ದ.ಕ. ಇಬ್ಬರು, ಉಡುಪಿ ಐವರು ಆಸ್ಪತ್ರೆಯಲ್ಲಿ

Corona Virus Patient
Published on

ಮಂಗಳೂರು: ಕರೊನಾ ಸೋಂಕು ಶಂಕೆಯ ಮೇಲೆ ವಿದೇಶದಿಂದ ಶುಕ್ರವಾರ ವಿಮಾನ ಮತ್ತು ಕಾರ್ಗೊ ಹಡಗು ಮೂಲಕ ಆಗಮಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 685 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದು, ಸೋಂಕು ಶಂಕಿತ ನಾಲ್ವರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದರೊಂದಿಗೆ ಐಸೊಲೇಶನ್ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಫೆ.15ರ ಬಳಿಕ ಆಗಮಿಸಿರುವ ಎಲ್ಲ ಪ್ರಯಾಣಿಕರ ಮೇಲೆ ವಿಶೇಷ ವೈದ್ಯಕೀಯ ನಿಗಾ ಇಡಲು ದಕ್ಷಿಣ ಕನ್ನಡ ಜಿಲ್ಲಾಡಳಿತ ತೀರ್ಮಾನಿಸಿದೆ. ಅದರಂತೆ ವಿದೇಶಗಳಿಂದ ಆಗಮಿಸಿದವರ ಸಹಿತ ಒಟ್ಟು 54 ಮಂದಿಯನ್ನು ಅವರವರ ಮನೆಗಳಲ್ಲಿಯೇ ಪ್ರತ್ಯೇಕವಾಗಿ ವೈದ್ಯಕೀಯ ನಿಗಾದಲ್ಲಿ ಇರಿಸಲಾಗಿದೆ. ಏಳು ಮಂದಿಯನ್ನು ವಿವಿಧ ಆಸ್ಪತ್ರೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಎಲ್ಲಿಂದ ಬಂದವರು ಎಂಬ ಮಾಹಿತಿಯನ್ನು ಇಲಾಖೆ ಬಹಿರಂಗಪಡಿಸಿಲ್ಲ.

ಶುಕ್ರವಾರ ಕತಾರ್‌ನಿಂದ ಬಂದ ಯುವಕನೊಬ್ಬನನ್ನು ರೋಗ ಲಕ್ಷಣ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಿಂದ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

ಶುಕ್ರವಾರ ಶಂಕಿತ ಆರು ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕೈಸೇರಿರುವ ಹೊಸ ನಾಲ್ಕು ಸ್ಯಾಂಪಲ್‌ಗಳ ಫಲಿತಾಂಶದಲ್ಲಿ ಎಲ್ಲವೂ ನೆಗೆಟಿವ್ (ರೋಗ ಇಲ್ಲ ಎಂದು) ಬಂದಿದೆ.

ಕರೊನಾ ಸೋಂಕು ಬಾಧಿತರು ಅಧಿಕವಿರುವ ಚೀನಾ, ಇಟಲಿ, ಸ್ಪೈನ್, ಫ್ರಾನ್ಸ್, ಜರ್ಮನಿ, ಇರಾನ್ ಮತ್ತು ದಕ್ಷಿಣಕೊರಿಯ ರಾಷ್ಟ್ರಗಳಿಂದ ಆಗಮಿಸಿದ ಪ್ರಯಾಣಿಕರನ್ನು ವೈದ್ಯಕೀಯ ಆದ್ಯತೆಯಲ್ಲಿ ಪರಿಗಣಿಸುವಂತೆ ನಿರ್ದೇಶಿಸಲಾಗಿದೆ.

ಉಡುಪಿ ಐವರು ಶಂಕಿತರಲ್ಲಿ 2 ನೆಗೆಟಿವ್

ಉಡುಪಿ: ಜಿಲ್ಲೆಯಲ್ಲಿ ಒಟ್ಟು ಐದು ಮಂದಿ ಕರೊನಾ ಶಂಕೆಯಿಂದ ಜಿಲ್ಲಾಸ್ಪತ್ರೆ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆಗಳ ಐಸೊಲೇಶನ್ ವಾರ್ಡುಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ಇಬ್ಬರ ವೈದ್ಯಕೀಯ ವರದಿ ನೆಗೆಟಿವ್ ಎಂದು ಬಂದಿದೆ.

