

ಶಿವರಾಜ ಎಂ. ಬೆಂಗಳೂರು
ಗ್ರಾಮಾಂತರ ಜಿಲ್ಲೆಯಲ್ಲಿ 5 ಕರೊನಾ ಸೋಂಕು ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರುವ ಜಿಲ್ಲಾಡಳಿತವು ಜಿಲ್ಲೆಯ ಪ್ರತಿ ಕುಟುಂಬದ ಆರೋಗ್ಯ ತಪಾಸಣೆಗೆ ಬಿಎಲ್‌ಒಗಳ ವಿಶೇಷ ತಂಡವನ್ನು ಕಾರ್ಯಾಚರಣೆಗೆ ಇಳಿಸಿದೆ.
ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಈ ತಂಡದ ನೇತೃತ್ವ ವಹಿಸಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಬಿಎಲ್‌ಒಗಳು ಪ್ರತಿ ಕುಟುಂಬದ ಆರೋಗ್ಯ ಮಾಹಿತಿ ಸಂಗ್ರಹಣೆ ಚುರುಕುಗೊಳಿಸಿದ್ದಾರೆ.
ರೋಗ ಲಕ್ಷಣ ಮಾಹಿತಿ ಸಂಗ್ರಹ: ಕರೊನಾ ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ಜಿಲ್ಲೆಯ ಪ್ರತಿ ಮನೆಮನೆಗೂ ಭೇಟಿ ನೀಡಲಿರುವ ಬಿಎಲ್‌ಒ ತಂಡ ಪ್ರತಿ ಕುಟುಂಬದ ಸದಸ್ಯರ ಹೆಸರು, ವಯಸ್ಸು ಹಾಗೂ ರೋಗಲಕ್ಷಣದ ಮಾಹಿತಿ ಸಂಗ್ರಹಿಸಲಿದೆ. ಚುನಾವಣಾ ಗುರುತಿನ ಪತ್ರಗಳ ಆಧಾರದ ಮೇಲೆ ಪ್ರತಿ ಕುಟುಂಬದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಪ್ರಮುಖವಾಗಿ ನೆಗಡಿ, ಕೆಮ್ಮು, ಜ್ವರದಂಥ ಕರೊನಾ ಸೋಂಕಿನ ಲಕ್ಷಣದ ಮಾಹಿತಿ ಕಲೆ ಹಾಕಲಾಗುತ್ತಿದೆ. ಎರಡನೆಯ ಹಂತದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತಿತರ ಕಾಯಿಲೆ ಬಗ್ಗೆ ಮಾಹಿತಿ ಕಲೆ ಹಾಕಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಿದೆ.
ಟೆಸ್ಟಿಂಗ್ ಮಷಿನ್: ಜಿಲ್ಲೆಯಲ್ಲಿ ಈಗಾಗಲೇ ಕರೊನಾ ಸಂಬಂಧಿಸಿದಂತೆ 12 ಫೀವರ್ ಕ್ಲಿನಿಕ್ ತೆರೆಯಲಾಗಿದ್ದು, ಪ್ರತಿ ಕ್ಲಿನಿಕ್‌ನಲ್ಲಿಯೂ ಗಂಟಲು ದ್ರವ ತಪಾಸಣಾ ಯಂತ್ರ ಅಳವಡಿಲಾಗಿದೆ. ಟೆಲಿಪೋನ್ ಬೂತ್ ಮಾದರಿಯ ಕಿಯಾಸ್ಕ್ ಸ್ಥಾಪಿಸಿದ್ದು, ಶಂಕಿತರ ಗಂಟಲುದ್ರವ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗಿದೆ.
ವಿಶೇಷ ತಪಾಸಣೆ: ಬಿಎಲ್‌ಒಗಳ ಮತ್ತೊಂದು ಗುಂಪು ಗರ್ಭಿಣಿಯರಲ್ಲದೆ ಎಚ್‌ಐವಿ ಪೀಡಿತರು, ಕ್ಷಯರೋಗಿಗಳು ಸೇರಿ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ವಯೋವೃದ್ಧರು, ವೃದ್ಧಾಶ್ರಮದಲ್ಲಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆಯಾಗಿದ್ದು, ಕಾರ್ಯಾಚರಣೆಗೆ ಜಿಲ್ಲಾಧಿಕಾರಿ ಚಾಲನೆ ನೀಡಿದ್ದಾರೆ.
