

ತುಮಕೂರು: ಜಿಲ್ಲೆಯಲ್ಲಿ ದಾಖಲಾಗಿರುವ ಕರೊನಾ ವೈರಸ್ ಸೋಂಕಿತ 24 ಜನರಲ್ಲಿ ಚಿಕಿತ್ಸೆ ಪಡೆಯುತ್ತಿರುವ 16 ಜನರ ಆರೋಗ್ಯ ಸ್ಥಿರವಾಗಿದ್ದು, ಎಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳುವ ವಿಶ್ವಾಸವಿದೆ. ಸದಾಶಿವನಗರದ ವೈರಸ್ ಸೋಂಕಿತ ಗರ್ಭಿಣಿ ಕೇಸ್ ಕಠಿಣ ಎಂಬ ಕಾರಣಕ್ಕೆ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿದ್ದರೂ ಅಲ್ಲಿ ತಾಯಿ, ಮಗು ಆರೋಗ್ಯವಾಗಿರುವುದು ನೆಮ್ಮದಿ ಮೂಡಿಸಿದೆ.
ಶನಿವಾರ ಹೊಸ ಪ್ರಕರಣ ದಾಖಲಾಗಿಲ್ಲವಾದರೂ ಹೊರರಾಜ್ಯಗಳಿಂದ 462 ಜನರು ಆಗಮಿಸಿದ್ದು, ಅವರಿಂದಲೇ ಸೋಂಕು ಸಮುದಾಯಕ್ಕೆ ಹರಡುವ ಅಪಾಯ ಅರಿತಿರುವ ಜಿಲ್ಲಾಡಳಿತ ಎಲ್ಲರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ನೆರೆಯ ಆಂಧ್ರದಿಂದ ಬಂದಿರುವ 133 ಸಂಖ್ಯೆಯೇ ಅಗ್ರವಾಗಿದೆ, ಕರೊನಾ ಮಹಾಮಾರಿಯ ನಿಕಟ ಸಂಪರ್ಕದ ಮಹಾರಾಷ್ಟ್ರದಿಂದಲೂ 103 ಹಾಗೂ ತಮಿಳುನಾಡಿನಿಂದ 103 ಜನರು ಬಂದಿದ್ದು ಇವರೆಲ್ಲರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ.
ಭಾನುವಾರ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದ್ದು, ತುರ್ತು ಸೇವೆ ಹೊರತುಪಡಿಸಿ ಅನಾವಶ್ಯಕವಾಗಿ ಹೊರಗೆ ಓಡಾಡಲು ಅವಕಾಶವಿರುವುದಿಲ್ಲ. ಕಟ್ಟುನಿಟ್ಟಾಗಿ ನಿಯಮ ಪಾಲನೆ ಮಾಡಲು ಜಿಲ್ಲಾಡಳಿತಕ್ಕೆ ಜನರು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಮನವಿ ಮಾಡಿದರು. ಭಾನುವಾರ ಲಾಕ್‌ಡೌನ್ ಅವಧಿಯಲ್ಲಿ ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಹಾಲು, ತರಕಾರಿ, ಮಾಂಸ, ಪಾರ್ಸಲ್ ನೀಡುವ ಹೊಟೇಲ್, ದಿನಪತ್ರಿಕೆ ಸೇರಿ ಅಗತ್ಯ ಸೇವೆಗಳಷ್ಟೇ ಕಾರ್ಯನಿರ್ವಹಿಸಲಿದೆ.
ಕೊಬ್ಬರಿ ಹರಾಜಿನಲ್ಲಿಯೂ ನಿರಾಸೆ: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಕೊಬ್ಬರಿ ಹರಾಜು ರೈತರಿಗೆ ನಿರಾಸೆ ಮೂಡಿಸಿದೆ. ಕ್ವಿಂಟಾಲ್ ಕೊಬ್ಬರಿಗೆ ಗರಿಷ್ಠ 9500ರೂ., ಕನಿಷ್ಠ 9000ರೂ.ಗೆ ಆನ್‌ಲೈನ್‌ನಲ್ಲಿ ವ್ಯಾಪಾರ ನಡೆದಿದ್ದರೂ ಕೊಬ್ಬರಿ ಕೊಂಡುಕೊಳ್ಳಲು ವರ್ತಕರು ಬರುತ್ತಿಲ್ಲ. ರಾಜ್ಯದ 17 ಜಿಲ್ಲೆಗಳಲ್ಲಿ ರೈತರು ಕೊಬ್ಬರಿ ಬೆಳೆಯುತ್ತಿದ್ದು ತಿಪಟೂರು ಮಾರುಕಟ್ಟೆಗೆ ಶನಿವಾರ 5571 ಚೀಲ ಹರಾಜಿಗೆ ಬಂದಿದೆ. ಜನರು ಸಾಕಷ್ಟು ದಿನದಿಂದ ಸುಲಿಯದೇ ಉಳಿಸಿಕೊಂಡಿರುವ ಕೊಬ್ಬರಿ ಸುಲಿಯುವುದು ಅನಿವಾರ್ಯವಾಗಿದ್ದು ಬೆಲೆ ಕುಸಿತ ಆತಂಕವಿದೆ. ಸರ್ಕಾರದ ಬೆಂಬಲ ಬೆಲೆ 10300ರೂ. ಇದ್ದರೂ ಇದಕ್ಕಿಂತ 800 ರೂ. ಕಡಿಮೆಗೆ ಕೊಬ್ಬರಿ ಹರಾಜು ನಡೆದಿದೆ. ಆದರೂ, ಸರ್ಕಾರ ಖರೀದಿ ಕೇಂದ್ರ ಆರಂಭಿಸುವ ಕೆಲಸ ಮಾಡುತ್ತಿಲ್ಲ.
