

ತುಮಕೂರು: ಜಿಲ್ಲೆಯಲ್ಲಿ ಕರೊನಾ ನಾಗಾಲೋಟ ಮುಂದುವರಿಸಿದೆ. ಭಾನುವಾರವೂ ಹೊಸದಾಗಿ 232 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಸೋಂಕಿತರ ಸಂಖ್ಯೆ 7376ಕ್ಕೇರಿಕೆಯಾಗಿದೆ.
ತುಮಕೂರು ತಾಲೂಕಿನಲ್ಲಿ 99 ಜನರಿಗೆ ಸೋಂಕು ದೃಢವಾಗಿದ್ದು, ಈವರೆಗೆ ತಾಲೂಕಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2739ಕ್ಕೆ ತಲುಪಿದೆ. ನಗರವಾಸಿಗಳಿಗೆ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬಗ್ಗೆ ಕಿಂಚಿತ್ತೂ ಭಯ ಇಲ್ಲವಾಗಿದೆ. ಹಾಗಾಗಿ, ಜಿಲ್ಲಾಡಳಿತವು ಕೈಚೆಲ್ಲಿ ಕುಳಿತುಬಿಟ್ಟಿದೆ.
ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತುಮಕೂರಿನ ಎಸ್‌ಐಟಿ ಬಡವಾಣೆಯ 83 ವರ್ಷದ ವೃದ್ಧ ಹಾಗೂ ಜಯನಗರದ 54 ವರ್ಷದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗುಬ್ಬಿ ತಾಲೂಕು ಕಲ್ಲೂರಿನ 60 ವರ್ಷದ ವೃದ್ಧ ಕಿಡ್ನಿ ಸಮಸ್ಯೆ, ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೂ ಸೋಂಕು ತಗಲಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ದಾಖಲಾಗಿದ್ದ ತುಮಕೂರಿನ ಅಗ್ರಹಾರದ 54 ವರ್ಷದ ವ್ಯಕ್ತಿ ಕರೊನಾ ಹೊರತಾಗಿ ಅನ್ಯಕಾರಣಕ್ಕೆ ಮೃತಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 7376ಕ್ಕೇರಿದ್ದು ಸಕ್ರಿಯ ಪ್ರಕರಣಗಳು 1803, ಈವರೆಗೆ 5383 ಜನರು ರೋಗಮುಕ್ತರಾಗಿದ್ದು ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 14 ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 24 ಒಟ್ಟು 36 ಜನರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.
ತಿಪಟೂರು 24, ಪಾವಗಡ 23, ಚಿಕ್ಕನಾಯಕನಹಳ್ಳಿ 22, ಕುಣಿಗಲ್ 14, ಮಧುಗಿರಿ 13, ಕೊರಟಗೆರೆ 11, ಶಿರಾ ಹಾಗೂ ಗುಬ್ಬಿ ತಲಾ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ತುರುವೇಕರೆಯಲ್ಲಿ 6 ಮಂದಿಗೆ ಸೋಂಕು ತಗುಲಿದೆ.
214 ಮಂದಿ ಗುಣಮುಖ: ಭಾನುವಾರ ಒಂದೇ ದಿನ 214 ಮಂದಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಈವರೆಗೆ 5383 ಜನರು ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಂದೆಡೆ ಗುಣಮುಖರ ಪ್ರಮಾಣ ಹೆಚ್ಚಳವಾಗುತ್ತಿದ್ದರೆ ಮತ್ತೊಂದೆಡೆ ಅಷ್ಟೇ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆಯು ಹೆಚ್ಚಳವಾಗುತ್ತಿದೆ.