ರೇಷ್ಮೆ ಕೃಷಿ ಮೇಲೆ ಕರೊನಾ ಕರಿನೆರಳು

ramnagara-cocoon-market
Published on

ತುಮಕೂರು: ಜಿಲ್ಲೆಯಲ್ಲಿ 9578 ಬೆಳೆಗಾರರು ರೇಷ್ಮೆ ಕೃಷಿ ಕೈಗೊಂಡಿದ್ದು, 4871.30 ಹೆ. ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಸಿ 3286 ಮೆಟ್ರಿಕ್ ಟನ್ ರೇಷ್ಮೆಗೂಡು ಉತ್ಪಾದಿಸಿದ್ದಾರೆ.

ರೇಷ್ಮೆ ಬೆಳೆಯುವ ಪ್ರಮುಖ ಪ್ರದೇಶವಾಗಿ ಗುರುತಿಸಿಕೊಂಡಿರುವ ಜಿಲ್ಲೆಯಲ್ಲಿ ಎಲ್ಲ ತಳಿಯ ಗೂಡುಗಳನ್ನು ಉತ್ಪಾದಿಸಲಾಗುತ್ತಿದ್ದು, ಚೀನಾದಲ್ಲಿ ಕಾಣಿಸಿಕೊಂಡಿರುವ ಕರೊನಾ ಮಹಾಮಾರಿ ರೇಷ್ಮೆಗೆ ಬೇಡಿಕೆ ತಗ್ಗಿಸಿದ್ದು, ಆತಂಕ ಎದುರಾಗಿದೆ.

ಕುಣಿಗಲ್ ಮತ್ತು ಹೆಬ್ಬೂರು ಹೋಬಳಿಗಳಲ್ಲಿ ಶುದ್ಧ ಮೈಸೂರು ಬಿತ್ತನೆ ತಳಿ, ತುರುವೇಕೆರೆ, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕುಗಳಲ್ಲಿ ಶುದ್ಧ ದ್ವಿತಳಿ ಬಿತ್ತನೆಗೂಡು ಉತ್ಪಾದಿಸಲಾಗಿದೆ. ವಾಣಿಜ್ಯ (ರೀಲಿಂಗ್) ಗೂಡುಗಳಾದ ದ್ವಿತಳಿ ಸಂಕರಣ ಹಾಗೂ ಮಿಶ್ರತಳಿ ಗೂಡು ಉಳಿದ ತಾಲೂಕುಗಳಲ್ಲಿದೆ. ರೇಷ್ಮೆಹುಳು ಸಾಕಾಣಿಕೆ ಮನೆ, ಚಂದ್ರಿಕೆ ಮನೆ ನಿರ್ಮಿಸಲು, ಹುಳು ಸಾಕಾಣಿಕೆ ಸಲಕರಣೆಗಳಿಗೆ ಸಹಾಯಧನ, ದ್ವಿತಳಿ ಚಾಕಿ, ದ್ವಿತಳಿ ಬಿತ್ತನೆ ಗೂಡುಗಳಿಗೆ ಪ್ರೋತ್ಸಾಹಧನ, ಸೋಂಕು ನಿವಾರಕ ನೀಡುವ ಶಾಸ್ತ್ರವನ್ನು ರೇಷ್ಮೆ ಇಲಾಖೆ ಮಾಡುತ್ತಿದೆ.

ರೈತರಿಗೆ ಸಕಾಲಕ್ಕೆ ತಲುಪದ ಯೋಜನೆ: ಸರ್ಕಾರದಿಂದ ಬೆಳೆಗಾರರಿಗೆ ಉತ್ತೇಜನ ನೀಡಲು ಸಾಕಷ್ಟು ಯೋಜನೆಗಳಿದ್ದು ಇದರ ಉಪಯೋಗ ಪಡೆದವರೇ ಮತ್ತೆ ಪಡೆದಿರುವುದು ಹೆಚ್ಚು. ಪಿಎಂಕೆಎಸ್‌ವೈ ಯೋಜನೆಯಲ್ಲಿ ಹನಿನೀರಾವರಿ, ಆರ್‌ಕೆವಿವೈನಲ್ಲಿ ಮಣ್ಣಿನ ಫಲವತ್ತತೆಗೆ ಸಹಾಯಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ರೇಷ್ಮೆ ಇಲಾಖೆ 2020 ಜನವರಿ ಅಂತ್ಯಕ್ಕೆ 1.41ಕೋಟಿ ಆರ್ಥಿಕ ಗುರಿ ಸಾಧಿಸಿ ಶೇ.88 ಪ್ರಗತಿ ಸಾಧಿಸಿ ತನ್ನ ಬೆನ್ನು ತಾನೆ ತಟ್ಟಿಕೊಂಡಿದೆ. ವಾಸ್ತವವಾಗಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಾಗಿಲ್ಲ, ಯುವ ರೈತರಿಗೆ ರೇಷ್ಮೆ ಬೆಳೆಯ ಲಾಭದ ಬಗ್ಗೆ ಪ್ರಚಾರದ ಕೊರತೆಯಿದೆ. ಸರ್ಕಾರದಿಂದ ನೀಡುವ ಸಹಾಯಧನ ಹೊಸ ರೈತರಿಗೆ ತಲುಪಿಸುವ ಕೆಲಸ ರೇಷ್ಮೆ ಇಲಾಖೆ ಮಾಡಬೇಕಿದೆ.

