ಮನೆಮನೆಗೆ ತೆರಳಿ ಗ್ರಾಮಸ್ಥರಿಗೆ ಕರೊನಾ ತಪಾಸಣೆ, ನೆರಿಗಾದಲ್ಲಿ ಮೊಕ್ಕಾಂ ಹೂಡಿರುವ ಆರೋಗ್ಯ ಅಧಿಕಾರಿಗಳು ಗ್ರಾಮದಲ್ಲಿ ಉಲ್ಬಣಗೊಂಡಿರುವ ಸೋಂಕು

ank must
Published on

ಆನೇಕಲ್: ತಾಲೂಕಿನ ನೆರಿಗಾದಲ್ಲಿ ಕರೊನಾ ಸೋಂಕು ತಡೆಗೆ ಮುಂದಾಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಪ್ರತಿ ಮನೆಗೆ ಭೇಟಿ ನೀಡಿ ತಪಾಸಣೆ ನಡೆಸಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ನೇತೃತ್ವದ ವೈದ್ಯರ ತಂಡ ಪೊಲೀಸರ ಜತೆ ಮನೆಮನೆಗೆ ಭೇಟಿ ನೀಡಿ ಕರೊನಾ ವೈರಸ್ ಪರೀಕ್ಷೆ ಮಾಡಿಸಿಕೊಳ್ಳದವರನ್ನು ಪತ್ತೆ ಮಾಡಿ ಪರೀಕ್ಷೆಗೆ ಒಳಪಡಿಸಿದರು.

ಕೆಲವರು ಪರೀಕ್ಷೆಗೆ ಒಳಗಾಗಲು ಹಿಂದೇಟು ಹಾಕಿದರು. ಕೆಲವರು ನಮಗೆ ಸೋಂಕು ಇಲ್ಲ. ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ. ಹೀಗಿದ್ದರೂ ಏಕೆ ತಪಾಸಣೆಗೆ ಒಳಗಾಗಬೇಕು ಎಂದು ಪ್ರಶ್ನಿಸಿದರು. ಕೆಲವು ಮಂದಿ ವೈದ್ಯರ ಜತೆ ಮಾತಿನಚಕಮಕಿ ಕೂಡ ನಡೆಸಿದರು. ವೈದ್ಯರು ಜನರ ಮನವೊಲಿಸಿ ಪರೀಕ್ಷೆಗೆ ಒಳಪಡಿಸಿದರು.

ಬೀಗ ಹಾಕಿದ ಮನೆಗಳಿಗೆ ಚೀಟಿ: ವೈದ್ಯರ ತಂಡ ತಪಾಸಣೆ ನಡೆಸುತ್ತಿದ್ದ ಅವಧಿಯಲ್ಲಿ ಕೆಲವು ಮನೆಗಳಿಗೆ ಬೀಗ ಜಡಿಯಲಾಗಿತ್ತು. ಈ ಮನೆಗಳ ಬಾಗಿಲಿಗೆ ಕೂಡಲೇ ಎಲ್ಲರೂ ಪರೀಕ್ಷೆಗೆ ಒಳಗಾಗಬೇಕು ಎಂದು ಚೀಟಿ ಅಂಟಿಸಲಾಯಿತು.

ತಾಲೂಕು ಆರೋಗ್ಯ ಅಧಿಕಾರಿ ಡಾ. ವಿನಯ್, ನೆರಿಗಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ರಾಘವ ಪ್ರಸಾದ್, ಬೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕ ಶ್ರೀನಿವಾಸ್ ಹಾಗೂ ಗ್ರಾಮದ ಮುಖಂಡರು ಇದ್ದರು.

ಪರೀಕ್ಷೆಗೆ ಸಹಕಾರ ನೀಡದವರ ವಿರುದ್ಧ ಕ್ರಮ: ನೆರಿಗಾದಲ್ಲಿ ಕರೊನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಗ್ರಾಮಸ್ಥರನ್ನು ಪರೀಕ್ಷೆಗೆ ಒಳಪಡಿಸಲು ಇಲಾಖೆ ಮುಂದಾಗಿದೆ. 2 ದಿನಗಳ ಹಿಂದೆ ಇಬ್ಬರು ಅಧಿಕಾರಿಗಳನ್ನು ಗ್ರಾಮಕ್ಕೆ ಕಳುಹಿಸಲಾಗಿತ್ತು. ಗ್ರಾಮಸ್ಥರು ಅಧಿಕಾರಿಗಳ ಮಾತಿಗೆ ಬೆಲೆ ನೀಡದೆ ಪರೀಕ್ಷೆಗೆ ಒಳಗಾಗಿರಲಿಲ್ಲ. ಹೀಗಾಗಿ ಖುದ್ದು ನಾನೇ ಗ್ರಾಮಕ್ಕೆ ಆಗಮಿಸಬೇಕಾಯಿತು ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.

ಇಡೀ ಗ್ರಾಮಸ್ಥರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿದೆ. ಪರೀಕ್ಷೆಗೆ ಸಹಕಾರ ನೀಡದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು. ಇತರ ಗ್ರಾಮಗಳಲ್ಲಿ ಕರೊನಾ ಪರೀಕ್ಷಾ ಶಿಬಿರ ಏರ್ಪಡಿಸಲಾಗುವುದು. 3 ದಿನ ಗ್ರಾಮದಲ್ಲಿ ಶಿಬಿರ ನಡೆಯುತ್ತದೆ. ಗ್ರಾಮದ ಎಲ್ಲ ಬೀದಿಗಳನ್ನೂ ಸ್ಯಾನಿಟೈಸ ಮಾಡುವಂತೆ ಗ್ರಾಪಂ ಸಿಬ್ಬಂದಿಗೆ ಸೂಚಿಸಲಾಗಿದೆ. ಕರೊನಾ ಜಾಗೃತಿ ಮೂಡಿಸಲು ಬೀದಿ ನಾಟಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಗ್ರಾಮದಲ್ಲಿ 42 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 29 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 11 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂರು ದಿನಗಳಿಂದ 70 ಜನರಿಗೆ ತಪಾಸಣೆ ಮಾಡಿದ್ದು, ಅವರ ವರದಿ ಬರಬೇಕಿದೆ ಎಂದು ತಿಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net