ಅನಾರೋಗ್ಯಗೊಂಡಿದ್ದ ಆಂಧ್ರಪ್ರದೇಶ ಹಾಗೂ ಕೇರಳ ನಿವಾಸಿಗಳಾದ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳನ್ನು ಗುರುವಾರ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರಿಗೂ ಕರೊನಾ ಇಲ್ಲವೆಂಬುದು ವರದಿಯಲ್ಲಿ ದೃಢಗೊಂಡಿದೆ. ಈ ಇಬ್ಬರಲ್ಲಿ ಓರ್ವ ಅಮೆರಿಕ, ಇನ್ನೋರ್ವ ಮಲೇಷ್ಯಾಕ್ಕೆ ತೆರಳಿ 10 ದಿನ ತಂಗಿದ್ದು, ಇತ್ತೀಚೆಗಷ್ಟೇ ಮಣಿಪಾಲಕ್ಕೆ ಹಿಂತಿರುಗಿದ್ದರು. ಕರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಮೊಗ್ಗಕ್ಕೆ ಕಳುಹಿಸಲಾದ ಅವರ ಗಂಟಲಿನ ದ್ರವ ಹಾಗೂ ರಕ್ತದ ಮಾದರಿ ಪರೀಕ್ಷೆ ಶುಕ್ರವಾರ ಕೈಸೇರಿದ್ದು, ಅದರಲ್ಲಿ ಸೋಂಕು ಇಲ್ಲ ಎಂಬುದು ಖಚಿತವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಮತ್ತೊಬ್ಬ ದಾಖಲು: ಶುಕ್ರವಾರ ದುಬೈ ಮೂಲದ ವಿದ್ಯಾರ್ಥಿ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿಪಾಲದಲ್ಲಿ ವಿದ್ಯಾರ್ಥಿಯಾಗಿರುವ ಇವರು ಇತ್ತೀಚೆಗೆ ದುಬೈಯಿಂದ ವಾಪಸ್ಸಾಗಿದ್ದರು. ಇವರ ಗಂಟಲಿನ ಸ್ರಾವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಶನಿವಾರ ತಲುಪುವ ನಿರೀಕ್ಷೆ ಇದೆ ಎಂದು ಡಿಎಚ್‌ಒ ಮಾಹಿತಿ ನೀಡಿದ್ದಾರೆ.

ಮಹಿಳೆಗೆ ಮತ್ತೊಮ್ಮೆ ಪರೀಕ್ಷೆ: ಶಂಕಿತ ಕರೊನಾ ವೈರಸ್ ಸೋಂಕಿಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಸಾಗರ ತಾಲೂಕು 68 ವಯಸ್ಸಿನ ಮಹಿಳೆಯ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಶುಕ್ರವಾರ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ. ಶಿವಮೊಗ್ಗ ಆಸ್ಪತ್ರೆಯಲ್ಲಿ ಒಮ್ಮೆ ಹಾಗೂ ಮಣಿಪಾಲದಲ್ಲಿ ನಡೆಸಿದ ಮಾದರಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಆದರೆ ಮಹಿಳೆಯಲ್ಲಿ ಮತ್ತೆ ರೋಗ ಲಕ್ಷಣ ಕಾಣಿಸಿಕೊಂಡಿರುವುದರಿಂದ ಇನ್ನೊಂದು ಪರೀಕ್ಷೆಗಾಗಿ ಮಾದರಿಗಳನ್ನು ಕಳುಹಿಸಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಶಿರ್ವ ಯುವಕ ಜಿಲ್ಲಾಸ್ಪತ್ರೆಗೆ ದಾಖಲು

ಜಪಾನಿ ಹಡಗೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಶಿರ್ವ ಮೂಲದ ಯುವಕ ಶಂಕಿತ ಕರೊನಾ ವೈರಸ್‌ಗೆ ಸಂಬಂಧಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲದಿನಗಳ ಹಿಂದೆ ಕರೊನಾ ವೈರಸ್ ಕಾರಣಕ್ಕಾಗಿ ಜಪಾನಿ ಹಡಗನ್ನು ಹಾಂಗ್‌ಕಾಂಗ್‌ನಲ್ಲಿ ನಿರ್ಬಂಧಿಸಲಾಗಿತ್ತು. ಆ ಹಡಗಿನಲ್ಲಿ ಈ ಯುವಕ ಇದ್ದರು.

ಅಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗದ ಕಾರಣ ಬಿಡುಗಡೆಗೊಂಡು ದುಬೈ ಮೂಲಕ ಎರಡು ದಿನಗಳ ಹಿಂದೆ ಊರಿಗೆ ಆಗಮಿಸಿದ್ದರು. ಯುವಕನಲ್ಲಿ ಕರೊನಾ ವೈರಸ್‌ನ ಲಕ್ಷಣಗಳಾದ ಕೆಮ್ಮು, ಶೀತ, ಜ್ವರ ತೊಂದರೆ ಕಾಣಿಸಿಕೊಂಡಿಲ್ಲ. ಆದರೆ ಉಸಿರಾಟದ ತೊಂದರೆಯೊಂದಿಗೆ ಭೇದಿ ಹಾಗೂ ಹೊಟ್ಟೆನೋವು ಇರುವ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಗಂಟಲಿನ ದ್ರವ ಹಾಗೂ ರಕ್ತದ ಸ್ಯಾಂಪಲ್‌ಗಳನ್ನು ಪರೀಕ್ಷೆಗಾಗಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