ರೈತರ ಮೇಲೆ ಚೀನಾ ಮಾರುಕಟ್ಟೆ ಪ್ರಭಾವ: ಪ್ರಸ್ತುತ ಚೀನಾದಲ್ಲಿ ಕಾಣಿಸಿಕೊಂಡಿರುವ ಕರೊನಾ ಕರಿನೆರಳು ಭಾರತೀಯ ರೈತರ ಮೇಲೂ ಬಿದ್ದಿದೆ. ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ಅಗ್ಗದ ರೇಷ್ಮೆಗೆ ಕಡಿವಾಣ ಬೀಳಲಿದ್ದು, ಭಾರತೀಯ ರೇಷ್ಮೆಗೆ ಮಾರುಕಟ್ಟೆ ಸೃಷ್ಟಿಯಾಗಲಿದೆ ಎಂಬ ಆಶಾಭಾವನೆ ರೈತರಲ್ಲಿದೆ. ಭಾರತೀಯ ರೇಷ್ಮೆ ಗುಣಮಟ್ಟದಿಂದ ಕೂಡಿರುವ ಹಿನ್ನೆಲೆಯಲ್ಲಿ ಹೆಚ್ಚು ಬೆಲೆಗೆ ಮಾರಾಟ ಮಾಡಬೇಕಿತ್ತು. ಚೀನಾದ ಅಗ್ಗದ ರೇಷ್ಮೆ ಭಾರತೀಯ ಮಾರುಕಟ್ಟೆಯನ್ನು ಮಂಕಾಗಿಸಿತ್ತು.

ರೇಷ್ಮೆ ಬೆಳೆಗೆ ವೈಜ್ಞಾನಿಕವಾದ ಬೆಲೆ ನಿಗದಿಯಾದರೆ ಬೆಳೆಗಾರರ ಸಂಖ್ಯೆಯೂ ಜಾಸ್ತಿಯಾಗಲಿದೆ. ರೇಷ್ಮೆ ಇಲಾಖೆ ಅಧಿಕಾರಿಗಳು ಸರ್ಕಾರದ ಹಣ ಖರ್ಚು ಮಾಡಲಷ್ಟೇ ಉತ್ಸಾಹ ತೋರಿಸುತ್ತಾರೆ. ರೇಷ್ಮೆ ಬೆಳೆಯುವ ಹೊಸ ರೈತರು ತುಂಬಾ ಕಡಿಮೆ. ಪ್ರವೀಣ್ ರೇಷ್ಮೆ ಕೃಷಿಕ ಪಾವಗಡ ರೇಷ್ಮೆ ಬೆಳೆಗಾರರಿಗೆ ಉತ್ತೇಜನ ನೀಡುವ ಸಲುವಾಗಿ ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳಿವೆ, ಆಸಕ್ತ ರೈತರು ರೇಷ್ಮೆ ಇಲಾಖೆ ಕಚೇರಿಗೆ ಬಂದು ಮಾಹಿತಿ ನೀಡಿದರೆ ಅವರಿಗೆ ಎಲ್ಲ ರೀತಿಯ ಮಾರ್ಗದರ್ಶನ ನೀಡುತ್ತೇವೆ. ಚಂದ್ರಮೂರ್ತಿ ಉಪನಿರ್ದೇಶಕ ರೇಷ್ಮೆ ಇಲಾಖೆ, ತುಮಕೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net