ಪಿಎಚ್ ಕಾಲನಿ ಕಂಟೇನ್ಮೆಂಟ್ ಮುಕ್ತ!: 28 ದಿನಗಳ ಕಾಲ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲದ ಹಿನ್ನೆಲೆಯಲ್ಲಿ ನಗರದ ಪಿಎಚ್ ಕಾಲನಿಯನ್ನು ಕಂಟೇನ್ಮೆಂಟ್ ವಲಯದಿಂದ ಮುಕ್ತವಾಗಿದ್ದು ಜನರು ಜಿಲ್ಲಾಡಳಿತ ಮಾರ್ಗಸೂಚಿ ಪಾಲಿಸಿ ಓಡಾಟ ನಡೆಸಬಹುದು. ಜತೆಗೆ ಹೊಸ ಪ್ರಕರಣ ಕಾಣಿಸಿರುವ ತುಮಕೂರಿನ ಸದಾಶಿವನಗರ, ಖಾದರ್‌ನಗರ ಹಾಗೂ ಹೆಬ್ಬೂರು ಹೋಬಳಿ ಮಾಯಮ್ಮನಪಾಳ್ಯವನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಿದ್ದು, ಜನರು ಮುಂದಿನ 28 ದಿನ ಮನೆಯಲ್ಲಿಯೇ ಉಳಿಯುವಂತೆ ಸೂಚಿಸಿದೆ.
ಕಂಟೇನ್ಮೆಂಟ್ ವಲಯ ಪರಿಶೀಲನೆ: ತುಮಕೂರು ಜಿಲ್ಲೆಯಲ್ಲಿ ನಾಲ್ಕು ಕಂಟೇನ್ಮೆಂಟ್ ವಲಯ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕೆಂದ್ರ ವಲಯ ಐಜಿಪಿ ಶರತ್‌ಚಂದ್ರ ಸ್ಥಳ ಪರಿಶೀಲನೆ ನಡೆಸಿದರು. ಶನಿವಾರ ಸಂಜೆ ತುಮಕೂರಿನ ಸದಾಶಿವನಗರ, ಕೆಎಚ್‌ಬಿ ಕಾಲನಿ ಹಾಗೂ ಖಾದರ್ ನಗರಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಪ್ರದೇಶದಲ್ಲಿ ಜನರು ಓಡಾಡದಂತೆ ಕ್ರಮವಹಿಸಬೇಕು, ಸಂಚಾರ ಸಂಪೂರ್ಣ ಬಂದ್ ಮಾಡಬೇಕು ಎಂದರು. ತುರ್ತು ಸೇವೆಗಳಲ್ಲಿ ಕೆಲಸ ಮಾಡುವವರು ಈ ವಲಯದಲ್ಲಿದ್ದ ಅವರಿಗೆ ಸೇವಾ ಪಾಸ್ ನೀಡಲು ಅವಕಾಶವಿದ್ದು ಯಾರಾದರೂ ಬಯಸಿದರೆ ಪರಿಶೀಲಿಸಿ ನೀಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ವಂಶಿಕೃಷ್ಣ ಅವರಿಗೆ ಸೂಚಿಸಿದರು. ಎಎಸ್ಪಿ ಉದೇಶ್, ನಗರ ಡಿಎಸ್ಪಿ ತಿಪ್ಪೇಸ್ವಾಮಿ ಮತ್ತಿತರರ ಅಧಿಕಾರಿಗಳು ಇದ್ದರು.
ಕರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಸರ್ಕಾರದ ಮಾರ್ಗಸೂಚಿಯನ್ವಯ ಇಂದು ಅಗತ್ಯ ಸೇವೆ ಹೊರತುಪಡಿಸಿ ಜಿಲ್ಲಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಜನರು ಸಹಕಾರ ನೀಡುವ ಮೂಲಕ ಮಹಾಮಾರಿ ನಿಯಂತ್ರಿಸಬೇಕಿದೆ. ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