ಕೇರಳದಲ್ಲಿ ಬಾಧಿತರ ಸಂಖ್ಯೆ 19ಕ್ಕೇರಿಕೆ

ಕಾಸರಗೋಡು: ಕೇರಳದಲ್ಲಿ ಕರೊನಾ ವೈರಸ್‌ನ ಹೊಸ ಪ್ರಕರಣ ಶುಕ್ರವಾರ ಪತ್ತೆಯಾಗಿದ್ದು, ವೈರಸ್ ಬಾಧಿತರ ಸಂಖ್ಯೆ 19ಕ್ಕೇರಿದೆ. ಗುರುವಾರ ವಿದೇಶದಿಂದ ಕೇರಳಕ್ಕೆ ಬಂದ ಮೂವರಲ್ಲಿ ವೈರಸ್ ಪತ್ತೆಯಾಗಿತ್ತು. ದುಬೈಯಿಂದ ಆಗಮಿಸಿದ ಕಣ್ಣೂರು ನಿವಾಸಿ, ಕತಾರ್‌ನಿಂದ ಆಗಮಿಸಿದ ತೃಶ್ಯೂರ್ ನಿವಾಸಿ ಹಾಗೂ ಇಟೆಲಿಯಿಂದ ಆಗಮಿಸಿದ ತಿರುವನಂತಪುರ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಖಾತೆ ಸಚಿವೆ ಕೆ.ಕೆ ಶೈಲಜಾ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲೆಯಲ್ಲಿ 249 ಮಂದಿಯನ್ನು ನಿಗಾ ವಹಿಸಲಾಗುತ್ತಿದೆ. ಇವರಲ್ಲಿ 239 ಮಂದಿಯನ್ನು ಅವರ ಮನೆಗಳಲ್ಲಿ ಹಾಗೂ ಹತ್ತು ಮಂದಿಯನ್ನು ಆಸ್ಪತ್ರೆಗಳಲ್ಲಿರಿಸಿ ನಿಗಾವಹಿಸಲಾಗುತ್ತಿದೆ. ವಿದೇಶದಿಂದ ಆಗಮಿಸುವವರು ಜಿಲ್ಲಾ ಕರೊನಾ ಕಂಟ್ರೋಲ್ ಸೆಲ್ ಅಥವಾ ಇತರ ನಿಗದಿತ ಕೇಂದ್ರಗಳಲ್ಲಿ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 5468 ಮಂದಿ ಮೇಲೆ ನಿಗಾ ಇರಿಸಲಾಗುತ್ತಿದೆ. ಇವರಲ್ಲಿ 271 ಮಂದಿಯನ್ನು ಆಸ್ಪತ್ರೆಯಲ್ಲಿರಿಸಿ ನಿಗಾ ವಹಿಸಲಾಗುತ್ತಿದೆ. ಒಟ್ಟು 1715 ಮಂದಿಯ ರಕ್ತದ ಮಾದರಿ ಸಂಗ್ರಹಿಸಲಾಗಿದ್ದು, ಇದರಲ್ಲಿ 1132 ವರದಿ ಋಣಾತ್ಮಕವಾಗಿದೆ. ಉಳಿದ ವರದಿ ಇನ್ನಷ್ಟೆ ಲಭಿಸಬೇಕಾಗಿದೆ.

ಮದ್ಯ ಮಾರಾಟ ತಡೆಗೆ ಆಗ್ರಹ:

ಕರೊನಾ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಕೇರಳ ರಾಜ್ಯದಲ್ಲಿ ಮದ್ಯ ಮಾರಾಟ ಕೇಂದ್ರಗಳನ್ನು ಮುಚ್ಚುವಂತೆ ಕಾಂಗ್ರೆಸ್ ಮುಖಂಡ ವಿ.ಎಂ ಸುಧೀರನ್ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಬೀವರೇಜಸ್ ಮದ್ಯ ಮಾರಾಟ ಕೇಂದ್ರ ಹಾಗೂ ಬಾರ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದು, ವೈರಸ್ ಹರಡಲು ಇದು ಪ್ರಮುಖ ಕೇಂದ್ರಗಳಾಗುವ ಸಾಧ್ಯತೆಯಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿಮಾನ ಖಾಲಿ ಖಾಲಿ

