ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ; ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದಿಲ್ಲ ಎಂಬ ಆತಂಕ ಬೇಡ

25Tmk_Siddaganga_Hospital
Published on

ತುಮಕೂರು: ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿನ ಲಕ್ಷಣ ಉಳ್ಳವರಿಗೆ ಚಿಕಿತ್ಸೆ ದೊರೆಯುವುದಿಲ್ಲವೆಂಬ ಭಯ ಬೇಡ. ಸಿದ್ಧಗಂಗಾ ಆಸ್ಪತ್ರೆಯ ಒಂದು ಭಾಗವನ್ನು ಕರೊನಾ ಚಿಕಿತ್ಸೆಗೆ ಮೀಸಲಿಟ್ಟಿದ್ದು ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡಲೂ ಆದ್ಯತೆ ನೀಡಲಾಗುವುದು ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್.ಪರಮೇಶ್ ಹೇಳಿದರು.

ಕರೊನಾ ಸೋಂಕಿತರು, ಶಂಕಿತರಿಗೆ ನೀಡುವ ಚಿಕಿತ್ಸೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಆಸ್ಪತ್ರೆಯಲ್ಲಿ ಎ,ಬಿ,ಸಿ ಹಾಗೂ ಡಿ ನಾಲ್ಕು ವಿಭಾಗಗಳಿದ್ದು ಬಿ ಹಾಗೂ ಸಿ ವಿಭಾಗವನ್ನು ಪ್ರತ್ಯೇಕ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಪ್ರತ್ಯೇಕ ಒಳ ಮತ್ತು ಹೊರ ಹೋಗುವ ಮಾರ್ಗಗಳು, ಲಿಫ್ಟ್ , ಎಮರ್ಜೆನ್ಸಿ ಘಟಕ ಎಲ್ಲದರಲ್ಲೂ ಪ್ರತ್ಯೇಕತೆ ಕಾಯ್ದುಕೊಂಡಿದ್ದು ಇಲ್ಲಿ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಎ ಹಾಗೂ ಡಿ ಯಲ್ಲಿ ಸಾಮಾನ್ಯ ರೋಗಿಗಳಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಐಸಿಎಂಆರ್ ನಿರ್ದೇಶನದಂತೆ ಚಿಕಿತ್ಸೆ ನೀಡಲಾಗುತ್ತಿದೆ. ಸಾಮಾನ್ಯ ರೋಗಿಗಳಿಗೆ ಹಾಗೂ ಕರೊನಾ ಸೋಂಕಿತರಿಗೆ ಪ್ರತ್ಯೇಕ ಎಮರ್ಜೆನ್ಸಿ ಘಟಕವಿದೆ. ಉಸಿರಾಟದ ತೊಂದರೆಯಾದರೆ ಐಸಿಯು ಘಟಕವನ್ನೂ ಪ್ರತ್ಯೇಕ ವಿಭಾಗದಲ್ಲಿ ಪರಿವರ್ತಿಸಲಾಗಿದೆ. ಚಿಕಿತ್ಸೆ ನೀಡುವ ತಜ್ಞ ವೈದ್ಯರನ್ನೂ ವಿಂಗಡಿಸಿ, ಶುಶ್ರೂಷಕರಿಂದ ಹಿಡಿದು ಡಿ ದರ್ಜೆ ಸಿಬ್ಬಂದಿಯವರೆಗೂ ಪ್ರತ್ಯೇಕತೆ ಕಾಯ್ದುಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.

