

ಬೆಂಗಳೂರು: ಕರೊನಾ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೊಲೀಸರಿಗೆ ವೈರಸ್ ಆತಂಕ ಮನೆ ಮಾಡಿದೆ. ಬಾಗಲಕೋಟೆಯ ಕರ್ತವ್ಯನಿರತ 39 ವರ್ಷದ ಪೊಲೀಸ್ಗೆ ಕರೊನಾ ಸೋಂಕು ಇರುವುದು ದೃಢವಾದ ಬೆನ್ನಲ್ಲೇ ಖಾಕಿ ಪಡೆಯಲ್ಲಿ ಮತ್ತಷ್ಟು ಭಯ ಹೆಚ್ಚಾಗಿದೆ.
ನಗರದ 250 ಹೊಯ್ಸಳ ವಾಹನಗಳನ್ನು ತುರ್ತು ಚಿಕಿತ್ಸೆ ಸೇವೆಗೆ ಬಳಸುವಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಡಯಾಲಿಸಿಸ್, ಕಿಮೋಥೆರಪಿ ಸೇರಿ ಇನ್ನಿತರ ತುರ್ತು ಚಿಕಿತ್ಸೆ ಅಗತ್ಯವಿರುವ ಹಲವಾರು ಮಂದಿ ನಮ್ಮ-100ಗೆ ಕರೆ ಮಾಡುತ್ತಿದ್ದಾರೆ. ಮಾಹಿತಿ ಬಂದ ಕೂಡಲೇ ಹತ್ತಿರದ ಹೊಯ್ಸಳ ಸಿಬ್ಬಂದಿ, ಕರೆ ಮಾಡಿದ ವಿಳಾಸಕ್ಕೆ ಹೋಗಿ ರೋಗಿಯನ್ನು ಕರೆದುಕೊಂಡು ಸಂಬಂಧಪಟ್ಟ ಆಸ್ಪತ್ರೆಗೆ ದಾಖಲಿಸುತ್ತಿದ್ದಾರೆ. ಪೊಲೀಸರ ಸೇವೆಗೆ ಜನರಲ್ಲಿಯೂ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ. ಆದರೆ, ಬಾಗಲಕೋಟೆಯಲ್ಲಿ ಪೊಲೀಸ್ಗೆ ಕರೊನಾ ಸೋಂಕು ಹರಡಿದ ಪರಿಣಾಮ ಭಯ ಆರಂಭವಾಗಿದೆ.
ಕಂಟ್ರೋಲ್ ರೂಂನಿಂದ ಸೂಚನೆ ಬಂದ ಕೂಡಲೇ ವಿಳಾಸಕ್ಕೆ ರೋಗಿಯನ್ನು ಕರೆದುಕೊಂಡು ಆಸ್ಪತ್ರೆಗೆ ಸೇರಿಸುತ್ತಿದ್ದೇವೆ. ರೋಗಿಗೆ ಯಾವ ರೀತಿಯ ರೋಗ ಬಂದಿದೆ ಎಂಬ ಮಾಹಿತಿ ನಮಗಿರುವುದಿಲ್ಲ. ಪ್ರಶ್ನೆ ಮಾಡುವುದು ಕಷ್ಟಸಾಧ್ಯವಾಗಿದೆ. ಒಂದು ವೇಳೆ ಆ ರೋಗಿಗೆ ಕರೊನಾ ಸೋಂಕು ಇದ್ದರೂ ಆತನಿಗೆ ಗೊತ್ತಿರುವುದಿಲ್ಲ, ನಮಗೂ ತಿಳಿಯುವುದಿಲ್ಲ ಎಂಬುದು ಪೊಲೀಸರ ಆತಂಕ. ಹೊಯ್ಸಳ ಸಿಬ್ಬಂದಿಗೆ ಕೇವಲ ಕೈಗವಸು, ಮಾಸ್ಕ್, ಸ್ಯಾನಿಟೈಸರ್ ಮಾತ್ರ ನೀಡಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕರೊನಾದಿಂದ ಸ್ವಯಂರಕ್ಷಣೆ ಮಾಡಿಕೊಳ್ಳಬೇಕಾದರೆ ಪಿಪಿಇ (ವೈಯಕ್ತಿಕ ಸುರಕ್ಷತಾ ಸಲಕರಣೆ) ಅತ್ಯಗತ್ಯ. ಅದನ್ನು ಪೊಲೀಸರಿಗೆ ವಿತರಿಸಿಲ್ಲ. ಇಂತಹ ಸಂಕಷ್ಟದಲ್ಲಿ ರೋಗಿಯನ್ನು ಹೊಯ್ಸಳದಲ್ಲಿ ಕರೆದುಕೊಂಡು ಹೋಗುವುದು ಎಷ್ಟು ಸುರಕ್ಷಿತ ಎಂಬುದು ಪೊಲೀಸರ ಪ್ರಶ್ನೆಯಾಗಿದೆ.
