ಮಧ್ಯಪ್ರಾಚ್ಯ ದೇಶಗಳಲ್ಲೂ ಭಯ

middle east new
Published on

ಡಾ.ಮುಕುಂದ್ ನಾಯಕ್ ಮಸ್ಕತ್

ಕರೊನಾ ವೈರಸ್ ಕರ್ನಾಟಕ ಹಾಗೂ ಕೇರಳದ ಕರಾವಳಿಯ ಜನರು ಉದ್ಯೋಗ ನಿಮಿತ್ತ ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ಮಧ್ಯಪ್ರಾಚ್ಯ ದೇಶಗಳನ್ನೂ ಬಿಟ್ಟಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲೂ ವೈರಸ್ ವ್ಯಾಪಿಸುತ್ತಿದೆ. ಕತಾರ್, ಕುವೈತ್, ಬಹರೈನ್‌ಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಣಿಸಿಕೊಂಡಿದೆ...

ಪಶ್ಚಿಮ ಏಷ್ಯಾದ ಒಮಾನ್‌ನ ರಾಜಧಾನಿ ಮಸ್ಕತ್‌ನಲ್ಲಿ 22 ಜನರಲ್ಲಿ ಪತ್ತೆಯಾಗಿದೆ. ನಿಖರ ಸಂಖ್ಯೆ ಇನ್ನಷ್ಟೇ ಲಭ್ಯವಾಗಬೇಕಾಗಿದೆ. ಇರಾನ್ ಯಾತ್ರೆಗೆ ತೆರಳಿ ಪಾಪಸಾದ ವ್ಯಕ್ತಿಯಲ್ಲಿ ಮೊದಲ ಬಾರಿ ಕರೊನಾ ಕಂಡುಬಂದಿದ್ದು, ಅವರನ್ನು ಮನೆಯಲ್ಲೇ ಕಡ್ಡಾಯವಾಗಿ ಉಳಿಸಿ ಶುಶ್ರೂಷೆ ನೀಡಿದ ಬಳಿಕ ಗುಣಮುಖರಾಗಿದ್ದಾರೆ. ಬಳಿಕ ಇರಾನ್ ಮತ್ತು ಇಟಲಿ ಯಾತ್ರೆ ಮುಗಿಸಿ ಸ್ವದೇಶಕ್ಕೆ ಮರಳಿದ ಪ್ರಜೆಗಳಲ್ಲಿ ಕರೊನಾ ಪತ್ತೆಯಾಗಿದೆ. ಒಮಾನ್‌ನಲ್ಲಿ ಇರಾನ್ ಅಥವಾ ಇಟಲಿಯ ಪರಿಸ್ಥಿತಿ ಇಲ್ಲ. ಆದರೆ ಭಯದ ವಾತಾವರಣವಂತೂ ಇದೆ.

ಒಂದು ವಾರದಲ್ಲಿ ಮಸ್ಕತ್‌ನ ಚಿತ್ರಣವೇ ಬದಲಾಗಿದೆ. ಪ್ರತೀ ದಿನ ಜನರಿಂದ ತುಂಬಿರುತ್ತಿದ್ದ ಮಾಲ್‌ಗಳು ಸದ್ಯ ಜನರಿಲ್ಲದೆ ಭಣ ಗುಡುತ್ತಿವೆ. ಜನ ಮನೆಯಿಂದ ಹೊರಬರುತ್ತಿಲ್ಲ. ಹೊರ ಬರುವವರು ಕೂಡ ಮಾಸ್ಕ್ ಧರಿಸಿಯೇ ಓಡಾಡುತ್ತಿದ್ದಾರೆ. ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಕೆಲವು ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಕೆಲವು ತರಗತಿಗಳ ಪರೀಕ್ಷೆ ಮುಂದೂಡಲಾಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿ ಹಾಗೂ ಸಮ್ಮೇಳನಗಳು ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿದೆ.

