ಕರೊನಾ ಪರೀಕ್ಷೆಯಲ್ಲಿ ಬಳ್ಳಾರಿ ಜಿಲ್ಲೆ ಎರಡನೇ ಸ್ಥಾನದಲ್ಲಿ; ಡಿಸಿ ಎಸ್.ಎಸ್.ನಕುಲ್ ಹೇಳಿಕೆ

160420 DC SS Nakul, SP CK Baba Meeting
Published on

ಬಳ್ಳಾರಿ: ರಾಜ್ಯದಲ್ಲಿ ಬೆಂಗಳೂರು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಹೆಚ್ಚಿನ ಕರೊನಾ ಪರೀಕ್ಷೆ ನಡೆಸಲಾಗಿದೆ. ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಜನರ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣ ಕಾರ್ಯ ಪರಿಣಾಮಕಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದರು.

ಜಿಲ್ಲೆಯಲ್ಲಿ 596 ಜನರ ಮಾದರಿಯನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ 427 ಜನರಿಗೆ ನೆಗೆಟಿವ್ ವರದಿ ಬಂದಿದೆ. ಇದುವರೆಗೆ ಆರು ಜನರಿಗೆ ಸೋಂಕು ತಗುಲಿದ್ದು 163 ಜನರ ವರದಿ ಬರಬೇಕಿದೆ. 1.27 ಲಕ್ಷ ಜನರನ್ನು ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. 1306 ಜನರು ಕ್ವಾರಂಟೈನ್‌ನಲ್ಲಿದ್ದಾರೆ. ವಿಮ್ಸ್ ಪ್ರಯೋಗಾಲಯದಲ್ಲಿ ರಿಏಜೆಂಟ್ ಕೊರತೆಯಿಂದ ಪರೀಕ್ಷೆಯಲ್ಲಿ ಸ್ವಲ್ಪ ವಿಳಂಬವಾಗಿತ್ತು. ಇದೀಗ ರಿಏಜೆಂಟ್ ಬಂದಿದೆ ಎಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಸೋಂಕಿತರು ವಾಸವಿದ್ದ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ, ಪೊಲೀಸ್ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆ ನೀಡಲಾಗಿದೆ. ಏ.20ರೊಳಗೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗದಿದ್ದರೆ ಲಾಕ್‌ಡೌನ್ ನಿಯಮದಲ್ಲಿ ಸಡಿಲಿಕೆ ಆಗಲಿದೆ. ಈ ಕುರಿತು ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಪ್ರಕಟವಾಗಲಿದೆ. ಆಗ ಸಾಮಾಜಿಕ ಅಂತರ ಕಾಪಾಡುವುದು ಸೇರಿದಂತೆ ಜನರ ಸಹಕಾರ ಮುಖ್ಯವಾಗಲಿದೆ. ಸೋಂಕು ನಿಯಂತ್ರಣದಲ್ಲಿ ಇದ್ದರೆ ಸಮಸ್ಯೆಯಿಲ್ಲ. ಇಲ್ಲದಿದ್ದರೆ ಮತ್ತೆ ಲಾಕ್‌ಡೌನ್ ಎದುರಿಸಬೇಕಾಗುತ್ತದೆ ಎಂದರು.

ಗಡಿಗೆ ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳ ಜನರು ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಕರ್ನೂಲ್ ಹಾಗೂ ಅನಂತಪುರ ಜಿಲ್ಲೆಗಳಲ್ಲಿ ಕರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದಾಗಿ ಅಲ್ಲಿನ ಜನರು ಬಳ್ಳಾರಿ ಜಿಲ್ಲೆಗೆ ಬರಲು ಅನುಮತಿ ಕೇಳುತ್ತಿದ್ದಾರೆ. ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಲವರು ಒಳದಾರಿಗಳಿಂದ ಬಂದಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದರು.

ಕರ್ನೂಲ್‌ನಲ್ಲಿ ಕರೊನಾ ಪಾಸಿಟಿವ್ ಬಂದವರ ಸಂಬಂಧಿಕರು ನಗರಕ್ಕೆ ಬಂದಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಜಿಲ್ಲೆಗೆ ಬಂದವರ ಬಗ್ಗೆ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿ ಇಡಲಾಗುವುದು. ಜಿಲ್ಲೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳನ್ನು ತೆರೆಯುವಂತೆ ಕೋರಿದ್ದೇವೆ. ಹೊಸಪೇಟೆ ತಾಲೂಕಿನಲ್ಲಿ ಐದು, ಸಂಡೂರು ಮೂರು ಹಾಗೂ ಹರಪನಹಳ್ಳಿಯಲ್ಲಿ ಒಬ್ಬ ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆದಿರುವ ಹಣ್ಣುಗಳನ್ನು ಖರೀದಿಸಿ ಸಿಬ್ಬಂದಿಗೆ ವಿತರಿಸುವಂತೆ ಜಿಂದಾಲ್ ಸಂಸ್ಥೆಯವರನ್ನು ಕೋರಿದ್ದೇವೆ ಎಂದು ಜಿಲ್ಲಾಧಿಕಾರಿ ನಕುಲ್ ತಿಳಿಸಿದರು. ಜಿಪಂ ಸಿಇಒ ಕೆ.ನಿತೀಶ, ಪ್ರೊಬೇಷನರಿ ಐಎಎಸ್ ಅಧಿಕಾರಿ ಈಶ್ವರ ಖಂಡೂ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net