ಆಂಬುಲೆನ್ಸ್ ಸಿಬ್ಬಂದಿಗೆ ಪಿಪಿಇ ಮತ್ತು ರೋಗಿಯನ್ನು ಕರೆದುಕೊಂಡು ಹೋದ ಮೇಲೆ ಸ್ಯಾನಿಟೈಸರ್ನಿಂದ ಶುದ್ಧ ಮಾಡಲಾಗುತ್ತಿದೆ. ಆದರೆ, ಈ ಸೌಲಭ್ಯ ಹೊಯ್ಸಳದಲ್ಲಿಲ್ಲ.
ಪೊಲೀಸರು ಎಷ್ಟು ಸುರಕ್ಷಿತ: ಸಾರ್ವಜನಿಕರ ನಡುವೆ ಸೇವೆ ಸಲ್ಲಿಸುತ್ತಿರುವ ಪೊಲೀಸರ ಆರೋಗ್ಯ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಇಲಾಖೆಯಲ್ಲಿ ಹುಟ್ಟಿಕೊಂಡಿದೆ. ಕ್ವಾರಂಟೈನ್, ಕೆಂಪು ವಲಯ, ಆಸ್ಪತ್ರೆಗಳು, ಹೊಯ್ಸಳ, ವಾಹನ ತಪಾಸಣೆ ಹೀಗೆ ಹಲವು ಕಡೆಗಳಲ್ಲಿ ಸದಾಕಾಲ ಸಾರ್ವಜನಿಕರ ನಡುವೆ ನಮ್ಮ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಲ್ಲಿ ಒಬ್ಬರಿಗೆ ಸೋಂಕು ತಗುಲಿದರೆ ಎಲ್ಲೆಡೆ ಹರಡುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಪೊಲೀಸ್ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
ಸೌಲಭ್ಯ ಒದಗಿಸಲು 5 ಕೋಟಿ ರೂ. ಬಿಡುಗಡೆ
ಕರೊನಾ ತುರ್ತು ಸೇವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಕಿಟ್ ಸೇರಿ ಹಲವು ಸೌಲಭ್ಯ ಒದಗಿಸಲು ರಾಷ್ಟ್ರೀಯ ತುರ್ತು ವಿಪತ್ತು ನಿರ್ವಹಣಾ ನಿಧಿಯಿಂದ ಪೊಲೀಸ್ ಇಲಾಖೆಗೆ ಸರ್ಕಾರ 5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕರ್ತವ್ಯನಿರತ ಸಿಬ್ಬಂದಿಗೆ ವಿಶೇಷ ಡ್ರಸ್, ಕೈಗವಸು, ಮಾಸ್ಕ್, ಸ್ಯಾನಿಟೈಸರ್ ಸೇರಿ ಹಲವು ಪರಿಕರ ಖರೀದಿ ಮಾಡಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸೂಕ್ತ ಮುಂಜಾಗ್ರತಾ ಕ್ರಮ ಅತ್ಯಗತ್ಯ
ಕರ್ತವ್ಯನಿರತ ಪೊಲೀಸರು ಮಾಸ್ಕ್, ಕೈಗವಸು ಬಳಸಬೇಕು. ಸಮವಸ್ತ್ರ ಪ್ರತಿದಿನ ಒಗೆಯಬೇಕು. ಮನೆಗೆ ಹೋದ ತಕ್ಷಣ ಸ್ನಾನ ಮಾಡಬೇಕು. ಹೆಚ್ಚು ನೀರು ಸೇವಿಸಬೇಕು. ಕಣ್ಣು, ಮೂಗು, ಬಾಯಿ ಮುಟ್ಟಿ ಕೊಳ್ಳಬಾರದು ಎಂದು ಇಂದಿರಾನಗರ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅನ್ಸರ್ ಅಹ್ಮದ್ ಸಲಹೆ ನೀಡಿದ್ದಾರೆ.
ಸರ್ಜಿಕಲ್ ಮಾಸ್ಕ್, ಕೈಗವಸು ಮತ್ತು ಸ್ಯಾನಿಟೈಸರ್ ನೀಡಿದ್ದಾರೆ. ತಜ್ಞರ ಪ್ರಕಾರ ಹೊಯ್ಸಳದಲ್ಲಿ ರೋಗಿಗಳ ಸೇವೆ, ವಾಹನ ತಪಾಸಣೆ ಹೆಚ್ಚು ಅಪಾಯಕಾರಿ. | ಪೊಲೀಸ್ ಅಧಿಕಾರಿ
ಗೋವಿಂದರಾಜು ಚಿನ್ನಕುರ್ಚಿ