

ಮಂಗಳೂರು/ಬಂಟ್ವಾಳ: ಮಾನವ ಕುಲಕ್ಕೆ ವಿನಾಶಕಾರಿಯಾಗಿ ಪರಿಣಮಿಸುತ್ತಿರುವ ಕರೊನಾ ಮಹಾಮಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿದ್ದು, ಶುಕ್ರವಾರ ಮತ್ತೆ ಎರಡು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಬಂಟ್ವಾಳ ಹಾಗೂ ಮಂಗಳೂರಿನ ಬೋಳೂರು ನಿವಾಸಿಗಳಲ್ಲಿ ಸೋಂಕು ದೃಢಗೊಂಡಿದೆ.
ಗುರುವಾರ ಪಾಸಿಟಿವ್ ಆಗಿದ್ದ ಬೋಳೂರಿನ 58 ವರ್ಷದ ಮಹಿಳೆ(ರೋಗಿ 536)ಯ ಪ್ರಾಥಮಿಕ ಸಂಪರ್ಕದಲ್ಲಿದ್ದ 62 ವರ್ಷ ವಯಸ್ಸಿನ ಪತಿಯ (ರೋಗಿ 579) ಗಂಟಲ ದ್ರವ ಪರೀಕ್ಷಾ ವರದಿಯಲ್ಲಿ ಕರೊನಾ ಸೋಂಕು ಇರುವುದು ಪತ್ತೆಯಾಗಿದೆ.
ಬಂಟ್ವಾಳ ಪೇಟೆಯ ಎಸ್.ವಿ.ಎಸ್. ಶಾಲಾ ರಸ್ತೆ ನಿವಾಸಿಯಾಗಿರುವ 69 ವರ್ಷದ ವೃದ್ಧನಿಗೂ (ರೋಗಿ 578) ಕರೊನಾ ದೃಢವಾಗಿದೆ. ಇವರಿಗೆ ಏ.19ರಂದು ಮೃತಪಟ್ಟ ಬಂಟ್ವಾಳದ 50 ವರ್ಷದ ಮಹಿಳೆ(ರೋಗಿ-390)ಯ ದ್ವಿತೀಯ ಸಂಪರ್ಕದಿಂದ ಸೋಂಕು ಹರಡಿದೆ. ಆಕೆಯ ದೂರದ ಸಂಬಂಧಿಯೂ ಆಗಿದ್ದು, ನೆರೆಮನೆಯಲ್ಲಿ ವಾಸವಾಗಿದ್ದಾರೆ. ಏ.19ರಿಂದ ಇವರನ್ನು ಮನೆಮಂದಿಯೊಂದಿಗೆ ಹೋಂ ಕ್ವಾರಂಟೈನ್ ಮಾಡಲಾಗಿದ್ದು, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.
ಇಬ್ಬರನ್ನೂ ಮಂಗಳೂರಿನ ವೆನ್ಲಾಕ್‌ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಇವರಿಗೆ ಇತರ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಈ ಪ್ರಕರಣದ ಮೂಲವೂ ಮಂಗಳೂರಿನ ಪಡೀಲ್‌ನ ಫಸ್ಟ್‌ನ್ಯೂರೋ ಆಸ್ಪತ್ರೆ ಎಂದು ಹೆಲ್ತ್ ಬುಲೆಟಿನ್‌ನಲ್ಲಿ ಉಲ್ಲೇಖಿಸಲಾಗಿದೆ.
ಸೀಲ್‌ಡೌನ್ ಮುಂದುವರಿಕೆ: ಬಂಟ್ವಾಳ ಕಸಬಾ ಹಾಗೂ ಮಂಗಳೂರಿನ ಬೋಳೂರು ಪ್ರದೇಶವನ್ನು ಹಿಂದಿನ ಪ್ರಕರಣಗಳಲ್ಲಿ ಕಂಟೈನ್ಮೆಂಟ್ ಜೋನ್ ಎಂದು ಗುರುತಿಸಿ ಸೀಲ್‌ಡೌನ್ ಮಾಡಿದ್ದು, ಇನ್ನು 28 ದಿನ ಮುಂದುವರಿಯಲಿದೆ. ಇನ್ಸಿಡೆಂಟ್ ಕಮಾಂಡರ್ ವಲಯದ ಉಸ್ತುವಾರಿ ವಹಿಸಿಕೊಂಡಿದ್ದು, ಜನರ ಸಮಸ್ಯೆಗಳಿಗೆ ಅವರು ಸ್ಪಂದಿಸಲಿದ್ದಾರೆ.
18ಕ್ಕೇರಿದ ಕರೊನಾ ಪಾಸಿಟಿವ್
ಹೊಸ ಎರಡು ಪ್ರಕರಣ ಸೇರಿ ದ.ಕ. ಜಿಲ್ಲೆಯಲ್ಲಿ ಒಟ್ಟು ಕರೊನಾ ಪಾಸಿಟಿವ್ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಈ ಪೈಕಿ 6 ಮಂದಿ ಬಿಡುಗಡೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. 9 ಮಂದಿ ಚಿಕಿತ್ಸೆ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಪಡೆಯುತ್ತಿದ್ದಾರೆ.