ಪೆಟ್ರೋಲ್ ಮಾರುಕಟ್ಟೆ ತಲ್ಲಣ

ಆಸ್ಪತ್ರೆಯ ಎಲ್ಲ ವಿಭಾಗ ಹಾಗೂ ಹೋಟೆಲ್‌ಗಳಲ್ಲಿ ಸ್ಯಾನಿಟೈಸರ್ ಇಡುವಂತೆ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್‌ಗಳ ಕೊರತೆ ಎದುರಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ಕರೊನಾ ಪೀಡಿತರಿಗೆ ಪ್ರತ್ಯೇಕ ವಾರ್ಡ್ ಕಾದಿರಿಸಲು ಸರ್ಕಾರ ಆದೇಶ ಹೊರಡಿಸಿದೆ. ಕರೊನಾ ಆತಂಕ ನಡುವೆಯೇ ತೈಲ ಬೆಲೆ ದಿಢೀರ್ ಕುಸಿತದ ಬಿಸಿ ಕೊಲ್ಲಿ ರಾಷ್ಟ್ರವನ್ನು ಅತಿಯಾಗಿ ತಟ್ಟಿದೆ. ಕೊಲ್ಲಿ ರಾಷ್ಟ್ರಗಳ ಆರ್ಥಿಕತೆ ಮುಖ್ಯವಾಗಿ ಪೆಟ್ರೋಲ್ ಮಾರುಕಟ್ಟೆಯನ್ನೇ ಅವಲಂಬಿಸಿದೆ. 29 ವರ್ಷದ ಹಿಂದಿನ ಪೆಟ್ರೋಲ್ ದರ ಈಗ ದಾಖಲಾಗುತ್ತಿದೆ. ಅಂದರೆ 1991ರಲ್ಲಿ ಕೊಲ್ಲಿ ಯುದ್ದ ಸಂದರ್ಭ ಪೆಟ್ರೋಲ್ ದರ ಕುಸಿದಿತ್ತು. ಇತರ ದೇಶಗಳಂತೆ ಒಮಾನ್ ಶೇರು ಮಾರುಕಟ್ಟೆಯೂ ಕುಸಿತ ಕಂಡಿದೆ.

ಮಕ್ಕಾ, ಮದೀನವೂ ಬಂದ್

ಒಮಾನ್‌ನಲ್ಲಿ ಉದ್ಯೋಗ ಹಾಗೂ ಇತರ ವಿವಿಧ ಕಾರಣಗಳಿಂದ 6.5 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಜನ ಗಮನಾರ್ಹ ಸಂಖ್ಯೆಯಲ್ಲಿದ್ದು, ಪ್ರಸ್ತುತ ಸಂಕಷ್ಟದ ಪರಿಸ್ಥಿತಿ ಎದುರಿಸಿದ್ದಾರೆ. ಸರ್ಕಾರ ದೀರ್ಘ ರಜೆ ಘೋಷಿಸಿದ್ದರೂ ಸ್ವದೇಶಕ್ಕೆ ಭೇಟಿ ನೀಡುವುದು ಸುಲಭವಿಲ್ಲ. ಲಭ್ಯ ಮಾಹಿತಿ ಪ್ರಕಾರ ಇಲ್ಲಿ ಕರೊನಾ ಸೋಂಕಿನಿಂದ ಯಾರೂ ಮೃತಪಟ್ಟಿಲ್ಲ. ಸೋಂಕಿತರು ಗುಣಮುಖರಾಗುತ್ತಿದ್ದಾರೆ. ದಿನಂಪ್ರತಿ ಸುಮಾರು ಒಂದು ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡುವ ಮುಸ್ಲಿಮರ ಪುಣ್ಯ ಕ್ಷೇತ್ರಗಳಾದ ಮಕ್ಕಾ, ಮದೀನ ಪೂರ್ಣ ಮುಚ್ಚಲಾಗಿದೆ. ಮಸೀದಿ ಹಾಗೂ ಮಂದಿರಗಳಿಗೆ ಭೇಟಿ ನೀಡುವವರ ಸಂಖ್ಯೆಯೂ ಇಳಿಮುಖವಾಗಿದೆ. ಇಲ್ಲಿ ಎರಡು ದೇವಸ್ಥಾನಗಳಿವೆ.

