

ಪಡುಬಿದ್ರಿ: ಲೋಕಕ್ಕೆ ಅಂಟಿರುವ ಕರೊನಾ ಕಂಟಕ ಹೊಸ ಸಂವತ್ಸರ ಪಕ್ಷಾರಂಭದ ನಂತರದಲ್ಲಿ ಸಂಪೂರ್ಣ ಹತೋಟಿಗೆ ಬರಲಿದೆ ಎಂಬ ಅಭಯವನ್ನು ಕಾಪು ಮಾರಿಯಮ್ಮ ದೇವಿ ಭಕ್ತರಿಗೆ ನೀಡಿದ್ದು, ಅದರೊಂದಿಗೆ ಸರ್ಕಾರದ ಮುಂಜಾಗ್ರತೆಗಳನ್ನು ಪಾಲಿಸಿ ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆಯನ್ನೂ ನೀಡಿದ್ದಾಳೆ.
ಸುಗ್ಗಿ ಮಾರಿಪೂಜೆ ಅಂಗವಾಗಿ ಮಂಗಳವಾರ ರಾತ್ರಿ ಮಾರಿಯಮ್ಮ ದೇವಿ ದರ್ಶನಾವೇಶದಲ್ಲಿ ಅಭಯ ವಾಕ್ಯ ಪ್ರದಾನಿಸಿದ್ದು, ವಿಶ್ವ ವ್ಯಾಪ್ತಿಯಾಗಿ ಹರಡಿರುವ ಮಾರಕ ಸೋಂಕಿನಿಂದ ಬಾಧಿತರಾಗಿರುವ ಮನುಕುಲವನ್ನು ಜಗನ್ಮಾತೆಯಾಗಿ ಸಲಹಿ ಕಾಪಾಡುತ್ತೇನೆ. ಈ ಬಗ್ಗೆ ಭಕ್ತರು ಆತಂಗೊಳ್ಳುವ ಅಗತ್ಯವಿಲ್ಲ. ಸಾನ್ನಿಧ್ಯದಲ್ಲಿ ಸನ್ನಿಹಿತಳಾಗಿ ಲೋಕಕ್ಕೆ ಬಂದಿರುವ ಕಂಟಕವನ್ನು ಉಪಶಮನ ಮಾಡುವೆ ಎಂದು ಅಭಯ ನೀಡಿದ್ದಾಳೆ.
ಪ್ರಜೆಗಳ ಸಲಹುವ ಸರ್ಕಾರದ ನಿರ್ಧಾರದಂತೆ, ಭಕ್ತರ ಅನುಕೂಲಕ್ಕಾಗಿ ಸರಳತೆಯಿಂದ ನಡೆದಿರುವ ಕಾಲಾವಧಿ ಉತ್ಸವವನ್ನು ಭಂಡಾರಕ್ಕೆ ಸ್ವೀಕೃತ ಮಾಡಿಕೊಳ್ಳುತ್ತಾ, ಇಂದಿನ ವೈಭವದ ಸೇವೆಯನ್ನು ಮುಂದಿನ ದಿನಗಳಲ್ಲಿ ಭಕ್ತರ ಮೂಲಕ ಪಡೆದುಕೊಳ್ಳುತ್ತೇನೆ. ಅಷ್ಟರವರೆಗೆ ಊರು, ಸೀಮೆ, ರಾಜ್ಯ, ರಾಷ್ಟ್ರವನ್ನು ಸಲಹಿ ಕಾಪಾಡುತ್ತೇನೆ. ಯಾರೂ ಭೀತರಾಗದಿರಿ ಎಂಬ ನುಡಿಯೊಂದಿಗೆ ಆಡಳಿತ ಮಂಡಳಿಗೆ ಪ್ರಸಾದ ನೀಡಿ, ಕಟ್ಟುಕಟ್ಟಳೆಯ ದರ್ಶನ ಸಮಾಪನಗೊಂಡಿತು.
ಕಾಪು ಶ್ರೀ ಹೊಸ ಮಾರಿಗುಡಿ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೆಗ್ಡೆ, ಮಾಜಿ ಸದಸ್ಯರಾದ ಜಗದೀಶ್ ಬಂಗೇರ, ಸುಧಾಮ ಶೆಟ್ಟಿ, ಚಂದ್ರಶೇಖರ ಅಮೀನ್, ಅರ್ಚಕ ಶ್ರೀನಿವಾಸ ತಂತ್ರಿ, ಸಿಬ್ಬಂದಿ ಹಾಗೂ ನೌಕರ ವೃಂದದವರು ಉಪಸ್ಥಿತರಿದ್ದರು.
ಹಳೇ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಯಲ್ಲೂ ಕರೊನಾ ಭಯದಿಂದ ಭಕ್ತರೆಲ್ಲರೂ ಹೊರಬರುವಂತೆ ತಾಯಿಯ ಅನುಗ್ರಹ ದೊರಕಿದ್ದು, ಅದಕ್ಕೆ ಸಂಬಂಧಪಟ್ಟು ಸರ್ಕಾರದ ನೀತಿ ನಿಯಮವಾಳಿಗಳ ಕಟ್ಟುನಿಟ್ಟಿನ ಪಾಲನೆಗೆ ಮುಂದಾಗುವಂತೆ ಎಚ್ಚರಿಕೆಯೂ ದೊರಕಿದೆ.
ಹಳೇ ಮಾರಿಗುಡಿಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಸಾದ್ ಶೆಣೈ, ಮೂರನೇ ಮಾರಿಗುಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ಬಂಗೇರ, ಸಮಿತಿಯ ಸದಸ್ಯರು, ಅರ್ಚಕರು ಮತ್ತು ಸೀಮಿತ ಸಂಖ್ಯೆಯ ನೌಕರ ವರ್ಗದವರು ಹಾಜರಿದ್ದರು.