

ವಿಜಯವಾಣಿ ಸುದ್ದಿಜಾಲ ಮಂಗಳೂರು
ಪ್ರಕರಣ 1: ಸುಳ್ಯ ಕಡೆಯ ವ್ಯಕ್ತಿಯೊಬ್ಬರು ಮೊದಲು ಇಲಿಜ್ವರಕ್ಕೆ ತುತ್ತಾಗಿದ್ದರು, ಜ್ವರ ಗುಣವಾದ ಬಳಿಕವೂ ತಲೆನೋವು ಹೋಗಲಿಲ್ಲ. ಪುತ್ತೂರಿನ ಆಸ್ಪತ್ರೆಯಲ್ಲಿ ಸ್ಕಾೃನ್ ಮಾಡಿದಾಗ ಮಿದುಳಲ್ಲಿ ರಕ್ತ ಹೆಪ್ಪುಗಟ್ಟಿರುವುದು ಗೊತ್ತಾಯಿತು. ಅಲ್ಲಿಂದ ತಕ್ಷಣ ಮಂಗಳೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಂದು ದಾಖಲಿಸಲಾಯಿತು. ದಾಖಲಾದ ಕೂಡಲೇ ಕರೊನಾ ಟೆಸ್ಟ್ ಆಗಬೇಕು ಎಂದು ಗಂಟಲಿನ ಸ್ವಾಬ್ ತೆಗೆಯಲಾಯಿತು. ಆದರೆ ವರದಿ ಬರಲು ಮೂರು ದಿನ ಬೇಕಾಯಿತು. ಮಿದುಳಲ್ಲಿ ರಕ್ತ ಹೆಪ್ಪುಗಟ್ಟಿದ ಪ್ರಕರಣಕ್ಕೂ ಅಲ್ಲಿ ಚಿಕಿತ್ಸೆ ಪ್ರಾರಂಭಿಸಲೇ ಇಲ್ಲ! ವರದಿ ಬಂದ ಮರುದಿನವಷ್ಟೇ ಚಿಕಿತ್ಸೆ ಶುರು ಮಾಡಿದರು.
ಪ್ರಕರಣ 2: ಹಲಸಿನಕಾಯಿ ಕೊಯ್ಯಲೆಂದು ಮರವೇರಿದ ವ್ಯಕ್ತಿಯೊಬ್ಬರು ಜಾರಿ ಮರದಿಂದ ಕೆಳಕ್ಕೆ ಬಿದ್ದು ತೀವ್ರ ಸ್ವರೂಪದ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಶುರು ಮಾಡಲಿಲ್ಲ, ಕರೊನಾ ಟೆಸ್ಟ್ ವರದಿ ಬರಲು ಕಾಯುವಂತೆ ಒತ್ತಡ. ಮೂರು ದಿನ ಯಮಯಾತನೆ ಅನುಭವಿಸುವಂತಾಯಿತು.
ಇವೆರಡು ಸ್ಯಾಂಪಲ್‌ಗಳು ಸದ್ಯ ಜಿಲ್ಲೆಯ ಆಸ್ಪತ್ರೆಗಳಲ್ಲಿನ ಚಿತ್ರಣದ ಬಗ್ಗೆ. ಇದು ಅತಿಶಯೋಕ್ತಿಯಲ್ಲ, ಕಾಲ್ಪನಿಕವೂ ಅಲ್ಲ. ಹಲವು ಖಾಸಗಿ ಆಸ್ಪತ್ರೆಗಳಲ್ಲಿ, ಮೆಡಿಕಲ್ ಕಾಲೇಜು ಆಸ್ಪತ್ರೆಗಳಲ್ಲಿ ಸದ್ಯ ಕೋವಿಡ್ ಪರೀಕ್ಷೆಯ ಒತ್ತಡ ಹೆಚ್ಚಿದೆ. ರಾಶಿ ರಾಶಿ ಸ್ಯಾಂಪಲ್‌ಗಳು ಪರೀಕ್ಷೆಗೆ ಬಾಕಿ ಉಳಿದುಕೊಂಡಿವೆ. ಹಾಗಾಗಿ ಬೇರೆ ಬೇರೆ ಚಿಕಿತ್ಸೆ(ತುರ್ತು ಸೇರಿದಂತೆ)ಗೆ ದಾಖಲಾಗಿರುವ ರೋಗಿಗಳು ಸಂಕಷ್ಟ ಎದುರಿಸುವಂತಾಗಿದೆ.
