

ಶಿವಮೊಗ್ಗ: ಕರೊನಾ ಎರಡನೆ ಅಲೆ ಭೀತಿ ಆರಂಭವಾಗಿದ್ದು ನಿಯಂತ್ರಣ ಮಾಡಲು ಪಾಲಿಕೆ ವ್ಯಾಪ್ತಿಯಲ್ಲಿ 22 ಕಡೆ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಕರೊನಾ ಮಾರ್ಗಸೂಚಿಯ ಸಮರ್ಪಕ ಅನುಷ್ಠಾನಕ್ಕೆ ನಿರ್ಧರಿಸಿ ಜನರಲ್ಲಿ ಅರಿವು ಮೂಡಿಸುವ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ 250 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿದೆ.
ಗುರುವಾರ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಡೆದ ಆರೋಗ್ಯ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ಸಾರ್ವಜನಿಕರು ಅಷ್ಟೇ ಅಲ್ಲ, ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್, ಪರಸ್ಪರ ಅಂತರ ಸ್ಯಾನಿಟೈಸ್ ಮೂರನ್ನು ಕಟ್ಟುನಿಟ್ಟಾಗಿ ಪಾಲಿಸಿದಾಗ ಮಾತ್ರ ಕರೊನಾ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ನಗರಪಾಲಿಕೆ ವ್ಯಾಪ್ತಿಯಲ್ಲಿ 22 ಕರೊನಾ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. 12 ಖಾಸಗಿ ಆಸ್ಪತ್ರೆಗಳು, 8 ನಗರ ಆರೋಗ್ಯ ಕೇಂದ್ರಗಳು, ಮೆಗ್ಗಾನ್ ಆಸ್ಪತ್ರೆಯಲ್ಲಿ ಐದು ಲಸಿಕಾ ಕೇಂದ್ರಗಳು, ಆಯುರ್ವೇದ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಇದುವರೆಗೆ 1.20 ಲಕ್ಷ ಜನರಿಗೆ ಕರೊನಾ ಲಸಿಕೆ ನೀಡಲಾಗಿದೆ. ಶೇ.95ರಷ್ಟು ಜನರಿಗೆ ಇದರಿಂದ ಕರೊನಾ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇನ್ನುಳಿದ ಶೇ.5ರಷ್ಟು ಜನರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಳವಾಗಲು ಕೆಲ ದಿನ ಬೇಕಾಗುತ್ತದೆ ಎಂದು ಡಿಎಚ್‌ಒ ಡಾ.ರಾಜೇಶ್ ಸುರಗೀಹಳ್ಳಿ ಸಭೆಗೆ ಮಾಹಿತಿ ನೀಡಿದರು.
ಲಸಿಕೆ ನೀಡಿದ 24 ತಾಸಿನಲ್ಲಿ ಸಣ್ಣ ಪುಟ್ಟ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಬಹುದು. ಆದರೆ ಇದುವರೆಗೂ ಯಾರೂ ಕೂಡಾ ಅಡ್ಡಪರಿಣಾಮದಿಂದ ಆಸ್ಪತ್ರೆಗೆ ದಾಖಲಾಗಿಲ್ಲ. ಜನರು ಕರೊನಾ ಲಸಿಕೆ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಸಭೆಗೆ ವಿವರಿಸಿದರು.