ಕರೊನಾ ಕರಿನೆರಳು: ಸಿಂಧನೂರು-ದೇವದುರ್ಗ ನಗರಗಳಲ್ಲಿ ಮುಚ್ಚಿದ ಅಂಗಡಿ-ಮುಂಗಟ್ಟು

200320 Sindhanuru Corona Awarness Programmee
Published on

ಸಿಂಧನೂರು: ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ಹೊರಡಿಸಿರುವ ನಿಷೇಧಾಜ್ಞೆಯಿಂದ ನಗರದ ಎಲ್ಲಾ ಅಂಗಡಿ-ಮುಂಗಟ್ಟು, ಎಪಿಎಂಸಿ ಮಾರುಕಟ್ಟೆಯಲ್ಲಿ ಶುಕ್ರವಾರ ವ್ಯಾಪಾರ ಸ್ಥಗಿತಗೊಳಿಸಲಾಗಿತ್ತು.

ನಗರಸಭೆ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ನಗರಾದ್ಯಂತ ತೆರೆದಿದ್ದ ಅಂಗಡಿಗಳನ್ನು ಬೆಳಗ್ಗೆ 8 ಗಂಟೆಯಿಂದಲೇ ಮುಚ್ಚಿಸಿದರು. ಕೆಲವರು ಸ್ವಯಂ ಬಂದ್ ಮಾಡಿಕೊಂಡಿರು. ಇದರಿಂದ ಜನಜಂಗುಳಿಯಿಂದ ತುಳುಕುತ್ತಿದ್ದ ನಗರ ಸ್ತಬ್ಧಗೊಂಡಿದ್ದು ಬಸ್ ಓಡಾಟ ಬಿಟ್ಟರೆ ಉಳಿದಂತೆ ಮುಖ್ಯರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು.

ನಗರದ ಅಶೋಕ ಭವನ, ಬಸವವೃತ್ತ, ಗಾಂಧಿವೃತ್ತ, ಕನಕದಾಸ ವೃತ್ತದಲ್ಲಿನ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದವು. ಔಷಧ ಅಂಗಡಿ, ಕ್ಲಿನಿಕ್ ಹೊರೆತುಪಡಿಸಿ ಹೋಟೆಲ್, ಕಿರಾಣಿ ಅಂಗಡಿಗಳು ಕೂಡ ಬಂದ್ ಮಾಡಿಸಲಾಗಿತ್ತು. ತಹಸೀಲ್ದಾರ್ ಮಂಜುನಾಥ ಭೋಗಾವತಿ, ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಹಾಗೂ ಪಿಎಸ್‌ಐ ವಿಜಯಕೃಷ್ಣ ನೇತೃತ್ವದ ತಂಡ ನಗರದೆಲೆಲ್ಲ ರೌಂಡ್ಸ್ ಹಾಕಿ ವ್ಯಾಪಾರಿಗಳಿಗೆ, ಜನರಿಗೆ ಕರೊನಾ ವೈರಸ್ ತಡೆಯುವ ಕಾರಣಕ್ಕೆ ವಹಿವಾಟು ನಡೆಸದಂತೆ ಮನವಿ ಮಾಡಿದರು.

ದೇವದುರ್ಗದ ಬಸ್ ನಿಲ್ದಾಣ ರಸ್ತೆಯಲ್ಲಿ ಕರೊನಾ ಭೀತಿ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು.
ದೇವದುರ್ಗದ ಬಸ್ ನಿಲ್ದಾಣ ರಸ್ತೆಯಲ್ಲಿ ಕರೊನಾ ಭೀತಿ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಆಗಿದ್ದವು.

ದೇವದುರ್ಗ: ಮನುಕುಲದ ಮಾರಕ ರೋಗ ಕರೊನಾ ವೈರಸ್ ತಡೆಯ ಮುಂಜಾಗ್ರತೆ ಕ್ರಮವಾಗಿ ಮಾ.31ರವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೆಂಕಟೇಶ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ದೇವದುರ್ಗ ಭಾಗಶಃ ಬಂದ್ ಆಗಿತ್ತು.ಬೆಳಗ್ಗೆಯಿಂದಲೇ ಪುರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸರು ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳಿಗೆ ತೆರಳಿ ವ್ಯಾಪಾರ ವಹಿವಾಟು ಬಂದ್ ಮಾಡಿಸಿದರು. ಇದಕ್ಕೆ ಕೆಲ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ, ಅವರನ್ನು ಅಧಿಕಾರಿಗಳು ತರಾಟೆ ತೆಗೆದುಕೊಂಡರು. ತಕ್ಷಣವೇ ಅಂಗಡಿ ಮುಚ್ಚಲು ಆದೇಶಿಸಿದರು.

ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನಂತೆ ವಿವಿಧ ಮಾರ್ಗಗಳಿಗೆ ಸಂಚರಿಸಿದರೆ, ಖಾಸಗಿ ವಾಹನ, ಆಟೋ, ಟಂಟಂ, ಮರಳಿನ ಟಿಪ್ಪರ್, ದೊಡ್ಡ ವಾಹನಗಳು ಸೇರಿ ಬೈಕ್‌ಗಳು ಎಂದಿನಂತೆ ಓಡಾಡಿದವು. ಕರೊನಾ ಭೀತಿ ಹಾಗೂ ಬಿಸಿಲಿನ ಪ್ರಮಾಣ ಹೆಚ್ಚಿರುವ ಕಾರಣ ಕೆಲ ಪ್ರದೇಶಗಳು ಜನರಿಲ್ಲದ ಕಾರಣ ಬಿಕೋ ಎನ್ನುತ್ತಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net