ಕರೊನಾ ಸೋಂಕು ಹರಡದಂತೆ ಜಿಲ್ಲೆಯಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳು ಜಾರಿಯಲ್ಲಿವೆ. ಇದರ ಜತೆಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ಪ್ರತಿಕುಟುಂಬದ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ಆರೋಗ್ಯ ತಪಾಸಣಾ ಕಾರ್ಯ ಕೈಗೊಳ್ಳಲಾಗಿದೆ. ಪಿ.ಎನ್.ರವೀಂದ್ರ, ಜಿಲ್ಲಾಧಿಕಾರಿ ಬೆಂಗಳೂರು ಗ್ರಾಮಾಂತರ
ಬೈಲನರಾಸಪುರ ವ್ಯಕ್ತಿ ಗುಣಮುಖ: ಗ್ರಾಮಾಂತರ ಜಿಲ್ಲೆಯಲ್ಲಿನ 5 ಕರೊನಾ ಪಾಸಿಟಿವ್ ಪ್ರಕರಣಗಳ ಪೈಕಿ ಬೈಲನರಾಸಪುರದ ವ್ಯಕ್ತಿ ಗುಣಮುಖನಾಗಿ ಮನೆಗೆ ಹಿಂತಿರುಗಿರುವುದು ಜಿಲ್ಲೆಯ ಜನ ನಿಟ್ಟುಸಿರು ಬಿಡುವಂತಾಗಿದೆ.
ವಾರದಿಂದ ಯಾವುದೇ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಇದರಿಂದ ಜಿಲ್ಲೆಯಲ್ಲಿ ಕವಿದಿದ್ದ ಕರೊನಾ ಕಾರ್ಮೊಡ ಸರಿದಂತಾಗಿದೆ. ಸೋಂಕಿತನ ನೆಗೆಟಿವ್ ವರದಿಯಿಂದ ಜಿಲ್ಲೆಯಲ್ಲಿ ಕರೊನಾ ಸೋಂಕು ಕ್ಷೀಣಿಸುವ ನಿರೀಕ್ಷೆ ಹುಟ್ಟಿದೆ.
ಅಂಕಿ ಅಂಶ: ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಇದುವರೆಗೆ 12 ಕರೊನಾ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 7 ಪ್ರಕರಣ ಇತರ ಜಿಲ್ಲೆ ಹಾಗೂ ಬೇರೆ ರಾಜ್ಯದವರಾಗಿದ್ದಾರೆ. ಉಳಿದ 5 ಪ್ರಕರಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಿವಾಸಿಗಳಾಗಿದ್ದಾರೆ. 12 ಪ್ರಕರಣಗಳಲ್ಲಿ 4 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 8 ಮಂದಿ ಬೆಂಗಳೂರಿನ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
*ಸಂಗ್ರಹಿಸಲಾದ ಮಾದರಿಗಳ ಸಂಖ್ಯೆ 225
*ಪಾಸಿಟಿವ್ 05
*ನೆಗೆಟಿವ್ 171
*14 ದಿನ ಕಡ್ಡಾಯ ಗೃಹದಿಗ್ಬಂಧನ 41
*28 ದಿನ ಕಡ್ಡಾಯ ಗೃಹದಿಗ್ಬಂಧನ 147
*ಆಸ್ಪತ್ರೆಗಳಲ್ಲಿ ಕ್ವಾರಂಟೈನ್ 48
*14ದಿನ ಕ್ವಾರಂಟೈನ್ ಪೂರ್ಣಗೊಳಿಸಿರುವವರು 237
*28 ದಿನ ಕ್ವಾರಂಟೈನ್ ಪೂರ್ಣಗೊಳಿಸಿದವರು 02