ವಿವಿಧ ಇಲಾಖೆಗಳಿಗೆ ಕರೊನಾ ಕಾಟ : ಕರ್ತವ್ಯ ನಿರ್ವಹಣೆ ಸೇರಿ ನಾನಾ ಚಟುವಟಿಕೆಗೆ ತೊಡಕು

Corona
Published on

ಚಿಕ್ಕಬಳ್ಳಾಪುರ: ಮೂರನೇ ಅಲೆ ದಿನದಿಂದ ದಿನಕ್ಕೆ ವ್ಯಾಪಿಸುತ್ತಿದ್ದು, ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಈ ನಡುವೆ ವಿವಿಧ ಇಲಾಖೆಗಳಿಗೆ ಕರೊನಾ ಕಾಟ ತಲೆ ನೋವಾಗಿದೆ.

ಪೊಲೀಸ್, ಆರೋಗ್ಯ, ಕೃಷಿ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿನ ಹೆಚ್ಚಿನ ಸಿಬ್ಬಂದಿ ಸೋಂಕಿಗೆ ತುತ್ತಾಗಿ ಹೋಂ ಐಸೋಲೇಷನ್‌ನಲ್ಲಿ ಸ್ವಯಂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಕಚೇರಿಗೆ ಹಾಜರಾತಿ, ಕರ್ತವ್ಯ ನಿರ್ವಹಣೆ ಸೇರಿ ನಾನಾ ಚಟುವಟಿಕೆಗೆ ತೊಡಕಾಗಿದ್ದು, ಇರುವ ಸಿಬ್ಬಂದಿ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ.

ಕರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಸಿಬ್ಬಂದಿ ಪೈಕಿ ಕೇವಲ ಶೇ.5ರಷ್ಟು ಮಂದಿಗೆ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ, ಇದೀಗ ಶೇ.15ರಷ್ಟು ಕಂಡು ಬಂದಿದ್ದು, ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ.

ಚಿಂತಾಮಣಿಯ ಕೃಷಿ ತರಬೇತಿ ಕೇಂದ್ರ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ವಿವಿಧ ಠಾಣೆಗಳ ಪೊಲೀಸರು, ವಿವಿಧ ಶಾಲೆಗಳ ಶಿಕ್ಷಕರು ಸೇರಿ ವಿವಿಧ ಇಲಾಖೆಯಲ್ಲಿನ ಸಿಬ್ಬಂದಿಯ ಆರೋಗ್ಯದಲ್ಲಿ ಏರುಪೇರು ಕಂಡು, ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.

1239 ಕ್ಕೆ ಏರಿಕೆ: ಭಾನುವಾರ 137 ಹೊಸ ಪ್ರಕರಣಗಳ ದೃಢಪಡುವುದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯು 1239ಕ್ಕೆ ಏರಿಕೆಯಾಗಿದೆ. ಅದರಲ್ಲೂ ಚಿಕ್ಕಬಳ್ಳಾಪುರದಲ್ಲಿ 439 ಇದ್ದು ಗುಡಿಬಂಡೆ ಹೊರತುಪಡಿಸಿ ಉಳಿದ ತಾಲೂಕುಗಳಲ್ಲಿ ಪ್ರಕರಣಗಳ ಸಂಖ್ಯೆ ನೂರರ ಗಡಿ ದಾಟಿವೆ. ಗೌರಿಬಿದನೂರು ದ್ವಿಶತಕ ಬಾರಿಸಿದೆ. ಇನ್ನು, ಪ್ರಸ್ತುತ ಸೋಂಕು ಪ್ರಕರಣಗಳ ಏರಿಕೆ ಪ್ರಮಾಣದ ಆಧಾರದ ಮೇಲೆ ಒಂದು ವಾರದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯು 2 ಸಾವಿರ ದಾಟುತ್ತದೆ ಎಂಬುದಾಗಿ ಅಂದಾಜಿಸಲಾಗಿದೆ.

ರಾಜಧಾನಿಯಿಂದಲೇ ಹೆಚ್ಚಿದ ಸೋಂಕು: ಬೆಂಗಳೂರಿನಲ್ಲಿ ಕರೊನಾ ಸ್ಫೋಟಿಸಿದೆ. ಪ್ರತಿಷ್ಠಿತ ಖಾಸಗಿ ಕಂಪನಿಗಳ ಉದ್ಯೋಗಿಗಳು, ಮಾರುಕಟ್ಟೆಗೆ ವಾಹನ ಚಾಲಕರು ಮತ್ತು ಸಿಬ್ಬಂದಿ, ಸಭೆ ಸಮಾರಂಭ ಮತ್ತು ಇತರ ಕೆಲಸಗಳ ಹಿನ್ನೆಲೆಯಲ್ಲಿ ಪ್ರತಿನಿತ್ಯ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ರಾಜಧಾನಿಗೆ ತೆರಳುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ರೈಲಿನಲ್ಲಿ ಪ್ರಯಾಣಿಕರು ತುಂಬಿ ತುಳುಕಾಡುತ್ತಿರುತ್ತಾರೆ. ಇದು ಸೋಂಕು ಪ್ರಕರಣಗಳ ಹೆಚ್ಚಳವಾಗಲು ಪ್ರಮುಖ ಕಾರಣ ಎಂಬ ಮಾತು ಕೇಳಿ ಬಂದಿದೆ. ಮತ್ತೊಂದೆಡೆ ಕಳೆದ ಒಂದು ವಾರದಿಂದ ಪ್ರತಿದಿನ ಹೊಸ ಪ್ರಕರಣಗಳ ಪತ್ತೆ ಪ್ರಮಾಣವು ಸರಾಸರಿ 100ರಲ್ಲಿದೆ. ಇದರಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲೆ ನಿರ್ವಹಣೆಯ ಒತ್ತಡ ಹೆಚ್ಚಾಗುತ್ತಿದೆ.

ಲಸಿಕಾ ಅಭಿಯಾನದ ಆತಂಕ: ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಜಿಲ್ಲಾದ್ಯಂತ ಫೆ.27 ರಂದು ಮಕ್ಕಳಿಗೆ ಲಸಿಕೆ ಹಾಕುವಿಕೆ, ಮೂರು ಹಂತದಲ್ಲಿ (ಫೆ.7, ಮಾ.7 ಹಾಗೂ ಏ.4 ರವರೆಗೆ) ಇಂದ್ರ ಧನುಷ್ ಲಸಿಕಾ ಅಭಿಯಾನ ಕೈಗೊಳ್ಳಲಾಗುತ್ತಿದೆ. ಕರೊನಾ ಲಸಿಕಾರಣವೂ ನಡೆಯುತ್ತಿದೆ. ಇದರ ನಡುವೆ ಆರೋಗ್ಯ ಇಲಾಖೆಯ ಸಿಬ್ಬಂದಿಯಲ್ಲಿ ಸೋಂಕು ಪತ್ತೆಯು ಆತಂಕ ತಂದಿದೆ.

ಶಿಡ್ಲಘಟ್ಟ                 14                      169

ಗುಡಿಬಂಡೆ                5                        91

ಗೌರಿಬಿದನೂರು           45                      239

ಚಿಂತಾಮಣಿ              12                      198

ಬಾಗೇಪಲ್ಲಿ                5                       103

ಚಿಕ್ಕಬಳ್ಳಾಪುರ            56                      439

ತಾಲೂಕು          ಭಾನುವಾರದ ಪ್ರಕರಣ     ಸಕ್ರಿಯ ಪ್ರಕರಣ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net