ಕರೊನಾ ಆತಂಕ ವಿಮಾನ ಯಾನ ಕಂಪನಿಗಳ ಆದಾಯದ ಮೇಲೆ ಹೆಚ್ಚಿನ ಹೊಡೆತ ನೀಡಿದೆ. ದೇಶೀಯವಾಗಿ ಸಂಚರಿಸುವ ಹೆಚ್ಚಿನ ವಿಮಾನಗಳು ಸಾಮರ್ಥ್ಯದ ಅರ್ಧದಷ್ಟು ಪ್ರಯಾಣಿಕರಿಲ್ಲದೆ ಸಂಚರಿಸುತ್ತಿವೆ. ಅಂತಾರಾಷ್ಟ್ರೀಯ ವಿಮಾನ ಯಾನಕ್ಕೆ ಕರೊನಾ ಆತಂಕ ಹೆಚ್ಚು ಬಾಧಿಸಿದ್ದು, ಕೆಲ ವಿಮಾನಗಳು ನಷ್ಟದ ಹೊರೆ ತಪ್ಪಿಸಲು ತಾತ್ಕಾಲಿಕವಾಗಿ ಸಂಪರ್ಕಿಸುವ ಪ್ರದೇಶಗಳನ್ನು ಅಧಿಕಗೊಳಿಸಿವೆ ಎಂದು ವಿಮಾನ ಯಾನ ಸಂಸ್ಥೆಯೊಂದರ ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. ಕುವೈತ್, ಕತಾರ್, ಸೌದಿ ಅರೇಬಿಯಾ ಮತ್ತು ಭಾರತ ನಡುವಿನ ವಿಮಾನ ಯಾನ ಸಂಪರ್ಕ ಈಗಾಗಲೇ ರದ್ದುಗೊಂಡಿವೆ.

ನಮಾಜ್‌ನಲ್ಲಿ ನಾಝಿಲತಿನ ಖುನೂತು

ಕರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಎಲ್ಲ ಮಸೀದಿಗಳಲ್ಲಿ ಖತೀಬರು ಫರ್ಳ್ ನಮಾಜ್‌ನಲ್ಲಿ ನಾಝಿಲತಿನ ಖುನೂತು ಓದಬೇಕು ಹಾಗೂ ಇಂತಹ ವಿಪತ್ತುಗಳಿಂದ ನಮ್ಮನ್ನು ರಕ್ಷಿಸಲು ದಾನ, ಧರ್ಮದಲ್ಲಿ ತೊಡಗಿಸಿಕೊಳ್ಳಬೇಕು ಎಂದು ದ.ಕ ಜಿಲ್ಲಾ ಖಾಜಿ ಅಲ್-ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ತಿಳಿಸಿದ್ದಾರೆ.

ರೈತರ, ಸಹಕಾರಿಗಳ ಸಮ್ಮೇಳನ ಮುಂದೂಡಿಕೆ

ಮಾ.14ರಂದು ಮಂಗಳೂರಿನ ಪುರಭವನದಲ್ಲಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ-ಆಪರೇಟಿವ್ ಲಿ., ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲು ಉದ್ದೇಶಿಸಿದ್ದ ರೈತರ, ಸಹಕಾರಿಗಳ ಮತ್ತು ಮಹಿಳಾ ಸ್ವಸಹಾಯ ಸಂಘಗಳ ಸಮ್ಮೇಳನವನ್ನು ಮುಂದೂಡಲಾಗಿದೆ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಲ್ಲಿ ಬೀದಿಬದಿ ವ್ಯಾಪಾರ ನಿಷೇಧ

ಕರೊನಾ ಭೀತಿ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿ ಬೀದಿಬದಿ ತಿಂಡಿ ತಿನಿಸು ವ್ಯಾಪಾರ ನಿಷೇಧಿಸಲಾಗಿದೆ ಎಂದು ಮನಪಾ ಆಯುಕ್ತರು ತಿಳಿಸಿದ್ದಾರೆ. ಸಾರ್ವಜನಿಕರ ಆರೋಗ್ಯ ಹಾಗೂ ಸ್ವಚ್ಛತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಶನಿವಾರದಿಂದಲೇ ಬೀದಿ ವ್ಯಾಪಾರವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು. ತಪ್ಪಿದಲ್ಲಿ ಸೋಮವಾರದಿಂದಲೇ ಪಾಲಿಕೆ ವತಿಯಿಂದ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಕರೊನಾ ಜತೆ ಕಾಲರಾ ರೋಗ ಹರಡುವ ಭೀತಿ ಇದ್ದು, ನಾಗರಿಕರು ಆರೋಗ್ಯಕರವಾದ ಸ್ವಚ್ಛ ಆಹಾರವನ್ನು ಸೇವಿಸಲು ಗಮನ ಹರಿಸಬೇಕು ಎಂದು ಆಯುಕ್ತರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net