ಬಂಟ್ವಾಳದಲ್ಲಿ ಅತೀ ಹೆಚ್ಚು ಪ್ರಕರಣ: ಒಟ್ಟು ಕರೊನಾ ಪ್ರಕರಣಗಳ ಪೈಕಿ ಬಂಟ್ವಾಳ ಪೇಟೆಯಲ್ಲೇ ಪತ್ತೆಯಾದ ಪ್ರಕರಣಗಳ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬಂಟ್ವಾಳ ತಾಲೂಕಿನಲ್ಲಿ 8ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂವರು ಮೃತಪಟ್ಟಿದ್ದರೆ, ಇಬ್ಬರು (ಸಜಿಪದ ಮಗು ಮತ್ತು ತುಂಬೆ ನಿವಾಸಿ) ಗುಣಮುಖರಾಗಿದ್ದಾರೆ. ಮೂರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟ ಇಬ್ಬರು ಒಂದೇ ಮನೆಯವರಾಗಿದ್ದು, ಇನ್ನೊಬ್ಬರು ನೆರೆಮನೆಯವರು. ಪ್ರಸ್ತುತ ಚಿಕಿತ್ಸೆ ಪಡೆಯುತ್ತಿರುವ ಮೂವರಲ್ಲಿ, ಇಬ್ಬರು ಬಂಟ್ವಾಳ ಕಸಬಾ ಹಾಗೂ ಒಬ್ಬರು ನರಿಕೊಂಬು ನಾಯಿಲದವರು. ಏ.27ರವರೆಗೆ ಪಾಸಿಟಿವ್ ಪ್ರಕರಣಗಳನ್ನೇ ಕಾಣದ ಮಂಗಳೂರು ನಗರದಲ್ಲಿ ಈಗ ಒಟ್ಟು ಪ್ರಕರಣ 4ಕ್ಕೆ ಏರಿಕೆಯಾಗಿದೆ.
135 ಮಂದಿಯ ತಪಾಸಣೆ: ದ.ಕ. ಜಿಲ್ಲೆಯಲ್ಲಿ ಶುಕ್ರವಾರ 135 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. 236 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇದರಲ್ಲಿ 2 ಪಾಸಿಟಿವ್ ಹಾಗೂ 234 ನೆಗೆಟಿವ್. ಒಟ್ಟು 662 ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ಶುಕ್ರವಾರ 351 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 160 ಮಾದರಿಯನ್ನು ಹಾಸನದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 59 ಮಂದಿ ಎನ್‌ಐಟಿಕೆ ಹಾಗೂ 40 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ಹೊರ ಜಿಲ್ಲೆಗಳಲ್ಲೂ ಟೆಸ್ಟ್: ಮಂಗಳೂರಿನ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಕರೊನಾ ಟೆಸ್ಟಿಂಗ್ ಲ್ಯಾಬ್‌ಗೆ ಪರೀಕ್ಷೆಗಾಗಿ ಬರುತ್ತಿರುವ ಗಂಟಲ ದ್ರವ ಮಾದರಿಗಳ ಪ್ರಮಾಣ ಕಳೆದ ಕೆಲವು ದಿನಗಳಿಂದ ಹೆಚ್ಚಾಗಿದೆ. ವೆನ್ಲಾಕ್‌ನಲ್ಲಿರುವ ಸೀಮಿತ ಸಿಬ್ಬಂದಿಗೆ ಇದರಿಂದ ಒತ್ತಡ ಹೆಚ್ಚಾಗಿದ್ದು, ಶೀಘ್ರ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಹೊರ ಜಿಲ್ಲೆಯ ಲ್ಯಾಬ್‌ಗಳನ್ನು ಆಶ್ರಯಿಸಬೇಕಾಗುತ್ತಿದೆ. ಗುರುವಾರ 160 ಸ್ಯಾಂಪಲ್‌ಗಳನ್ನು ಹಾಸನದ ಪ್ರಯೋಗಾಯಲಕ್ಕೆ ಕಳುಹಿಸಲಾಗಿದೆ. ಅದಕ್ಕೂ ಮುನ್ನ ಸ್ವಲ್ಪ ಸ್ಯಾಂಪಲ್‌ಗಳನ್ನು ಮೈಸೂರು ಹಾಗೂ ಬೆಂಗಳೂರಿನ ಪ್ರಯೋಗಾಲಯಕ್ಕೂ ರವಾನಿಸಲಾಗಿದೆ. ವೆನ್ಲಾಕ್‌ಗೆ ಉಡುಪಿಯಿಂದಲೂ ಕೆಲವು ಸ್ಯಾಂಪಲ್‌ಗಳು ಬರುತ್ತವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಕಾಸರಗೋಡು ನಾಲ್ವರು ಗುಣಮುಖ
ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಕರೊನಾ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಒಂಬತ್ತು ಮಂದಿ ವೈರಸ್‌ನಿಂದ ಮುಕ್ತಿ ಹೊಂದಿದ್ದು, ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ನಾಲ್ವರು ಹಾಗೂ ಎರ್ನಾಕುಳಂನಲ್ಲಿ ಒಬ್ಬರು ಗುಣಮುಖರಾದವರು. ರಾಜ್ಯದಲ್ಲಿ ಕೋವಿಡ್-19 ಬಾಧಿಸಿರುವವರಲ್ಲಿ ಇದುವರೆಗೆ 392 ಮಂದಿ ಗುಣಮುಖರಾಗಿದ್ದು, ಪ್ರಸಕ್ತ 102 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮೂವರು ಮತ್ತು ಕಾಞಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬರು ಗುಣಮುಖರಾಗಿದ್ದಾರೆ.