

ತುಮಕೂರು: ಜಿಲ್ಲೆಯಲ್ಲಿ ಈವರೆಗೆ ಕರೊನಾ ಸೋಂಕಿನಿಂದ ಮುಕ್ತರಾದವರ ಸಂಖ್ಯೆ 10 ಸಾವಿರ ಗಡಿದಾಟಿದೆ. ಈ ಸಮಾಧಾನದ ಸುದ್ದಿಯ ಜತೆಯಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಸೋಂಕು ತಗುಲಿರುವುದು ಜಿಲ್ಲಾಡಳಿತ, ಜಿಲ್ಲೆಯ ಜನತೆಯಲ್ಲಿ ಸ್ವಲ್ಪಮಟ್ಟಿನ ಆತಂಕ ತಂದಿದೆ.
ಸೋಮವಾರವೂ ಗುಣಮುಖರ ಸಂಖ್ಯೆ ಹೆಚ್ಚಳವಾಗಿತ್ತು. ಒಂದೇದಿನ 209 ಮಂದಿ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗೆ 10211 ಮಂದಿ ಗುಣಮುಖರಾಗಿದ್ದು ಜನರಲ್ಲಿ ಕರೊನಾ ಬಗ್ಗೆ ಇದ್ದ ಆತಂಕವು ಕಡಿಮೆ ಆಗಿದೆ. ಸೋಮವಾರ 249 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 12570ಕ್ಕೆ ತಲುಪಿದೆ. ನಾಲ್ವರು ಕರೊನಾಕ್ಕೆ ಬಲಿಯಾಗಿದ್ದು, ಒಟ್ಟಾರೆ 219 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ 72 ಮಂದಿ ಅನ್ಯಕಾರಣದಿಂದ ಮೃತಪಟ್ಟಿದ್ದಾರೆ. ಇವರಲ್ಲಿಯು ಸೋಂಕು ದೃಢಪಟ್ಟಿದೆ.
ತಿಪಟೂರಲ್ಲಿ ಕರೊನಾ ಅರ್ಧಶತಕ: ತಿಪಟೂರು ತಾಲೂಕಿನಲ್ಲಿ ಒಂದೇ ದಿನ 52 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ತಾಲೂಕಿನ ಸೋಂಕಿತರ ಸಂಖ್ಯೆಯು 1247ಕ್ಕೇರಿದೆ. ಇನ್ನೂ ತುಮಕೂರು ತಾಲೂಕಿನಲ್ಲಿ 47, ಮಧುಗಿರಿ 36, ಚಿಕ್ಕನಾಯಕಹಳ್ಳಿ 27, ಶಿರಾ 22, ಪಾವಗಡ 19, ಕುಣಿಗಲ್ 19, ಗುಬ್ಬಿ 13, ಕೊರಟಗೆರೆ 10 ಹಾಗೂ ತುರುವೇಕೆರೆ ತಾಲೂಕಿನಲ್ಲಿ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು 249 ಮಂದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಲ್ಲಿ 48 ಮಂದಿ 60 ವರ್ಷ ಮೇಲ್ಪಟ್ಟವರು ಇದ್ದರೆ, 5 ವರ್ಷದೊಳಗಿನ ಮೂವರು ಮಕ್ಕಳು ಇದ್ದಾರೆ.
