

ಚಿಕ್ಕಮಗಳೂರು: ಬಾಸಾಪುರ ಮತ್ತು ಬಗ್ಗುವಳ್ಳಿಯಲ್ಲಿ ಪಶುಪಾಲನಾ ಇಲಾಖೆ ಕಟ್ಟಡ ಪೂರ್ಣಗೊಂಡರೂ ಉದ್ಘಾಟನೆಯಾಗಿಲ್ಲ. ಕಟ್ಟಡಗಳು ಹಾಳಾದರೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಪಂ ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್ ಎಚ್ಚರಿಸಿದರು.
ಶುಕ್ರವಾರ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಪಶುಪಾಲನೆ ಇಲಾಖೆಯಿಂದ ಆಯ್ಕೆ ಮಾಡುವ ಫಲಾನುಭವಿಗಳಿಗೆ ಸಮಗ್ರ ಮಾಹಿತಿ ನೀಡಿ ಬ್ಯಾಂಕ್ ಮೂಲಕ ಸಾಲ ಸೌಲಭ್ಯ ಕೊಡಿಸಬೇಕು. ಕರೊನಾ ನಿಯಂತ್ರಣಕ್ಕೆ ಪ್ರತಿಯೊಂದು ಇಲಾಖೆಯೂ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು
ಸದಸ್ಯ ಕೆ.ಆರ್.ಪ್ರಭಾಕರ್ ಮಾತನಾಡಿ, ಅಂಗವಿಕಲ ಇಲಾಖೆಯಿಂದ ನೀಡುವ ವಾಹನಗಳನ್ನು ಎಲ್ಲ ತಾಲೂಕು ಕೇಂದ್ರಗಳಲ್ಲಿ ತಕ್ಷಣ ನೀಡಬೇಕು. ಮಲೆನಾಡು ಭಾಗದಲ್ಲಿ ಗ್ರಾಪಂನಿಂದ ಮನೆ ಕಟ್ಟಲು ಇದುವರೆಗೂ ಅನುದಾನ ನೀಡಿಲ್ಲ. ಮಳೆ ಆರಂಭವಾಗುತ್ತಿದ್ದು, ತಕ್ಷಣ ಅನುದಾನ ನೀಡದಿದ್ದರೆ ಈವರೆಗೂ ನೀಡಿದ ಮನೆಗಳು ಸಂಪೂರ್ಣ ನಾಶವಾಗುತ್ತವೆ. ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲಿಸಿ ಅನುದಾನ ನೀಡುವಂತೆ ಸೂಚಿಸಿದರು.