ಇತರ ಕಾಯಿಲೆಗಳಷ್ಟು ಮಾರಣಾಂತಿಕವಲ್ಲ ಕರೊನಾ ವೈರಸ್‌

carona logo (2)
Published on

ಹರೀಶ್ ಮೋಟುಕಾನ ಮಂಗಳೂರು

ಕರೊನಾ ವೈರಸ್‌ಗೆ ಭಯ ಪಡುವ ಅಗತ್ಯವಿಲ್ಲ. ಹರಡದಂತೆ ಮುಂಜಾಗ್ರತೆ ಅವಶ್ಯ. ಇದು ಇತರ ಕಾಯಿಲೆಗಳಷ್ಟು ಮಾರಣಾಂತಿಕವಲ್ಲ. ಬೇರೆ ಕಾಯಿಲೆಗಳಿದ್ದರೆ ಮಾತ್ರ ಮರಣ ಸಾಧ್ಯತೆ ಹೆಚ್ಚು. ಆದರೆ ಕ್ಯಾನ್ಸರ್, ಟಿಬಿ ಕಾಯಿಲೆಗಳಿಗೆ ಹೋಲಿಸಿದರೆ ಕರೊನಾ ಸೋಂಕಿತರು ಬೇಗ ಗುಣಮುಖರಾಗುತ್ತಿದ್ದಾರೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಡುತ್ತಿದ್ದಾರೆ.

ಕರ್ನಾಟಕದಲ್ಲಿ ಜು.8ರ ತನಕ 28,877 ಮಂದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಈ ಪೈಕಿ 11,876 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಬೇರೆ ಕಾಯಿಲೆ ಇದ್ದವರು ಕರೊನಾ ಸೋಂಕಿಗೊಳಗಾಗಿ 470 ಮಂದಿ ಮೃತಪಟ್ಟಿದ್ದಾರೆ. ಆದರೆ ಇದು ರಾಜ್ಯದ ಜನಸಂಖ್ಯೆಗೆ ಹೋಲಿಸಿದಾಗ ಗಂಭೀರ ಸ್ವರೂಪದಲ್ಲಿ ಹರಡಿಲ್ಲ. ದೇಶದಲ್ಲೂ ಕೈ ಮೀರಿ ಹೋಗುವಷ್ಟರ ಮಟ್ಟಿಗೆ ಸೋಂಕು ಹರಡಿಲ್ಲ ಎಂದು ಮಂಗಳೂರು ಕೆಎಂಸಿ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಚಕ್ರಪಾಣಿ ಹೇಳುತ್ತಾರೆ.

ದೇಶದಲ್ಲಿ ಕ್ಯಾನ್ಸರ್, ಟಿಬಿ, ಏಡ್ಸ್ ಮೊದಲಾದ ಮಾರಣಾಂತಿಕ ಕಾಯಿಲೆಗಳಿಗೆ ಪ್ರತಿವರ್ಷ ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಕೂಡ ಈ ಸಾಲಿನಲ್ಲಿ ಸೇರ್ಪಡೆಗೊಂಡಿದೆ. ವಾರ್ಷಿಕ 3 ಲಕ್ಷಕ್ಕಿಂತಲೂ ಅಧಿಕ ಮಂದಿ ಇಂತಹ ಮಾರಣಾಂತಿಕ ಕಾಯಿಲೆಗಳಿಂದ ಮರಣ ಹೊಂದುತ್ತಿದ್ದಾರೆ. ಅದಕ್ಕಿಂತ ಮಿಗಿಲಾಗಿ ದೇಶದಲ್ಲಿ ಅಪಘಾತಗಳಿಂದ ಮೃತರಾಗುತ್ತಿರುವವರ ಸಂಖ್ಯೆ 1.50 ಲಕ್ಷ. ರಾಜ್ಯದಲ್ಲೇ 10 ಸಾವಿರಕ್ಕಿಂತಲೂ ಅಧಿಕ ಮಂದಿ ಅಪಘಾತದಲ್ಲಿ ಸಾವಿಗೀಡಾಗುತ್ತಿರುವುದು ಅಂಕಿ ಅಂಶಗಳಿಂದ ಗೊತ್ತಾಗಿದೆ. ಆದರೆ ಕರೊನಾ ವೈರಸ್‌ನಿಂದ ಅಷ್ಟರ ಮಟ್ಟಿಗೆ ಸಾವು ಸಂಭವಿಸಿಲ್ಲ. ಹಾಗಾಗಿ ಯಾರೂ ಗಾಬರಿ ಪಡುವ ಅಗತ್ಯವಿಲ್ಲ ಎಂದು ವೈದ್ಯರು ವಿಶ್ಲೇಷಿಸುತ್ತಾರೆ.

