

ತೀರ್ಥಹಳ್ಳಿ: ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಬುಧವಾರ ತುಂಗಾನದಿಯಲ್ಲಿರುವ ಪುರಾಣ ಪ್ರಸಿದ್ಧ ಪರಶುರಾಮ ತೀರ್ಥದಲ್ಲಿ ಸಹಸ್ರಾರು ಮಂದಿ ಭಕ್ತರು ತೀರ್ಥಸ್ನಾನ ಮಾಡಿ ಶ್ರೀ ರಾಮೇಶ್ವರನ ದರ್ಶನ ಪಡೆದರು.
ಕರೊನಾ ಆತಂಕದ ನಡುವೆಯೂ ತೀರ್ಥಸ್ನಾನದಲ್ಲಿ ಎಳೆಯ ಮಕ್ಕಳು, ಮಹಿಳೆಯರು ಸೇರಿ ಬುಧವಾರ ನಸುಕಿನಿಂದಲೇ ಜನರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದು ಈ ಬಾರಿಯ ವಿಶೇಷವಾಗಿತ್ತು. ಮಧ್ಯಾಹ್ನದವರೆಗೂ ಉದ್ದನೆಯ ಸಾಲು ನಿರ್ವಣವಾಗಿದ್ದು ಸಂಜೆಯವರೆಗೂ ತೀರ್ಥಸ್ನಾನದಲ್ಲಿ ಜನರು ಪಾಲ್ಗೊಂಡಿದ್ದರು. ಪೋಲಿಸ್ ಇಲಾಖೆ ಹಾಗೂ ಸ್ಥಳೀಯ ಸ್ವಯಂ ಸೇವಕರ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಳೆದ ಒಂದು ವಾರದಿಂದ ಸುರಿದಿದ್ದ ಮಳೆಯಿಂದಾಗಿ ನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದ್ದು ರಾಮಕೊಂಡದ ಬಳಿ ಸುಮಾರು ನಾಲ್ಕೈದು ಅಡಿಯಷ್ಟು ನೀರಿನ ಏರಿಕೆಯಾಗಿ ನೀರಿನ ಸೆಳೆವಿನಿಂದ ಮಂಟಪದ ಬಳಿ ಹೋಗಲಾರದ ಸ್ಥಿತಿ ನಿರ್ವಣವಾಗಿತ್ತು. ಸ್ಥಳೀಯಾಡಳಿತ ಜನರ ಸುರಕ್ಷತೆಯ ದೃಷ್ಟಿಯಿಂದ ನೂರಾರು ಮರಳು ಚೀಲಗಳನ್ನು ಬಳಸಿ ನೀರಿನ ಒತ್ತಡವನ್ನು ಕಡಿಮೆ ಮಾಡಿದ್ದಲ್ಲದೆ ಎರಡು ಕಡೆಗಳಲ್ಲಿ ವ್ಯವಸ್ಥಿತವಾಗಿ ತಾತ್ಕಾಲಿಕ ಸೇತುವೆ ನಿರ್ವಿುಸಿದ ಕಾರಣ ದೇವರ ತೀರ್ಥಾಭಿಷೇಕ ಮತ್ತು ತೀರ್ಥಸ್ನಾನ ಸುಗಮವಾಗಿ ನೆರವೇರಿತು.