

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶುಕ್ರವಾರ ಬರೋಬ್ಬರಿ 246 ಮಂದಿ ಕರೊನಾ ಸೋಂಕಿತರು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆಯು 736ಕ್ಕೆ ಏರಿಕೆಯಾಗಿದೆ.
ಚಿಕ್ಕಬಳ್ಳಾಪುರವನ್ನು ಕರೊನಾ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಸರತ್ತು ನಡೆಸಿದ್ದು, ಇತ್ತೀಚೆಗೆ ಗುಡಿಬಂಡೆ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ಉಳಿದಂತೆ ಇತರ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದಲ್ಲಿ 2ರಿಂದ 4 ಸಕ್ರಿಯ ಪ್ರಕರಣಗಳಿದ್ದವು. ಆದರೆ, ಮೂರನೇ ಅಲೆಯ ಪ್ರಭಾವದ ಹಿನ್ನೆಲೆಯಲ್ಲಿ ಇದೀಗ ಸಾವಿರ ಸನಿಹಕ್ಕೆ ಬಂದಿದೆ.
ಶುಕ್ರವಾರ 3734 ಮಾದರಿಗಳ ಪರೀಕ್ಷೆ ನಡೆಸಿದ್ದು 3488 ನೆಗೆಟಿವ್ ಆಗಿದೆ. ಉಳಿದಂತೆ 246 ಪಾಸಿಟಿವ್. ಇನ್ನು ಶಿಡ್ಲಘಟ್ಟದಲ್ಲಿ 39 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇದರೊಂದಿಗೆ ಹಲವು ತಿಂಗಳ ಬಳಿಕ ಜಿಲ್ಲೆಯಲ್ಲಿ ಕರೊನಾ ಸೋಂಕಿನ ಹೊಸ ಪ್ರಕರಣಗಳು ದ್ವಿಶತಕಕ್ಕಿಂತಲೂ ಹೆಚ್ಚಿಗೆ ಪತ್ತೆಯಾಗಿ ಒಬ್ಬರು ಬಲಿಯಾಗಿದ್ದಾರೆ.
ಸೋಂಕಿತರ ಪತ್ತೆ ಬಿರುಸು: ಪ್ರತಿ ದಿನ ಕರೊನಾ ಪರೀಕ್ಷೆ ಪ್ರಮಾಣದ ಗುರಿಯನ್ನು ಸಾಧಿಸುವುದರ ಜತೆಗೆ ಸೋಂಕಿತರು ಪತ್ತೆಯಾದ ತಕ್ಷಣ ಸೂಕ್ತ ಚಿಕಿತ್ಸೆ ನೀಡುವ ಪ್ರಕ್ರಿಯೆಯನ್ನು ಚುರುಕುಸಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ನಗರಾಡಳಿತ ಸಂಸ್ಥೆಗಳ ಮುಖ್ಯಾಧಿಕಾರಿಗಳು, ತಹಸೀಲ್ದಾರ್, ತಾಪಂ ಇಒ, ಕರೊನಾ ನಿಯಂತ್ರಣದ ನೋಡಲ್ ಅಧಿಕಾರಿಗಳು, ಪಿಡಿಒಗಳನ್ನೊಳಗೊಂಡಂತೆ ಆನ್‌ಲೈನ್ ವಿಡಿಯೋ ಸಂವಾದ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಸಾವು ಸಂಭವಿಸದಂತೆ ಎಚ್ಚರಿಕೆ: ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಅಗತ್ಯ ಔಷಧಗಳನ್ನು ಪೂರೈಸುವಿಕೆ, ಕಡ್ಡಾಯವಾಗಿ ಪ್ರತ್ಯೇಕ ವಾಸದ ವ್ಯವಸ್ಥೆ, ಪ್ರತಿ ದಿನ ದೂರವಾಣಿ ಕರೆ ಮೂಲಕ ಆರೋಗ್ಯ ವಿಚಾರಣೆ, ತೀವ್ರ ಸಮಸ್ಯೆಯುಳ್ಳವರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ, ಬೆಂಗಳೂರಿಗೆ ಹೋಗಿ ಬರುವವರಿಗೆ ನಿಯಮಾನುಸಾರ ಕರೊನಾ ಪರೀಕ್ಷೆ ಮಾಡಿಸುವಿಕೆ, ಲಸಿಕಾರಣ ಅಭಿಯಾನ ಸೇರಿ ಹಲವು ವಿಚಾರಗಳಲ್ಲಿ ಬಿರುಸುತಕ್ಕೆ ಸೂಚಿಸಲಾಗಿದೆ. ಯಾವುದೇ ಕಾರಣಕ್ಕೂ ಕರೊನಾ ಸಾವುಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ಯಶಸ್ವಿ ಲಸಿಕಾರಣದ ಅಭಿಯಾನದಿಂದ 3ನೇ ಅಲೆಯಲ್ಲಿ ದಾಖಲಾಗುವ ಬಹುತೇಕ ಸೋಂಕಿತರಿಗೆ ತೀವ್ರತರದ ರೋಗ ಬಾಧೆ ಕಂಡು ಬರುತ್ತಿಲ್ಲ. ಅದರಲ್ಲೂ ಆಮ್ಲಜನಕ ಪೂರೈಕೆ ಆವಲಂಬಿತ ರೋಗಿಗಳ ಸಂಖ್ಯೆ ಹೆಚ್ಚಾಗಿಲ್ಲ. ಈಗಾಗಲೇ ಶೇ.100 ರಷ್ಟು ಜನ ಮೊದಲನೇ ಡೋಸ್, ಶೇ.87 ರಷ್ಟ ಜನ 2ನೇ ಡೋಸ್ ಲಸಿಕೆ ಪಡೆದಿದ್ದಾರೆ. 50 ಸಾವಿರ ಜನರಿಗೆ 2ನೇ ಡೋಸ್ ಲಸಿಕೆ ಹಾಕಿಸಬೇಕಾಗಿದೆ.
ವ್ಯಾಪಕವಾಗಿ ಸೋಂಕು ಹೆಚ್ಚಳ: ಜಿಲ್ಲೆಯ ಪೈಕಿ ಮಂಡಿಕಲ್, ಕುರುಬೂರು ಮತ್ತು ನಂದಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಸಕ್ರಿಯ ಪ್ರಕರಣಗಳು ಜಾಸ್ತಿ ಇದೆ. ಇದು ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.
ತಾಲೂಕು ಶುಕ್ರವಾರ ಪತ್ತೆ ಹೊಸ ಪ್ರಕರಣ ಸಕ್ರಿಯ ಪ್ರಕರಣ: ಚಿಕ್ಕಬಳ್ಳಾಪುರ 64,199, ಬಾಗೇಪಲ್ಲಿ 1350, ಚಿಂತಾಮಣಿ 48,161, ಗೌರಿಬಿದನೂರು 63,155, ಗುಡಿಬಂಡೆ 1557, ಶಿಡ್ಲಘಟ್ಟ 43,114