ದ.ಕ. ಮತ್ತೊಂದು ಕೋವಿಡ್ ಪಾಸಿಟಿವ್, ಬೋಳೂರಿನ ವ್ಯಕ್ತಿಗೆ ಸೋಂಕು

korona new
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕೋವಿಡ್ ಪಟ್ಟಿಗೆ ನಾಲ್ಕು ದಿನಗಳ ಬಳಿಕ ಮಂಗಳವಾರ ಮತ್ತೊಂದು ಕರೊನಾ ಪಾಸಿಟಿವ್ ಪ್ರಕರಣ ಸೇರ್ಪಡೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ವ್ಯಕ್ತಿ ಮಂಗಳೂರಿನ ಬೋಳೂರು ನಿವಾಸಿಯಾಗಿದ್ದು, 51 ವರ್ಷ ವಯಸ್ಸಿನ ಪುರುಷ(ಪಿ-658). ಇವರು ಇತ್ತೀಚೆಗೆ ನಗರದ ಫಸ್ಟ್ ನ್ಯೂರೋ ಆಸ್ಪತ್ರೆ ಸಂಪರ್ಕದಿಂದ ಕೋವಿಡ್ ಪಾಸಿಟಿವ್ ಬಂದಿದ್ದ ಬೋಳೂರಿನ 58 ವರ್ಷ ವಯಸ್ಸಿನ ಮಹಿಳೆ(ಪಿ-536)ಯ ಅಳಿಯ ಎಂದು ತಿಳಿದು ಬಂದಿದೆ.

ಬೋಳೂರಿನ ಈ ಮಹಿಳೆ ಮೆದುಳಿನ ಸೋಂಕು ಪೀಡಿತರಾಗಿ ಐಸಿಯುನಲ್ಲಿ ಆಮ್ಲಜನಕದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ನಾಜೂಕಾಗಿದೆ. ಇವರ ಪತಿ 62 ವರ್ಷ ವಯಸ್ಸಿನ (ರೋಗಿ 579) ವ್ಯಕ್ತಿಯೂ ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳವಾರ ಅವರ ಅಳಿಯನಿಗೂ ಸೋಂಕು ಖಚಿತವಾಗುವುದರೊಂದಿಗೆ ಬೋಳೂರಿನ ಒಂದೇ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ.

ಹೊಸ ಪ್ರಕರಣವೂ ಸೇರಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಒಟ್ಟು 10 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 8 ಮಂದಿಯ ಸ್ಥಿತಿ ತೃಪ್ತಿಕರವಾಗಿದೆ. ಶಕ್ತಿನಗರದ 80 ವರ್ಷದ ವೃದ್ಧೆ(ಪಿ-507) ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ.

ಮಂಗಳವಾರ 18 ಮಂದಿಯ ತಪಾಸಣೆ ನಡೆದಿದ್ದು, ಎನ್‌ಐಟಿಕೆಯಲ್ಲಿ 28, ಇಎಸ್‌ಐನಲ್ಲಿ 40 ಮಂದಿ ನಿಗಾವಣೆಯಲ್ಲಿದ್ದಾರೆ. 393 ಮಂದಿಯ ಸ್ಯಾಂಪಲ್ ವರದಿ ಬಂದಿದ್ದು, 1 ಪಾಸಿಟಿವ್ ಹಾಗೂ ಉಳಿದದ್ದು ನೆಗೆಟಿವ್. 26 ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನೂ ಒಟ್ಟು 168 ವರದಿಗಳು ಬರಬೇಕಿವೆ.

ಮಂಗಳೂರಿನಲ್ಲಿ 6ಕ್ಕೇರಿಕೆ: ದ.ಕ. ಜಿಲ್ಲೆಯ ಇದುವರೆಗಿನ 19 ಪ್ರಕರಣಗಳಲ್ಲಿ ಅತ್ಯಧಿಕ ಸೋಂಕಿತರು ಇರುವುದು 8 ಮಂದಿಯೊಂದಿಗೆ ಬಂಟ್ವಾಳದಲ್ಲಿ. ಇದರಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಬಿಡುಗಡೆಗೊಂಡಿದ್ದಾರೆ, ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಂತರದ ಸ್ಥಾನದಲ್ಲಿ 6 ಮಂದಿಯೊಂದಿಗೆ ಮಂಗಳೂರು ತಾಲೂಕು ಇದೆ. ಇವರ ಪೈಕಿ ತೊಕ್ಕೊಟ್ಟಿನ ನಿವಾಸಿಯೊಬ್ಬರು ಗುಣಮುಖರಾಗಿದ್ದು, ಉಳಿದ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪುತ್ತೂರು ತಾಲೂಕಿನ ಮೂರು ಪ್ರಕರಣಗಳಲ್ಲಿ ಒಬ್ಬರು ಬಿಡುಗಡೆಗೊಂಡರೆ, ಇಬ್ಬರು ಚಿಕಿತ್ಸೆಯಲ್ಲಿದ್ದಾರೆ. ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿನ ತಲಾ ಒಬ್ಬರು ಗುಣಮುಖರಾಗಿದ್ದಾರೆ.

