

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕೀಯ ಜೀವನದಲ್ಲಿ ಸಾಕಷ್ಟು ಬಾರಿ ಹಲ್ಲೆಗೆ ಒಳಗಾಗಿದ್ದಾರೆ. ಕೊಲೆ ಬೆದರಿಕೆಗಳೂ ಬಂದಿವೆ. ಯಾರದ್ದೋ ಆಶ್ರಯದಲ್ಲಿ ಬೆಳೆದುಬಂದ ರಾಜಕಾರಣಿ ಅವರಲ್ಲ. ಹುಟ್ಟು ಹೋರಾಟದಿಂದ ಬೆಳೆದು ಬಂದಿರುವ ಅವರನ್ನು ಯಾರೂ ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ವಿನೋಬನಗರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೊನಾ ಹಗರಣ ನಡೆಸಲಾಗಿದೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಈ ರೀತಿಯ ಆರೋಪಗಳು ಹೊಸದಲ್ಲ. ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿಬಂದಾಗ ನಮಗೆ ನ್ಯಾಯ ಸಿಕ್ಕಿದೆ. ಕರೊನಾ ಸಂದರ್ಭದಲ್ಲಿ ಹಗರಣ ನಡೆದಿದೆ ಎಂದು ರಾಜ್ಯ ಸರ್ಕಾರ ಇದೀಗ ಬಿಂಬಿಸಲು ಹೊರಟಿದೆ. ಅದರಲ್ಲೂ ಬಿಜೆಪಿಗೆ ನ್ಯಾಯ ಸಿಗಲಿದೆ. ಇದೀಗ ರಾಜ್ಯ ಸರ್ಕಾರ ಮಾಡಿರುವ ಆರೋಪ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ದೂರಿದರು.
ಸಿಎಂ ಆಗಿದ್ದ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವರಾಗಿದ್ದ ಬಿ.ಶ್ರೀರಾಮುಲು ಅವರು ಕರೊನಾ ನಿರ್ವಹಣೆಯಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದರು. ಆದರೆ ಮುಡಾ, ವಾಲ್ಮೀಕಿ ಹಗರಣ, ಇದೀಗ ವಕ್ಫ್ ಬೋರ್ಡ್‌ನ ಅವಾಂತರ ಮುಚ್ಚಿಕೊಳ್ಳಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರೊನಾ ಹಗರಣ ನಡೆದಿದೆ ಎಂದು ದುರುದ್ದೇಶದಿಂದ ನೋಟಿಸ್ ಕೊಟ್ಟಿದ್ದಾರೆ.
ಕರೊನಾ ಮಹಾಮಾರಿ ಬಂದಾಗ ಬಿಜೆಪಿ ಸರ್ಕಾರ ಜನರ ಜತೆ ನಿಂತಿತ್ತು. ಕರೊನಾ ಹಾವಳಿಯಿಂದ ಜನರ ಜೀವ ಉಳಿಸಲು ಪ್ರಯತ್ನ ನಡೆಸಿತ್ತು. ಆದರೆ ರಾಜಕಾರಣಕ್ಕಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ತಮ್ಮ ಸರ್ಕಾರದ ಹಗರಣಗಳನ್ನು ಮುಚ್ಚಿಕೊಳ್ಳುವ ಸಲುವಾಗಿ ಆರೋಪ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಆರೋಪಕ್ಕೂ ಕೋರ್ಟ್ ತಡೆಯಾಜ್ಞೆ ನೀಡಿದೆ. ಅದೇ ರೀತಿ ನ್ಯಾಯಾಲಯದಲ್ಲಿ ಕರೊನಾ ವಿಚಾರದಲ್ಲೂ ನಮಗೆ ನ್ಯಾಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿಎಂ ವಿರುದ್ಧ, ಮುಡಾ, ವಾಲ್ಮೀಕಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿರುವ ಇಂತಹ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಯಾವ ಚಕಾರವನ್ನೂ ಎತ್ತದೆ ದುರುದ್ದೇಶದಿಂದ ವಿಪಕ್ಷಗಳ ವಿರುದ್ಧ ಮುಗಿಬೀಳುವ ಮೂಲಕ ಜನರ ಗಮನ ಬೇರೆಡೆ ತಿರುಗಿಸುವ ಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.