

ಯಲಬುರ್ಗಾ: ಕರೊನಾ ಭೀತಿ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಹಸೀಲ್ದಾರ್ ಶ್ರೀಶೈಲ ತಳವಾರ ಗುರುವಾರ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಮಾತನಾಡಿ, ಕರೊನಾ ವೈರಸ್ ಭೀತಿಯಿಂದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದು, ಮುಂಜಾಗ್ರತೆ ವಹಿಸಬೇಕು. ಪ್ರತ್ಯೇಕ ವಾರ್ಡ್ ಕಾಯ್ದಿರಿಸಬೇಕು ಎಂದು ಸೂಚಿಸಿ, ತಾಲೂಕಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಕೈಗೊಂಡ ಕ್ರಮದ ಬಗ್ಗೆ ಸಿಬ್ಬಂದಿಯನ್ನು ಕೇಳಿದರು.
ವೈದ್ಯಾಧಿಕಾರಿ ಡಾ.ಸಂಗನಬಸಪ್ಪ ಮಾತನಾಡಿ, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸೇರಿ ಕರೊನಾ ತಡೆಗಟ್ಟುವ ಕುರಿತು ಸಭೆ ನಡೆಸಲಾಗಿದೆ. ಕರೋನಾ ಹೆಲ್‌ಡೆಸ್ಕ್‌ನ್ನು ಆಸ್ಪತ್ರೆ ಮುಂಭಾಗ ಸ್ಥಾಪಿಸಲಾಗಿದೆ. ನೆಗಡಿ, ಕೆಮ್ಮು ಹಾಗೂ ಜ್ವರ ಇರುವಂತಹ ರೋಗಿಗಳಿಗೆ ಪ್ರತ್ಯೇಕ ಹೊರನೋಂದಣಿ ವಿಭಾಗ ಸ್ಥಾಪಿಸಿ, ಅವರಿಗಾಗಿಯೇ ಪ್ರತ್ಯೇಕ ವೈದ್ಯಾಧಿಕಾರಿಯನ್ನು ನಿಯೋಜಿಸಲಾಗಿದೆ. ಐಸೋಲೇಶನ್ ವಾರ್ಡ್ ಸ್ಥಾಪಿಸಲಾಗಿದೆ. ಆಸ್ಪತ್ರೆಯಲ್ಲಿ ಜನಸಂದಣಿ ಇರುವ ಕಡೆ, ಮಾಹಿತಿ ಇರುವ ಭಿತ್ತಿಪತ್ರ ಅಂಟಿಸಲಾಗಿದೆ. ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಸೂಚನಾ ಫಲಕಗಳನ್ನು ಅಂಟಿಸಲಾಗಿದೆ. ಕೈ ತೊಳೆಯುವ ವಿಧಾನವನ್ನು ಪ್ರಾತ್ಯಕ್ಷಿಕ ವಾಗಿ ಆಸ್ಪತ್ರೆಯಲ್ಲಿ ತೋರಿಸಲಾಗುವುದು ತಹಸೀಲ್ದಾರ್‌ಗೆ ಮಾಹಿತಿ ನೀಡಿದರು. ಗ್ರೇಡ್ 2 ತಹಸೀಲ್ದಾರ್ ನಾಗಪ್ಪ ಸಜ್ಜನ್, ಡಾ.ವಿವೇಕಾನಂದ, ಡಾ.ಶೇಖರ ಭಜಂತ್ರಿ, ಸಿಬ್ಬಂದಿಗಳಾದ ಅರುಣ ಕುಮಾರ, ಶರಣು, ಸಂಗಪ್ಪ, ಅನಿತಾ ಇತರರಿದ್ದರು.