ಉಡುಪಿ ನಾಲ್ಕು ವರದಿ ನೆಗೆಟಿವ್

ಉಡುಪಿ/ಕುಂದಾಪುರ: ಜಿಲ್ಲಾಡಳಿತ ಮಂಗಳವಾರ ಸ್ವೀಕರಿಸಿದ ನಾಲ್ಕು ಮಂದಿಯ ಶಂಕಿತ ಕರೊನಾ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 3, ಅಸೌಖ್ಯ ಸಂಬಂಧಿಸಿ 2, ಕೋವಿಡ್-19 ಶಂಕಿತ 1, ಹಾಟ್‌ಸ್ಪಾಟ್ ಜಿಲ್ಲೆಯಿಂದ ಬಂದ ಒಬ್ಬರು ಸೇರಿದಂತೆ ಒಟ್ಟು 58 ಮಂದಿಯ ಮಾದರಿ ಮಂಗಳವಾರ ಸಂಗ್ರಹಿಸಲಾಗಿದೆ. 9 ಮಂದಿ ಐಸೋಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 125 ಮಂದಿಯ ವರದಿ ಬರಲು ಬಾಕಿ ಇದೆ. ಮಂಗಳವಾರ 6 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೋಲೇಶನ್ ವಾರ್ಡ್‌ನಿಂದ 10 ಮಂದಿ ಬಿಡುಗಡೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಕ್ವಾರಂಟೈನ್ ಕೇಂದ್ರ ಸ್ಥಳಾಂತರ: ಕುಂದಾಪುರದ ಗುಲ್ವಾಡಿ ಗ್ರಾಮ ಶೆಟ್ರಕಟ್ಟೆ ಎಫ್‌ಎಸ್‌ಎಲ್ ಬಳಿ ಆರಂಭಿಸಿದ ಕ್ವಾರಂಟೈನ್ ಕೇಂದ್ರ ಸ್ಥಳಾಂತರಿಸಲಾಗಿದೆ. ಶೆಟ್ರಕಟ್ಟೆಯಲ್ಲಿ ಕ್ವಾರಂಟೈನ್ ಕೇಂದ್ರ ತೆರೆದಿರುವುದನ್ನು ಗುಲ್ವಾಡಿ ಗ್ರಾಮ ಪಂಚಾಯಿತಿ ಸದಸ್ಯರ ಹಾಗೂ ಹಟ್ಟಿಯಂಗಡಿ ಪಂಚಾಯಿತಿ ಅಧ್ಯಕ್ಷರಲ್ಲದೆ ಸ್ಥಳೀಯರೂ ವಿರೋಧಿಸಿದ್ದರು.

ಭಟ್ಕಳಕ್ಕೆ ಮಂಗಳೂರಿನಿಂದ ಸೋಂಕು?

ಭಟ್ಕಳ: 21 ದಿನಗಳಿಂದ ಕೋವಿಡ್ -19 ಪ್ರಕರಣ ಕಂಡುಬಾರದೆ ಭಟ್ಕಳದ ಜನ ಸಮಾಧಾನದಿಂದಿರುವಾಗಲೇ ಮಂಗಳವಾರ ಒಬ್ಬರಲ್ಲಿ ವೈರಸ್ ದೃಢಪಟ್ಟಿರುವುದು ಜನರನ್ನು ಆತಂಕಕ್ಕೆ ದೂಡಿದೆ.

ಹೊರಜಿಲ್ಲೆಗಳಿಂದ ಬಂದವರ ಮೇಲೆ ತಾಲೂಕು ಆಡಳಿತ ತೀವ್ರ ನಿಗಾ ಇಟ್ಟಿದ್ದರೂ ಭಟ್ಕಳದಲ್ಲೇ ಇದ್ದ ಯುವತಿಗೆ ಸೋಂಕು ಪತ್ತೆಯಾಗಿದ್ದು ಆತಂಕ ತಂದೊಡ್ಡಿದೆ. ಸೋಂಕಿತ ಯುವತಿಯ ಅಕ್ಕ -ಭಾವ ತಮ್ಮ ಮಗುವಿಗೆ ಚಿಕಿತ್ಸೆಗಾಗಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಹೋಗಿದ್ದರು. ಅವರ ಸಂಪರ್ಕಕ್ಕೆ ಬಂದ ಯುವತಿಗೆ ಸೋಂಕು ತಗುಲಿರುವ ಸಾಧ್ಯತೆ ಕುರಿತು ತಪಾಸಣೆ ನಡೆಯುತ್ತಿದೆ. ಯುವತಿಯ ಸಂಪರ್ಕಕ್ಕೆ ಬಂದ 9 ಜನರ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.

ಕಾಸರಗೋಡಲ್ಲಿ ಪಾಸಿಟಿವ್ ಕೇಸ್‌ಗಳಿಲ್ಲ

ಕಾಸರಗೋಡು: ಜಿಲ್ಲೆಯಲ್ಲಿ ಮಂಗಳವಾರವೂ ಯಾವುದೇ ಕೋವಿಡ್-19 ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ 1,135 ಮಂದಿ ಮನೆಗಳಲ್ಲಿ, 21 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. 262 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 175 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ. ಈಗ ಮೂವರು ಪಾಸಿಟಿವ್ ರೋಗಿಗಳು ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4,867 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 4198 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 394 ಮಂದಿಯ ಫಲಿತಾಂಶ ಲಭಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net