ದೊಡ್ಡಬಳ್ಳಾಪುರದ ವ್ಯಕ್ತಿಗೆ ಕರೊನಾ. ಜಿಲ್ಲೆಯಲ್ಲಿ ಐದಕ್ಕೇರಿದ ಸೋಂಕಿತರ ಸಂಖ್ಯೆ, ಸುತ್ತಮುತ್ತಲ ಗ್ರಾಮಗಳಲ್ಲಿ ಲಾಕ್‌ಡೌನ್ ಬಿಗಿ

13Rural3
Published on

ಬೆಂಗಳೂರು/ದೊಡ್ಡಬಳ್ಳಾಪುರ ಗ್ರಾಮಾಂತರ: ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ನಾಲ್ವರು ಕರೊನಾ ಸೋಂಕಿತರು ಪತ್ತೆಯಾದ ಬೆನ್ನಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೊದಲ ಪಾಸಿಟಿವ್ ಪ್ರಕರಣ ಬೆಳಕಿಗೆ ಬಂದಿದೆ.

ಗ್ರಾಮಾಂತರ ಜಿಲ್ಲೆಗೂ ದೆಹಲಿ ನಂಜು ಅಂಟಿಕೊಂಡಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಐದಕ್ಕೇರಿದಂತಾಗಿದೆ.

ಮಧುರೆ ಹೋಬಳಿ ಕೋಡಿಪಾಳ್ಯದ 39 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ತಾಲೂಕಿನಲ್ಲಿ ಇದು ಮೊದಲ ಕರೊನಾ ಪ್ರಕರಣವಾಗಿದೆ.

ರೈಲ್ವೆ ನೌಕರ: ಸೋಂಕಿತ ವ್ಯಕ್ತಿ ರೈಲ್ವೆ ಇಲಾಖೆ ನೌಕರನಾಗಿದ್ದು, ಕಚೇರಿ ಕೆಲಸದ ನಿಮಿತ್ತ ಮಾ.14 ರಿಂದ 18ರವರೆಗೆ ದೆಹಲಿಗೆ ಪ್ರಯಾಣ ಮಾಡಿ, ಮಾ.19ರಂದು ಸ್ವಗ್ರಾಮಕ್ಕೆ ಹಿಂತಿರುಗಿದ್ದ. ಹಿಂದಿರುಗುವಾಗ ನಿಜಾಮುದ್ದೀನ್ ರೈಲಿನಲ್ಲಿ ಕರೊನಾ ಸೋಂಕಿತ ಸಹ ಪ್ರಯಾಣಿಕನೊಂದಿಗೆ ಇದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ವ್ಯಕ್ತಿಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಮೂರು ದಿನದ ಹಿಂದೆ ಉಸಿರಾಟದ ತೊಂದರೆ ಎದುರಿಸುತ್ತಿದ್ದ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿದಾಗ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿತನ ಪತ್ನಿ ಹಾಗೂ 4 ವರ್ಷದ ಮಗುವನ್ನು ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಕುಟುಂಬದ 11 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ.

ಕೋಡಿಪಾಳ್ಯ ಸೀಲ್‌ಡೌನ್: ಸೋಂಕಿತನ ಗ್ರಾಮಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಮವಾರ ಇಡೀ ಗ್ರಾಮಕ್ಕೆ ಕ್ರಿಮಿನಾಶಕ ಸಿಂಪಡಿಸಲಾಗಿದೆ. ಕನಸವಾಡಿ, ಮದುರೆ, ಕೋಡಿಹಳ್ಳಿ, ಬೀರಯ್ಯನ ಪಾಳ್ಯ, ಬಂಡಯ್ಯನ ಪಾಳ್ಯ, ಗಾರಡಿಗರ ಪಾಳ್ಯ, ಹೊನ್ನಾವರ, ಚೆನ್ನಾದೇವಿ ಅಗ್ರಹಾರ, ಮಲ್ಲೋಹಳ್ಳಿ, ಕಾಡನೂರು ಕೈಮರ, ಕಾಡನೂರು ಗ್ರಾಮಗಳಲ್ಲಿ ಲಾಕ್‌ಡೌನ್ ಬಿಗಿಗೊಳಿಸಲಾಗಿದೆ. ಕೋಡಿಪಾಳ್ಯವನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಾಲಿಗೂ ಬ್ರೇಕ್:

ಕೋಡಿಹಳ್ಳಿ ಗ್ರಾಮದ ಹಾಲಿನ ಡೇರಿ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆ ಹಾಗೂ ಪಂಚಾಯಿತಿ ವತಿಯಿಂದ ಗ್ರಾಮಕ್ಕೆ ಅಗತ್ಯ ವಸ್ತುಗಳ ಪೂರೈಕೆಗೆ ತೀರ್ಮಾನಿಸಲಾಗಿದೆ.

ಸಿಬ್ಬಂದಿ ಅಮಾನತು: ತಾಲೂಕಿನ ಮೊದಲ ಕರೊನಾ ಸೋಂಕಿತನ ವೈಯಕ್ತಿಕ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ವೈರಲ್ ಆಗಿದೆ. ಇದು ಆರೋಗ್ಯ ಇಲಾಖೆ ಸಿಬ್ಬಂದಿಯೊಬ್ಬರ ಬೇಜವಾಬ್ದಾರಿ ಎನ್ನಲಾಗಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ಅಮಾನತುಗೊಳಿಸಿ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಸೋಂಕಿತ ಗ್ರಾಮಕ್ಕೆ ತಹಸೀಲ್ದಾರ್ ಶಿವರಾಜ್, ವೃತ್ತ ನಿರೀಕ್ಷಕ ರಾಘವ್‌ಗೌಡ, ಇಒ ಮುರುಡಯ್ಯ, ತಾಲೂಕು ವೈದ್ಯಾಧಿಕಾರಿ ಡಾ.ಪರಮೇಶ್ವರ್ ಭೇಟಿ ನೀಡಿ ಪರಿಶೀಲಿಸಿದರು.

ಸೋಂಕಿತನ ಟ್ರಾವೆಲ್ಸ್ ಹಿಸ್ಟರಿಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕದ ಮಾಹಿತಿ ಪಡೆಯಲಾಗುತ್ತಿದೆ. ಸುಮಾರು 40 ಕುಟುಂಬಗಳಿಗಿರುವ ಇಡೀ ಗ್ರಾಮದಲ್ಲಿ ಪ್ರತಿಯೊಬ್ಬರ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಗ್ರಾಮಾಂತರ ಜಿಲ್ಲೆ ಸೋಂಕಿತ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಉಳಿದಂತೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಡಾ.ಮಂಜುಳಾದೇವಿ, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net