ಶೇ.50 ಬೆಡ್ ಮೀಸಲು ಕಡ್ಡಾಯ: ಖಾಸಗಿ ಆಸ್ಪತ್ರೆಗಳಿಗೆ ಡಿಸಿ ಎಚ್ಚರಿಕೆ

19 smg 11
Published on

ಶಿವಮೊಗ್ಗ: ಕರೊನಾ 2ನೇ ಅಲೆ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಆದರೂ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ಆದೇಶದ ಪ್ರಕಾರ ತಮ್ಮಲ್ಲಿರುವ ಬೆಡ್‌ಗಳ ಪೈಕಿ ಶೇ.50ನ್ನು ಕಡ್ಡಾಯವಾಗಿ ಮೀಸಲಿಡಬೇಕು. ಜಿಲ್ಲಾಡಳಿತದಿಂದ ಪೂರ್ವಾನುಮತಿ ಇಲ್ಲದೆ ಮೀಸಲು ಬೆಡ್‌ಗಳನ್ನು ಬಳಕೆ ಮಾಡಿಕೊಳ್ಳುವಂತಿಲ್ಲ ಎಂದು ಡಿಸಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದರು.

ಡಿಸಿ ಕಚೇರಿಯಲ್ಲಿ ಸೋಮವಾರ ಖಾಸಗಿ ಆಸ್ಪತ್ರೆ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, ಕರೊನಾ ಪಾಸಿಟಿವ್ ಸಂಖ್ಯೆ ಪ್ರತಿದಿನ ಹೆಚ್ಚಾಗುತ್ತಿದ್ದು ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಗಳ ಸೌಲಭ್ಯ ಬಳಸಿಕೊಳ್ಳುವುದು ಅನಿವಾರ್ಯ ಎಂದರು.

ಅಂತಹ ಪರಿಸ್ಥಿತಿ ಎದುರಿಸಲು ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿನ ಜನರಲ್ ಬೆಡ್, ಆಕ್ಸಿಜನ್ ಬೆಡ್, ಐಸಿಯು, ವೆಂಟಿಲೇಟರ್ ಸೌಲಭ್ಯ ಹೊಂದಿರುವ ಬೆಡ್‌ಗಳ ಪೈಕಿ ಶೇ.50ನ್ನು ಸರ್ಕಾರದ ಕೋಟಾದಡಿ ನೀಡಲೇಬೇಕು. ಈ ನಿರ್ದೇಶನ ಉಲ್ಲಂಘಿಸಿದರೆ ಅಂತಹ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಈ ಹಿಂದೆಯೇ ನಿಗದಿಪಡಿಸಿದೆ. ಅದರಂತೆ ಶುಲ್ಕ ವಿಧಿಸಲು ಅವಕಾಶವಿದೆ. ಹೆಚ್ಚುವರಿ ಶುಲ್ಕ ವಿಧಿಸುವ ಕುರಿತು ದೂರುಗಳು ಬಂದರೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಎಸ್ಪಿ ಡಾ. ಎಚ್.ಟಿ.ಶೇಖರ್, ಎಡಿಸಿ ಜಿ.ಅನುರಾಧಾ, ಸಿಮ್ಸ್ ನಿರ್ದೇಶಕ ಡಾ. ಒ.ಎಸ್.ಸಿದ್ಧಪ್ಪ, ವಿವಿಧ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳು, ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net