್ಥಾಪಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರು ಹಾಗೂ ಯಾದಗಿರಿ, ಶಹಾಪುರ ಮತ್ತು ಸುರಪುರ ತಾಲೂಕು ಆರೋಗ್ಯಾಧಿಕಾರಿಗಳು ಆದೇಶ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಲ್ಲಿ ಜವಾಬ್ದಾರರಾಗಿರುತ್ತಾರೆ.