

ಮೈಸೂರು: ಕರೊನಾ ವೈರಸ್ ದಿನದಿಂದ ದಿನಕ್ಕೆ ತನ್ನ ಪ್ರಭಾವ ಬೀರುತ್ತಿದ್ದು, ಸಮುದಾಯದಲ್ಲಿಯೂ ವ್ಯಾಪಿಸತೊಡಗಿದೆ. ಹೀಗಾಗಿ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಂಟೇನ್ಮೆಂಟ್ ಜೋನ್‌ಗಳನ್ನು ಮಾಡಲಾಗಿದ್ದು, ವೈರಸ್ ಹರಡುವಿಕೆ ತಡೆಗಟ್ಟಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.
ಕಂಟೇನ್ಮೆಂಟ್ ಜೋನ್‌ಗಳನ್ನು ಆಯಾ ರಸ್ತೆಗೆ ಮಾತ್ರ ಸೀಮಿತ ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್, ಸ್ಲಂ ವಲಯಗಳಲ್ಲಿ ಭಿನ್ನವಾಗಿ ಕಂಟೇನ್ಮೆಂಟ್ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗಾರರಿಗೆ ಜಿಲ್ಲಾಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ವೈರಸ್ ಹರಡುವುದನ್ನು ತಡೆಗಟ್ಟಲು ಜನರ ಸಹಕಾರ ಅಗತ್ಯ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಅನಾವಶ್ಯಕವಾಗಿ ಮನೆಯಿಂದ ಹೊರ ಬರುವುದು, ಇತರ ಜನರೊಂದಿಗೆ ಬೆರೆಯುವುದು, ಸಭೆ, ಸಮಾರಂಭ, ಮದುವೆ, ಧಾರ್ಮಿಕ ಕಾರ್ಯಕ್ರಮಗಳಿಂದ ದೂರು ಉಳಿಯಬೇಕು ಎಂದು ಸಲಹೆ ನೀಡಿದ್ದಾರೆ.
ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ವೈರಸ್ ಹರಡುವಿಕೆ ಪ್ರಮಾಣ ಹೆಚ್ಚಾಗುತ್ತಿದ್ದು, ಈಗ ಸವಾಲಿನ ಸಮಯ ಇದಾಗಿದೆ. ಸಾಮೂಹಿಕ ಹರಡುವಿಕೆಯನ್ನು ತಡೆಯಲು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಜನರು ನಮಗೆ ಸಹಕಾರ ನೀಡಬೇಕಿದೆ ಎಂದು ಅವರು ಕೋರಿದರು. ಕೋವಿಡ್ ಆಸ್ಪತ್ರೆ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಸಂಖ್ಯೆ ಹೆಚ್ಚಾದರೆ ಈಗಿರುವ ಕೋವಿಡ್ ಆಸ್ಪತ್ರೆಯ 250 ಬೆಡ್‌ಗಳ ಜತೆಗೆ ಇಎಸ್‌ಐ ಆಸ್ಪತ್ರೆಯಲ್ಲಿ 100 ಹಾಸಿಗೆಯ ವಾರ್ಡ್ ಸಿದ್ಧ ಮಾಡಲಾಗುವುದು. ಅಲ್ಲದೆ ಮಂಡಕಳ್ಳಿ ಬಳಿಯ ಕೆಎಸ್‌ಒಯು ಕಟ್ಟಡಲ್ಲೂ ಕರೊನಾ ಚಿಕಿತ್ಸೆ ನೀಡಲು ಸಿದ್ಧಗೊಳಿಸಲಾಗುತ್ತಿದೆ. ಜತೆಗೆ 500 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಇನ್ನೊಂದು ವಾರದಲ್ಲಿ ಸಿದ್ಧವಾಗಲಿದೆ ಎಂದು ತಿಳಿಸಿದರು.
ದಕ್ಷಿಣ ವಲಯ ಐಜಿಪಿ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಸೇರಿದಂತೆ ಕ್ವಾರಂಟೈನ್‌ನಲ್ಲಿದ್ದ 58 ಪೊಲೀಸರ ವರದಿ ನೆಗೆಟಿವ್ ಬಂದಿದ್ದು, ಎಲ್ಲರೂ ನಿರಾಳರಾಗಿದ್ದಾರೆ. ಸೋಂಕು ದೃಢಪಟ್ಟಿದ್ದ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಯ ಪ್ರಥಮ, ದ್ವಿತೀಯ ಸಂಪರ್ಕದಲ್ಲಿ ಅಕಾರಿಗಳು, ಇನ್ನಿತರ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಿ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಪ್ರಯೋಗಾಲಯದಿಂದ ವರದಿ ಬಂದಿದ್ದು, ಯಾರಿಗೂ ಕರೊನಾ ವೈರಸ್ ಇಲ್ಲ. ಇದರಿಂದ ಪೊಲೀಸರಲ್ಲಿಯೂ ಇದ್ದ ಆತಂಕ ದೂರವಾಗಿದೆ.
ಪೊಲೀಸ್ ಅಕಾರಿಗಳು ನಿರಾಳ
ಜಿಲ್ಲೆಯಲ್ಲಿ ಐವರಿಗೆ ದೃಢ: ಜಿಲ್ಲೆಯಲ್ಲಿ ಶುಕ್ರವಾರ ಐವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಒಬ್ಬ ಸೋಂಕಿತ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 225ಕ್ಕೆ ಏರಿಕೆಯಾಗಿದ್ದು, 96 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 128 ಜನರು ಗುಣಮುಖರಾಗಿದ್ದು, ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.
ತೀವ್ರ ಉಸಿರಾಟದ ತೊಂದರೆಯಿಂದಾಗಿ 43 ವರ್ಷದ ವ್ಯಕ್ತಿಗೆ ಪಾಸಿಟಿವ್ ಆಗಿದೆ. ತಮಿಳುನಾಡಿನಿಂದ ವಾಪಸ್ ಆಗಿದ್ದ 29 ವರ್ಷದ ಮಹಿಳೆ, ಮಂಡ್ಯಕ್ಕೆ ತೆರಳಿದ್ದ 1 ವರ್ಷದ ಹೆಣ್ಣು ಮಗು, ರಾಜಸ್ಥಾನದಿಂದ ಹಿಂದಿರುಗಿದ್ದ 24 ವರ್ಷದ ಯುವಕ, ಚಾಮರಾಜನಗರಕ್ಕೆ ತೆರಳಿದ್ದ 40 ವರ್ಷದ ವ್ಯಕ್ತಿ ಸೋಂಕಿಗೆ ತುತ್ತಾಗಿದ್ದಾರೆ.