24 ಗಂಟೆಯೂ ಚಿಕಿತ್ಸೆ: ಹೃದಯ, ಕೀಲು, ಮೂಳೆ, ಬೆನ್ನುಮೂಳೆ, ನರರೋಗ ಚಿಕಿತ್ಸೆ, ಶ್ವಾಸಕೋಶ, ಜೀಣಾರ್ಂಗ ಸಮಸ್ಯೆ, ಕಣ್ಣು, ಕಿವಿ, ಮೂಗು ಗಂಟಲು, ದಂತ ಸಮಸ್ಯೆ, ಮಕ್ಕಳ ಹಾಗೂ ಗರ್ಭಿಣಿ ಹಾಗೂ ಮಹಿಳೆ ಹಾಗೂ ವಯೋಸಂಬಂಧಿ ಕಾಯಿಲೆಗಳು ಸೇರಿ ಇನ್ನಿತರ ಸಮಸ್ಯೆಗಳಿಗೆ ಒಂದೇ ಸೂರಿನಡಿ ವೈದ್ಯರು ನಿರಂತರ 24 ಗಂಟೆಯೂ ಆಸ್ಪತ್ರೆಯಲ್ಲಿ ದೊರೆಯಲಿದ್ದಾರೆ. ತುರ್ತು ಚಿಕಿತ್ಸೆಗೆ ಆದ್ಯತೆ: ಕಳೆದ 3 ವರ್ಷಗಳಿಂದಲೂ ರಸ್ತೆ ಅಪಘಾತ, ಹೃದಯಾಘಾತದಿಂದ ತುರ್ತು ಚಿಕಿತ್ಸೆಗೆ ದಾಖಲಾಗುವ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ನೂರಾರು ರೋಗಿಗಳು ಇಂತಹ ತುರ್ತು ಅಪಾಯದಿಂದ ಜೀವ ಉಳಿಸಿಕೊಂಡಿದ್ದಾರೆ. ತುರ್ತು ಚಿಕಿತ್ಸೆಗಾಗಿ ದಾಖಲಾದ ರೋಗಿಗೆ ಕರೊನಾಗೆ ಸಂಬಂಧಿಸಿದ ಸುರಕ್ಷತೆ ಅನುಸರಿಸಿ ಮೊದಲು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರತ್ಯೇಕ ಸ್ಕ್ರೀನಿಂಗ್, ಫ್ಲೂ ಕ್ಲಿನಿಕ್ : ಸಿದ್ಧಗಂಗಾ ಆಸ್ಪತ್ರೆಯಲ್ಲಿ ಜ್ವರ, ಶೀತ, ನೆಗಡಿ, ಗಂಟಲುನೋವು, ಕೆಮ್ಮು ಹಾಗೂ ಇತರ ಕೋವಿಡ್ ಸೋಂಕಿನ ಲಕ್ಷಣವಿದ್ದ ರೋಗಿಗಳು ಬಂದ ತಕ್ಷಣ ಅವರಿಗೆ ಆಸ್ಪತ್ರೆಯಲ್ಲೇ ತೆರೆಯಲಾಗಿರುವ ಪ್ರತ್ಯೇಕ ಫ್ಲೂ ಕ್ಲಿನಿಕ್‌ನಲ್ಲಿ ಪರೀಕ್ಷೆ ಮಾಡಲಾಗುತ್ತಿದೆ. ಜತೆಗೆ ಶ್ವಾಸಕೋಶದಲ್ಲಿ ಸೊಂಕಿನ ಲಕ್ಷಣಗಳನ್ನು ಕಂಡು ಹಿಡಿಯಲು ಪ್ರತ್ಯೇಕ ಸ್ಕ್ಯಾನಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು ಕ್ವಾರಂಟೈನ್ ಇರಲು ಬಯಸುವವರಿಗೂ ವ್ಯವಸ್ಥೆ ಇದೆ.

ಆಸ್ಪತ್ರೆಗೆ ಬರುವ ಇತರ ರೋಗಿಗಳಿಗೂ ನಾವು ಆಸ್ಪತ್ರೆಗೆ ಆಗಮಿಸಿದ ತಕ್ಷಣ ಮಾಸ್ಕ್ ಹಾಗೂ ಸ್ಯಾನಿಟೈಸರ್ ಉಪಯೋಗಿಸುವ ಮಾರ್ಗದರ್ಶನ ಮಾಡಿ ಅವರಿಗೂ ದೇಹದ ತಾಪಮಾನ ಪರೀಕ್ಷಿಸಿ ಜತೆಗೆ ಆಮ್ಲಜನಕ ಪ್ರಮಾಣವನ್ನೂ (ಆಕ್ಸಿಜನ್ ಸ್ಯಾಚುರೇಶನ್) ಸ್ಥಳದಲ್ಲಿಯೇ ಚೆಕ್ ಮಾಡಿ ವೈದ್ಯರ ಭೇಟಿಗೆ ಅವಕಾಶ ಮಾಡಿಕೊಡಲಾಗುವುದು. ಡಾ.ಸಂಜೀವ್ ಕುಮಾರ್ ಸಿಇಒ, ಸಿದ್ಧಗಂಗಾ ಆಸ್ಪತ್ರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net