ಕುವೈತ್‌ನಲ್ಲಿ ಆನ್‌ಲೈನ್ ತರಗತಿ ಡಾ.ಶಶಿಕಿರಣ್ ಪ್ರಭು ಕುವೈತ್ ಕುವೈತ್‌ನಲ್ಲಿ ಫೆ.25ರಿಂದ ಐದು ದಿನ ರಾಷ್ಟ್ರೀಯ ದಿನದ ಸಾಲು ರಜೆಗಳ ಸಂಭ್ರಮದಲ್ಲಿ ಇರುವ ಸಂದರ್ಭದಲ್ಲೇ ಕರೊನಾ ಆತಂಕ ಎದುರಾಗಿದೆ. ಆ ಕಾಲದಲ್ಲಿ ಇಡೀ ಕುವೈತ್‌ನ ಜನ ಪಾರ್ಕ್, ಕಡಲು ಕಿನಾರೆ ಸಹಿತ ಹೊಸ ಊರುಗಳಿಗೆ ಸುತ್ತಾಟ, ಪಾರ್ಟಿ ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಈ ಸಂದರ್ಭದಲ್ಲೇ ಕರೊನಾ ವೈರಸ್ ಪ್ರಕರಣ ದಾಖಲಾಗಿದ್ದು. ಕುವೈತ್‌ನಲ್ಲಿ ಅದಾಗಲೇ ಕರೊನಾ ಬಗ್ಗೆ ನಿಗಾ ಇಟ್ಟಿದ್ದು ಮೊದಲ ಮೂರು ಪ್ರಕರಣ ವರದಿಯಾದ ಮರುದಿನ ಪೀಡಿತರ ಸಂಖ್ಯೆ ಹೆಚ್ಚಾಯಿತು. ಸರ್ಕಾರ ಶಾಲೆಗಳಿಗೆ ರಜೆ ಘೋಷಿಸಿ ಜನ ಗುಂಪು ಗುಂಪಾಗಿ ಸೇರದಂತೆ ಆದೇಶಿಸಿತು. ಕುವೈತ್ ಸಚಿವಾಲಯ ಕಾಲಕಾಲಕ್ಕೆ ಸುರಕ್ಷಾ ಕ್ರಮಗಳ ಬಗ್ಗೆ ಜನರಿಗೆ ಸೂಕ್ತ ಸಲಹೆ ನೀಡುತ್ತ ಬಂತು. ಭಾರತೀಯ ಶಾಲೆಗಳ 1-8 ತರಗತಿವರೆಗಿನ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಲಾಯಿತು. ಸುರಕ್ಷೆ ದೃಷ್ಟಿಯಿಂದ ಕುವೈತ್‌ನ ಭಾರತೀಯ ಶಾಲೆಗಳು ತರಗತಿಗಳ ಬದಲು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಶಿಕ್ಷಕ- ಶಿಕ್ಷಕಿಯರು ಮನೆಯಲ್ಲೇ ಕುಳಿತು ಬೋಧಿಸುತ್ತಿದ್ದು, ಇದರ ಪ್ರಯೋಜನವನ್ನು ಮಕ್ಕಳು ಪಡೆಯುತ್ತಿದ್ದಾರೆ. ಈ ನಡುವೆ ಸಿಬಿಎಸ್‌ಇ ಪರೀಕ್ಷೆಗಳು ನಡೆಯುತ್ತಿದ್ದು ಮಕ್ಕಳ ಹೆತ್ತವರು ಶಾಲೆಯ ಹೊರಗೆ ಗುಂಪುಗೂಡದಂತೆ ಸರ್ಕಾರ ಆದೇಶಿಸಿತು. ಆದರೆ ಶಾಲೆಗಳ ಹೊರಗೆ ಜನ ಗುಂಪು ಗುಂಪಾಗಿ ಸೇರುತ್ತಿರುವ ಬಗ್ಗೆ ದೂರ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ನಿಲ್ಲಿಸಿದ್ದು ಸಿಬಿಎಸ್‌ಇಯ 10ನೇ ತರಗತಿಯ ಎರಡು ಪರೀಕ್ಷೆಗಳು ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ಮುಂದಿನ ಆದೇಶ ಬರುವ ತನಕ ತಡೆಹಿಡಿಯಲಾಗಿದೆ.

05ಒಮಾನ್ ನಗರದಲ್ಲಿ ಇಲ್ಲಿವರೆಗೆ 20-25 ಕರೊನಾ ಪ್ರಕರಣಗಳು ವರದಿಯಾಗಿದ್ದು, ಒಂದು ಸಾವು ಪ್ರಕರಣವಿದೆ. ಕರೊನಾಗಾಗಿ ದೊಡ್ಡ ಮಟ್ಟದಲ್ಲಿ ನಿರ್ಬಂಧ ವಿಧಿಸಿಲ್ಲ, ಆದರೆ ದೊಡ್ಡ ಕಾರ್ಯಕ್ರಮಗಳಿಗೆ ತಡೆ ಇದೆ. ಕ್ರೀಡಾಕೂಟ, ಮದುವೆ ಮುಂದೂಡಲು ಸೂಚಿಸಿದ್ದಾರೆ. ಸಿನಿಮಾ ಥಿಯೇಟರ್‌ಗಳು ಬಂದ್ ಇವೆ. ದೈನಂದಿನ ಬಳಕೆಯ ವಸ್ತುಗಳ ಖರೀದಿಗಾಗಿ ಮಾಲ್‌ಗಳು ತೆರೆದಿವೆ. ಇಲ್ಲಿ ಆತಂಕ ಪಡುವ ಸ್ಥಿತಿ ಇಲ್ಲ. ಹರೀಶ್ ಶೆಟ್ಟಿ, ಒಮಾನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net