ಕರೊನಾ ಭೀತಿ, ಮಾಸ್ಕ್‌ಗಳಿಗೆ ಡಿಮಾಂಡ್

corona
Published on

ಮಂಗಳೂರು: ಕರೊನಾ ವೈರಸ್ ಭೀತಿ ಹೆಚ್ಚುತ್ತಿರುವಂತೆಯೇ ಮಂಗಳೂರಿನಲ್ಲಿ ದಿಢೀರ್ ಮುಖಕವಚಗಳಿಗೆ(ಮಾಸ್ಕ್) ಬೇಡಿಕೆ ಹೆಚ್ಚಿದೆ. ಇದೀಗ ಸ್ಟಾಕ್ ಕೂಡ ಖಾಲಿ ಆಗಿದೆ. ಕರೊನಾ ಚೀನಾದಲ್ಲಿ ಪ್ರಸರಿಸುತ್ತಿರುವಾಗಲೇ ಮಂಗಳೂರಿನಲ್ಲೂ ಜನ ಮಾಸ್ಕ್ ಕೇಳಲು ಶುರು ಮಾಡಿದ್ದರು. ಈಚೆಗೆ ಕೇರಳ, ಕರ್ನಾಟಕದಲ್ಲಿ ಕರೊನಾ ಪೊಸಿಟಿವ್ ಪ್ರಕರಣಗಳು ಬಂದ ಬಳಿಕ ಏಕಾಏಕಿ ಡಿಮಾಂಡ್ ಏರಿದೆ.

ಕೆಲವು ಕಡೆಗಳಲ್ಲಿ ಕಡಿಮೆ ದರದ ಮಾಸ್ಕ್‌ಗಳನ್ನು 20, 30 ರೂ. ಹೆಚ್ಚು ಹಣಕ್ಕೆ ಮಾರಾಟ ಮಾಡಿರುವ ಬಗ್ಗೆಯೂ ದೂರುಗಳು ಬಂದಿವೆ. ಕೆಲವು ಮಂದಿ ಸಾವಿರಗಟ್ಟಲೆ ಮಾಸ್ಕ್ ಕೇಳುತ್ತಿದ್ದಾರೆ, ಅದು ತಮ್ಮ ಕಂಪನಿಯ ನೌಕರರಿಗೆ ಇರಬಹುದು, ಅಥವಾ ಹೆಚ್ಚು ಬೆಲೆಗೆ ಮಾರಾಟ ಮಾಡುವ ದುರುದ್ದೇಶದಲ್ಲೂ ಇರಬಹುದು, ಏನೇ ಇದ್ದರೂ ನಮ್ಮಲ್ಲಿ ಸ್ಟಾಕ್ ಇಲ್ಲದ ಕಾರಣ ನೀಡಲಾಗಿಲ್ಲ ಎಂದು ನಗರದ ಪ್ರಮುಖ ಮೆಡಿಕಲ್‌ವೊಂದರ ಸೂಪರ್‌ವೈಸರ್ ತಿಳಿಸಿದರು.