ಯಾವ ರೋಗದ ಪ್ರಮಾಣ ಎಷ್ಟು?:

ರಾಜ್ಯದಲ್ಲಿ 2018ರಲ್ಲಿ 20,084 ಮಂದಿಯಲ್ಲಿ ಕ್ಯಾನ್ಸರ್ ಪತ್ತೆಯಾಗಿತ್ತು. ಬೆಂಗಳೂರಿನಲ್ಲಿ ಪ್ರತಿ 1 ಲಕ್ಷ ಜನರಿಗೆ 126 ಕೇಸ್‌ಗಳು ಪತ್ತೆಯಾಗುತ್ತಿವೆ. ಟಿಬಿ 2018ರಲ್ಲಿ 83,094 ಮಂದಿಯಲ್ಲಿ, 2019ರಲ್ಲಿ 91,703 ಮಂದಿಯಲ್ಲಿ ಪತ್ತೆಯಾಗಿದೆ. ಕಳೆದ ವರ್ಷ ಒಂದೇ ವಾರದಲ್ಲಿ 10,150 ಟಿಬಿ ಪ್ರಕರಣ ಪತ್ತೆಯಾಗಿತ್ತು. ದೇಶದಲ್ಲಿ 2019ರಲ್ಲಿ 1,68,122 ಮಂದಿಯಲ್ಲಿ ಕ್ಯಾನ್ಸರ್ ಹಾಗೂ 24,04,815 ಮಂದಿಯಲ್ಲಿ ಟಿಬಿ ಪತ್ತೆಯಾಗಿತ್ತು. 2018ರಲ್ಲಿ ಕರ್ನಾಟಕದಲ್ಲಿ ಟಿಬಿ ರೋಗದಲ್ಲಿ ಮರಣ ಹೊಂದಿದವರ ಸಂಖ್ಯೆ ದೇಶದಲ್ಲೇ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿತ್ತು. 30ರಿಂದ 74 ವರ್ಷದವರು ಶೇ.16ರಷ್ಟು ಮಂದಿ ಹೃದಯಾಘಾತ ಹಾಗೂ ಸ್ಟ್ರೋಕ್‌ಗಳಿಗೆ ಒಳಗಾಗುತ್ತಿದ್ದಾರೆ. ಈ ರೋಗಗಳಿಗೆ ಹೋಲಿಸಿದರೆ ಕರೊನಾ ಅಷ್ಟು ಮಾರಣಾಂತಿಕವಲ್ಲ, ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ವೈರಸ್ ಹರಡುವುದನ್ನು ಸಂಪೂರ್ಣ ತಡೆಗಟ್ಟಬಹುದಾಗಿದೆ ಎನ್ನುತ್ತಾರೆ.

2019ರಲ್ಲಿ ಮೃತಪಟ್ಟವರ ಮಾಹಿತಿ: ಹೃದಯಾಘಾತ 16,283 ಅಪಘಾತ 13,945 ಎಚ್‌ಐವಿ 10,000 ಕ್ಯಾನ್ಸರ್ 8,503 ಟಿಬಿ ಕಾಯಿಲೆ 6,350

ಕರೊನಾ ವೈರಸ್ ಹರಡುವ ಬಗ್ಗೆ ಭಯ ಬೇಡ, ಆದರೆ ಮುನ್ನೆಚ್ಚರಿಕೆ ವಹಿಸಿ. ಲಾಕ್‌ಡೌನ್ ಮುನ್ನಾ ದಿನ ಮಾರುಕಟ್ಟೆ, ಸೂಪರ್ ಮಾರ್ಕೆಟ್‌ಗಳಲ್ಲಿ ಗುಂಪು ಸೇರಬೇಡಿ. ಮಾಸ್ಕ್ ಧಾರಣೆ ಮಾಡಿ, ಅಂತರ ಕಾಯ್ದುಕೊಂಡು ಕರೊನಾ ಜತೆ ಬದುಕುವುದನ್ನು ಕಲಿಯಬೇಕಾಗಿದೆ. ಇತರ ಮಾರಣಾಂತಿಕ ಕಾಯಿಲೆಗಳಿಗೆ ಹೋಲಿಸಿದಾಗ ಇದು ಕಡಿಮೆ ಅವಧಿಯಲ್ಲಿ ವಾಸಿಯಾಗುವ ಕಾಯಿಲೆ. - ಡಾ.ಹಂಸರಾಜ್ ಆಳ್ವ, ಆಡಳಿತ ನಿರ್ದೇಶಕ, ವಿನಯ ಆಸ್ಪತ್ರೆ, ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net