209 ಮಂದಿ ಗುಣಮುಖ: ಜಿಲ್ಲೆಯಲ್ಲಿ 209 ಮಂದಿ ಒಂದೇದಿನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 10211 ಮಂದಿ ಸಂಪೂರ್ಣ ಗುಣಮುಖರಾಗಿದ್ದು 2068 ಸಕ್ರಿಯ ಪ್ರಕರಣಗಳಿವೆ. ಸರ್ಕಾರಿ ಆಸ್ಪತ್ರೆಯಲ್ಲಿ 20, ಖಾಸಗಿ ಆಸ್ಪತ್ರೆಯಲ್ಲಿ 68 ಒಟ್ಟು 88 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4 ಮಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಇದರಲ್ಲಿ ಮೂವರು ಅನ್ಯಕಾರಣದಿಂದ ಮೃತಪಟ್ಟಿದ್ದು ಅವರಿಗೂ ಸೋಂಕು ತಗುಲಿರುವುದು ಕೋವಿಡ್ ಪರೀಕ್ಷೆ ವೇಳೆ ಮೃತಪಟ್ಟಿದೆ. ಮಧುಗಿರಿ 2, ಗುಬ್ಬಿ ಹಾಗೂ ತುಮಕೂರಿನ ಓರ್ವರು ಸೋಂಕು ತಗುಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
1 ಲಕ್ಷಕ್ಕೂ ಹೆಚ್ಚು ಮಂದಿಗೆ ಪರೀಕ್ಷೆ: ಜಿಲ್ಲೆಯಲ್ಲಿ ಈವರೆಗೆ 1,14,071 ಮಂದಿಯನ್ನು ಕರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. 12,570 ಮಂದಿಗೆ ಸೋಂಕು ದೃಢಪಟ್ಟಿದ್ದು , 98616 ಮಂದಿಗೆ ಸೋಂಕು ತಗುಲದೇ ಇರುವುದು ಪರೀಕ್ಷೆ ವೇಳೆ ತಿಳಿದುಬಂದಿದೆ.
ಸಚಿವ ಮಾಧುಸ್ವಾಮಿಗೆ ಕರೊನಾ : ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿಗೆ ಕರೊನಾ ಸೋಂಕು ತಗುಲಿದೆ. ಭಾನುವಾರ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನಗಳ ಹಿಂದೆ ಸಚಿವರ ಕಾರು ಚಾಲಕನಿಗೆ ಸೋಂಕು ತಗುಲಿತ್ತು. ಬಳಿಕ ಬೆಂಗಳೂರಿನ ಸಚಿವರ ಅಧಿಕೃತ ನಿವಾಸದ ಅಡುಗೆ ಸಿಬ್ಬಂದಿಗೂ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೆಸಿಎಂ ಶನಿವಾರ ಪರೀಕ್ಷೆಗೆ ಒಳಗಾಗಿದ್ದರು. ಅಧಿವೇಶನದಲ್ಲಿ ಭಾಗವಹಿಸಿ ಬೆಂಗಳೂರಿನ ನಿವಾಸದಲ್ಲೇ ಉಳಿದುಕೊಂಡಿದ್ದ ಸಚಿವ ಮಾಧುಸ್ವಾಮಿ, ಭಾನುವಾರ ಬೆಳಗ್ಗೆ 11.30ಕ್ಕೆ ಜೆ.ಸಿ.ಪುರದ ನಿವಾಸಕ್ಕೆ ಮರಳಿದ್ದರು. ಅಷ್ಟರಲ್ಲಿ ಮೊಬೈಲ್‌ಗೆ ಕೋವಿಡ್ ಪರೀಕ್ಷೆ ವರದಿ ಬಂದಿದ್ದು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಮುಂಜಾಗ್ರತಾ ಕ್ರಮವಾಗಿ ತಕ್ಷಣವೇ ಬೆಂಗಳೂರಿನ ಹಳೇ ಏರ್‌ಪೋರ್ಟ್ ರಸ್ತೆಯ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೆಸಿಪುರ ನಿವಾಸಕ್ಕೆ ಸ್ಯಾನಿಟೈಸ್: ಸಚಿವ ಮಾಧುಸ್ವಾಮಿ ಅವರ ಜೆ.ಸಿ.ಪುರ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ. ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರ ಜತೆಗೆ ಯಾರೂ ಸಂಪರ್ಕಕ್ಕೆ ಬಂದಿರಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಆರೋಗ್ಯ ಕುರಿತಂತೆ ಆಸ್ಪತ್ರೆ ವೈದ್ಯರು, ಸಚಿವರ ಜತೆ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದೆ. ಸಚಿವರಿಗೆ ಯಾವುದೇ ರೋಗಲಕ್ಷಣಗಳು ಇಲ್ಲ. ಡಾ.ಕೆ.ರಾಕೇಶ್ ಕುಮಾರ್ ಜಿಲ್ಲಾಧಿಕಾರಿ