ಉಡುಪಿಗೆ ಸದ್ಯಕ್ಕಿಲ್ಲ ಕರೊನಾ ಭಯ

Corona
Published on

ಉಡುಪಿ: ವಿದೇಶದಿಂದ ಬಂದವರ ಹೋಂ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದ್ದು, ಅವರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಹಾಗಾಗಿ ವಿದೇಶಗಳಿಂದ ಬಂದವರಿಂದ ಜಿಲ್ಲೆಯಲ್ಲಿ ಕರೊನಾ ಹಬ್ಬುವ ಭಯ ಸದ್ಯಕ್ಕಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಎರಡು ಸಾವಿರಕ್ಕೂ ಅಧಿಕ ಮಂದಿ ವಿದೇಶಗಳಿಂದ ಬಂದಿದ್ದರು. ಪಾಸಿಟಿವ್ ಬಂದ ಮೂವರ ನಿಕಟವರ್ತಿಗಳು ಐಸೋಲೇಶನ್ ವಾರ್ಡ್‌ನಲ್ಲಿದ್ದಾರೆ. ಸದ್ಯ ಅವರಲ್ಲಿ ರೋಗ ಲಕ್ಷಣಗಳು ಕಂಡುಬಂದಿಲ್ಲ. ಸಾರ್ವಜನಿಕರು ಆತಂಕ ಪಡಬೇಕಾದ ಅಗತ್ಯವಿಲ್ಲ, ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಶಿಸ್ತು ಸಂಯಮ ಪಾಲಿಸಬೇಕು ಎಂದರು.

ಪಾಸಿಟಿವ್ ಬಂದ ಕಾರ್ಕಳದ ಮಹಿಳೆಯ ಜತೆ ಜಿಲ್ಲೆಯ 33 ಮಂದಿ ಪ್ರಯಾಣ ಮಾಡಿದ್ದರು. ಎಲ್ಲ 33 ಮಂದಿಯ ಆರೋಗ್ಯ ತಪಾಸಣೆ ಮಾಡಿದ್ದೇವೆ. ದೆಹಲಿ ಸಂಪರ್ಕದಲ್ಲಿದ್ದ ಎಲ್ಲ 16 ಮಂದಿ ಆರೋಗ್ಯ ತಪಾಸಣೆ ಮಾಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

31 ಮಂದಿಯದ್ದೂ ನೆಗೆಟಿವ್: ಜಿಲ್ಲಾಡಳಿತ ಸೋಮವಾರ ಸ್ವೀಕರಿಸಿದ ಎಲ್ಲ 31 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿವೆ. ಸೋಮವಾರ ಮತ್ತೆ 4 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 45 ಮಂದಿಯ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಭಾನುವಾರಕ್ಕೆ 219 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 37 ಮಂದಿ ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net