ಮೆಡಿಕಲ್ ಸರ್ಟಿಫಿಕೆಟ್ ಕಡ್ಡಾಯ

ಕರೊನಾ ವಿವಿಧೆಡೆಗೆ ಹಬ್ಬುತ್ತಿರುವಂತೆಯೇ ಈಗ ಭಾರತದಿಂದ ಬರುವವರ ಮೇಲೆಯೂ ವಿದೇಶಗಳಲ್ಲಿ ಎಚ್ಚರಿಕೆ ವಹಿಸಲಾಗುತ್ತಿದೆ. ಅದರ ಭಾಗವಾಗಿ ಈಗಾಗಲೇ ಕುವೈಟ್‌ನಲ್ಲಿ ಭಾರತ ಸೇರಿದಂತೆ ಬೇರೆ ಬೇರೆ ರಾಷ್ಟ್ರಗಳಿಂದ ಪ್ರವಾಸಿಗರ ಮೇಲೆ ವಿಶೇಷ ನಿಗಾ ಇರಿಸಲಾಗಿದ್ದು, ಮಾ.8ರ ಬಳಿಕ ಕಡ್ಡಾಯ ವೈದ್ಯಕೀಯ ಪ್ರಮಾಣಪತ್ರ ತರುವಂತೆ ಸೂಚಿಸಲಾಗಿದೆ. ಕುವೈಟ್‌ನ ನಾಗರಿಕ ವಿಮಾನಯಾನ ನಿರ್ದೇಶಕರು ಮಾ.3ರಂದು ಕಡ್ಡಾಯ ಆದೇಶ ಮಾಡಿದ್ದು, ಭಾರತ, ಫಿಲಿೈನ್ಸ್, ಬಾಂಗ್ಲಾದೇಶ, ಈಜಿಪ್ಟ್, ಸಿರಿಯಾ, ಅಝೆರ್‌ಬೈಜಾನ್, ಟರ್ಕಿ, ಶ್ರೀಲಂಕಾ, ಜಾರ್ಜಿಯಾ ಮತ್ತು ಲೆಬನಾನ್‌ನಿಂದ ಮಾ.8ರ ಬಳಿಕ ಕುವೈಟ್‌ಗೆ ಬರುವ ಪ್ರವಾಸಿಗರು ಕಡ್ಡಾಯ ವೈದ್ಯಕೀಯ ಪ್ರಮಾಣಪತ್ರ ಹೊಂದಿರಬೇಕು ಮತ್ತು ಆ ಪ್ರವಾಸಿಗ ಕರೊನಾ ಮುಕ್ತ ವ್ಯಕ್ತಿ ಎಂದು ದೃಢೀಕರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಕುವೈಟ್ ರಾಯಭಾರ ಕಚೇರಿ ಅನುಮೋದಿಸಿದ ಆರೋಗ್ಯ ಕೇಂದ್ರಗಳಿಂದ ಪಿಸಿಆರ್ ಪ್ರಮಾಣ ಪಡೆಯಬೇಕು. ಬಳಿಕ ಮುಂಬೈ, ದೆಹಲಿಯಲ್ಲಿರುವ ರಾಯಭಾರಿ ಕಚೇರಿಯಲ್ಲಿ ದೃಢಪಡಿಸಿ ಬಳಿಕವೇ ತೆರಳಬೇಕು ಎಂದು ಸಚಿವಾಲಯ ಆದೇಶದಲ್ಲಿ ತಿಳಿಸಿದೆ.

ಎಲ್ಲದಕ್ಕೂ ಕರೊನಾ ತಪಾಸಣೆ ಬೇಕಿಲ್ಲ

ದ.ಕ.ಜಿಲ್ಲೆಯ ಕೆಲವು ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ವರ ಬಂದರೂ, ಕರೊನಾ ಪರೀಕ್ಷೆ ನಡೆಸುವಂತೆ ಶಿಕ್ಷಕರು ಒತ್ತಡ ಹೇರುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅಂತಹ ಕ್ರಮ ಕೈಗೊಳ್ಳದಂತೆ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸೂಚಿಸಿದ್ದಾರೆ.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೊನಾ ರೋಗ ಸಂಬಂಧ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯಕೀಯ ಕಾಲೇಜುಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕರೊನಾ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಅದರಂತೆ ಕ್ರಮ ಕೈಗೊಳ್ಳಲು ಅವರು ಸೂಚಿಸಿದರು. ಪರೀಕ್ಷೆ ಹತ್ತಿರ ಇರುವುದರಿಂದ ಯಾವುದೇ ಅನಗತ್ಯ ತಪಾಸಣೆಯಿಂದ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸದಂತೆ ಅವರು ತಿಳಿಸಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಈಗಾಗಲೇ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಂಶಯಾಸ್ಪದ ರೋಗಿಗಳನ್ನು ನೇರವಾಗಿ ವೆನ್‌ಲಾಕ್‌ಗೆ ಅಲ್ಲಿಂದಲೇ ಆಂಬುಲೆನ್ಸ್ ಮೂಲಕ ಕಳುಹಿಸಿಕೊಡಬೇಕು ಎಂದರು.

