

ಬೆಂಗಳೂರು: ರಾಜ್ಯದ ಜನತೆಗೆ ಶುಭ ಸುದ್ದಿ. ಬಹು ಕಾತರದಿಂದ ನಿರೀಕ್ಷಿಸುತ್ತಿರುವ ಕರೊನಾ ಸೋಂಕು ನಿವಾರಕ ಲಸಿಕೆ ಶನಿವಾರ ಅಥವಾ ಭಾನುವಾರ ರಾಜ್ಯಕ್ಕೆ ತಲುಪಲಿವೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಈ ವಿಷಯ ಶುಕ್ರವಾರ ತಿಳಿಸಿದರು. ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿರುವ ಮಾದರಿ ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕೇಂದ್ರದ ಆರೋಗ್ಯ ಸಚಿವರು ನೀಡಿದ ಮಾಹಿತಿ ಪ್ರಕಾರ ಕರ್ನಾಟಕಕ್ಕೆ ನಾಳೆ ಅಥವಾ ನಾಡಿದ್ದು 13.90 ಲಕ್ಷ ಕರೊನಾ ಲಸಿಕೆ ರವಾನೆಯಾಗುವ ಸಾಧ್ಯತೆಗಳಿವೆ. ಈ ಲಸಿಕೆ ನೀಡುವುದಕ್ಕಾಗಿ ವೈದ್ಯರು ಸೇರಿದಂತೆ 1.30 ಲಕ್ಷ ಆರೋಗ್ಯ ಸೇವಾ ಕಾರ್ಯಕರ್ತರನ್ನು ಗುರುತಿಸಿ ನೋಂದಾಯಿಸಲಾಗಿದೆ. ವೈದ್ಯಕೀಯ, ದಂತ ವೈದ್ಯಕೀಯ ಒಳಗೊಂಡು ಇನ್ನೂ ಯಾರಾದರೂ ಬಿಟ್ಟು ಹೋಗಿದ್ದರೆ ತಕ್ಷಣ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಡಾ.ಕೆ.ಸುಧಾಕರ್ ಮನವಿ ಮಾಡಿದರು.
ಹೆಸರು ನೋಂದಣಿ ವಿಚಾರದಲ್ಲಿ ಬಹು ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ನೀಡಿ ಜಾಗೃತಿ ಮೂಡಿಸಲಾಗಿದೆ. ಲಸಿಕೆ ನೀಡುವ ಆದ್ಯತಾಪಟ್ಟಿಯಲ್ಲಿ ಕರೊನಾ ಮುಂಚೂಣಿ ಯೋಧರು, 60 ವರ್ಷ ದಾಟಿದ ಸೋಂಕಿಗೆ ಒಳಗಾಗುವ ಸಾಧ್ಯತೆಯುಳ್ಳವರು ಇದ್ದಾರೆ ಎಂದು ವಿವರಿಸಿದರು.
ಲಸಿಕೆ ಪೂರ್ವಾಭ್ಯಾಸ
ರಾಜ್ಯದ 163 ಮಾದರಿ ಲಸಿಕೆ ಕೇಂದ್ರಗಳಲ್ಲಿ ಕರೊನಾ ಲಸಿಕೆ ಪೂರ್ವಾಭ್ಯಾಸದ ವ್ಯವಸ್ಥೆಯಾಗಿದೆ. ಆ ಮೂಲಕ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸಿದ್ಧತೆಗಳನ್ನು ಪರಿಶೀಲಿಸಿ ಎಲ್ಲ ತಯಾರಿ ಮಾಡಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಡಾ.ಕೆ.ಸುಧಾಕರ್ ಹೇಳಿದರು.