ಕರೊನಾ ವೈರಸ್ ಆತಂಕ ಬೇಡ, ಜಾಗ್ರತೆ ಇರಲಿ

corona
Published on

ಮಂಗಳೂರು: ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಕರೊನಾ ವೈರಸ್ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾರ್ವಜನಿಕರು ಯಾವುದೇ ಭಯ, ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಆದರೆ, ಮುಂಜಾಗ್ರತಾ ಕ್ರಮ ಅಳವಡಿಸಿಕೊಳ್ಳುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿ, ರಾಜ್ಯದಲ್ಲಿ ಕರೊನಾ ಬಾಧಿತರಾದ ಪ್ರಕರಣ ಇದುವರೆಗೆ ದಾಖಲಾಗಿಲ್ಲ. ಪಕ್ಕದ ಕೇರಳ ರಾಜ್ಯದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿಯೂ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕರು ಸಂಶಯ ನಿವಾರಿಸಲು, ಮಾಹಿತಿ ಹಾಗೂ ನೆರವಿಗೆ ಆರೋಗ್ಯ ಇಲಾಖೆಯ ಸಹಾಯವಾಣಿ 104ಕ್ಕೆ ಕರೆ ಮಾಡಬಹುದು ಎಂದು ತಿಳಿಸಿದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಶೀತ, ಜ್ವರ, ತಲೆ ನೋವಿನಿಂದ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಫಿಲಿಪೈನ್ಸ್ ದಂಪತಿಯಲ್ಲಿ ಕರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಜ್ವರ ಕಡಿಮೆಯಾದ ಹಿನ್ನೆಲೆಯನ್ನು ಬುಧವಾರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಸತೀಶ್ಚಂದ್ರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಂಧ್ಯಾ, ಡಾ.ಬಿ.ವಿ.ರಾಜೇಶ್, ವಿವಿಧ ಇಲಾಖಾಧಿಕಾರಿಗಳು, ವಿಮಾನ ನಿಲ್ದಾಣ, ರೈಲ್ವೆ, ಎನ್‌ಎಂಪಿಟಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚೀನಾದಿಂದ ಬರುವವರ ಮೇಲೆ ನಿಗಾ: ಜಿಲ್ಲೆಗೆ ಪ್ರಮುಖ ಪ್ರವೇಶ ಸ್ಥಳವಾಗಿರುವ ವಿಮಾನ ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ವಿಶೇಷವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿದೆ. ಚೀನಾದಿಂದ ಮಂಗಳೂರಿಗೆ ನೇರ ವಿಮಾನ ಯಾನ ಇಲ್ಲದಿರುವುದರಿಂದ ವೈರಸ್ ಹರಡುವ ಆತಂಕವಿಲ್ಲ. ಆದಾಗ್ಯೂ ವಿಶೇಷವಾಗಿ ಕೆಲದಿನ ಹಿಂದೆ ಚೀನಾದಿಂದ ಜಿಲ್ಲೆಗೆ ಬಂದ ಇಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಯಾವುದೇ ರೋಗ ಲಕ್ಷಣ ಅವರಲ್ಲಿ ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು. ಫೆ.4ರಂದು ನವಮಂಗಳೂರು ಬಂದರಿಗೆ ವಿದೇಶಿ ಪ್ರವಾಸಿಗರ ಹಡಗಿನಲ್ಲಿ ಬಂದಿದ್ದ ಚೀನಾದ ಮೂವರು ನಾಗರಿಕರಿಗೆ ಹಡಗಿನಿಂದ ಹೊರಗೆ ಬರಲು ಅವಕಾಶ ನೀಡಿಲ್ಲ ಎಂದು ಎನ್‌ಎಂಪಿಟಿ ಅಧಿಕಾರಿಗಳು ತಿಳಿಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಕರೊನಾ ವೈರಸ್ ಚಿಕಿತ್ಸೆಗಾಗಿ 10 ವಿಶೇಷ ಹಾಸಿಗೆ ಸಿದ್ಧಪಡಿಸಿಡಲಾಗಿದೆ. ದಿನದ 24 ಗಂಟೆಯೂ ಇದರ ನಿರ್ವಹಣೆಗೆ ವೈದ್ಯರಿಗೆ, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. - ಡಾ. ರಾಮಕೃಷ್ಣ ರಾವ್, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net