ಕರೊನಾ ಶುರುವಾದಾಗಿನಿಂದಲೇ ಇಂತಹ ಪ್ರಕರಣಗಳು ಸಾಕಷ್ಟು ನಡೆದಿವೆ. ಲಾಕ್‌ಡೌನ್ ಸಂದರ್ಭದಲ್ಲಿ ಚಿಕಿತ್ಸೆ ನೀಡಲು ನಿರಾಕರಿಸಿದ್ದರಿಂದ ಕೆಲವರು ಜೀವ ಕಳೆದುಕೊಂಡಿದ್ದರೆ, ಕೆಲವರು ಕ್ಯಾನ್ಸರ್‌ನಂತಹ ಕಾಯಿಲೆಯ ಆರಂಭಿಕ ಹಂತದ ಸೂಚನೆ ಸಿಕ್ಕಿದರೂ ಚಿಕಿತ್ಸೆ ಪಡೆಯಲಾಗದೆ ಈಗ ಗಂಭೀರ ಸ್ಥಿತಿ ತಲಪಿದ್ದಾರೆ.
ಆಸ್ಪತ್ರೆಗಳ ಪಾಡೇನು?
ಹಲವು ಆಸ್ಪತ್ರೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ(ವೈದ್ಯರೂ ಸೇರಿ) ಕಾರ್ಯನಿರ್ವಹಿಸುತ್ತಿವೆ. ಹಾಗಾಗಿ ವೈದ್ಯರ ಮೇಲೆಯೂ ಒತ್ತಡ ಬಹಳ ಇದೆ. ಕೋವಿಡ್ ಪರೀಕ್ಷೆಯ ಒತ್ತಡದೊಂದಿಗೆ ಕೆಲವು ಲ್ಯಾಬ್‌ಗಳಲ್ಲಿ ಸಿಬ್ಬಂದಿಗೂ ಕರೊನಾ ಸೋಂಕು ಉಂಟಾಗಿ ಲ್ಯಾಬ್‌ಗಳ ಮೇಲೆ ಒತ್ತಡ ಬಿದ್ದಿದೆ. ಅಷ್ಟೇ ಅಲ್ಲ, ವೈದ್ಯರಿಗೂ ಕರೊನಾ ಪಾಸಿಟಿವ್ ಆಗಿರುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯೂ ಇದೆ ಎಂದು ಆಸ್ಪತ್ರೆ ಮೂಲಗಳು ಹೇಳುತ್ತವೆ.
ಕೆಲವು ಆಸ್ಪತ್ರೆಗಳಲ್ಲಿ ಆಡಳಿತ ಲಾಕ್‌ಡೌನ್ ನಷ್ಟ ಭರ್ತಿ ಮಾಡಲು ವೈದ್ಯರ ಸಹಿತ ವೇತನಕ್ಕೂ ಕತ್ತರಿ ಹಾಕಿದೆ, ಕಿರಿಯ ವೈದ್ಯರಿಗೆ ಮುಖ್ಯವಾಗಿ ಇದರಿಂದ ಸಮಸ್ಯೆಯಾಗಿದೆ. ಇದೆಲ್ಲದರಿಂದ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಸದ್ಯ ಚಿಕಿತ್ಸೆ ಪಡೆಯುವುದಕ್ಕೆ ಕ್ಲಿಷ್ಟಕರ ಪರಿಸ್ಥಿತಿ ಕಂಡು ಬರತೊಡಗಿದೆ.