ಕರೊನಾ ತಪಾಸಣೆ ಹಾಗೂ ಚಿಕಿತ್ಸೆ ಬಗ್ಗೆ ಆಸ್ಪತ್ರೆ ಹಾಗೂ ವೈದ್ಯರು ಸಮಾನವಾದ ಚಿಕಿತ್ಸೆ ಹಾಗೂ ಪರಿಶೀಲನೆ ನಡೆಸಲು ತರಬೇತಿ ನೀಡುವಂತೆ ಆರೋಗ್ಯ ಇಲಾಖೆಗೆ ನಿರ್ದೇಶಿಸಿದರು. ಜಿಲ್ಲೆಯ ಎಲ್ಲ ಆಸ್ಪತ್ರೆಗಳು ವಿವಿಧ ಜ್ವರಗಳ ಪ್ರಕರಣಗಳ ಬಗ್ಗೆ ಆರೋಗ್ಯ ಇಲಾಖೆಗೆ ಪ್ರತೀ ನಿತ್ಯ ವರದಿ ನೀಡಬೇಕೆಂದು ಅವರು ಸೂಚಿಸಿದರು. ಜಿಲ್ಲೆಯಲ್ಲಿ ಮುಖಕವಚ(ಮಾಸ್ಕ್) ಕೊರತೆ ಬಗ್ಗೆ ಮಾಹಿತಿ ಬಂದಿದೆ. ಗಮನಹರಿಸಲು ಔಷಧ ನಿಯಂತ್ರಕರಿಗೆ ಸೂಚಿಸಿದರು.

ಮಾಸ್ಕ್ ಖರೀದಿಗೆ ಸೂಚನೆ

ಉಡುಪಿ: ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಶಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಎನ್ 95 ಮಾಸ್ಕ್ ಸೇರಿದಂತೆ ಹೆಚ್ಚುವರಿ ಸುರಕ್ಷತಾ ಉಪಕರಣಗಳ ಖರೀದಿಗೆ ಅವಶ್ಯಕತೆಯಿದ್ದಲ್ಲಿ ಕೂಡಲೇ ಟೆಂಡರ್ ಕರೆದು ಖರೀದಿ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕರೊನಾ ವೈರಸ್ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.

ಕರೊನಾ ವೈರಸ್ ಶಂಕಿತರಿಗೆ ಚಿಕಿತ್ಸೆ ನೀಡಲು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 5 ಬೆಡ್‌ಗಳ ಕೊಠಡಿ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ 3 ಬೆಡ್‌ಗಳ ಕೊಠಡಿ ಕಾಯ್ದಿರಿಸಲಾಗಿದೆ. ಜಿಲ್ಲಾದ್ಯಂತ ವ್ಯಾಪಕ ಅರಿವು ಕಾಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಮಾಹಿತಿ ನೀಡಿದರು.

ಸಹಾಯವಾಣಿ ಸಂಖ್ಯೆ 104

ವೈರಸ್ ಪೀಡಿತ ವ್ಯಕ್ತಿಯಿಂದ ಕೆಮ್ಮ, ಸೀನು, ಅಥವಾ ಕಲುಷಿತ ಕೈಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತವೆ. ಈ ರೋಗಕ್ಕೆ ನಿಖರ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಕಂಡುಬಂದಲ್ಲಿ ತ್ವರಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಆರೋಗ್ಯ ಕೇಂದ್ರ ಅಥವಾ ಉಚಿತ ಆರೋಗ್ಯ ಸಹಾಯವಾಣಿ 104 ಗೆ ಕರೆ ಮಾಡಬಹುದು ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net