ಕರೊನಾ ಗೆದ್ದ ಮತ್ತೊಬ್ಬ

carona logo
Published on

ಧಾರವಾಡ: ಕರೊನಾ ಕಾಯಿಲೆ ಪೀಡಿತನಾಗಿದ್ದ ಇನ್ನೊಬ್ಬನಿಗೆ ಗುಣವಾಗಿದ್ದು, ಬುಧವಾರ ಹುಬ್ಬಳ್ಳಿಯ ಕಿಮ್ಸ್​ನಿಂದ ಬಿಡುಗಡೆ ಮಾಡಲಾಗಿದೆ.

ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದಾಗಿ ಮೇ 7ರಂದು ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದ ಧಾರವಾಡ ಹೊಸಯಲ್ಲಾಪುರದ ಕೋಳಿಕೆರೆ ನವಲೂರ ಅಗಸಿ ಪ್ರದೇಶದ ಪಿ- 705 (35 ವರ್ಷದ ಪುರುಷ) ವ್ಯಕ್ತಿಗೆ ಸಂಪೂರ್ಣ ಗುಣವಾಗಿದೆ. 24 ಗಂಟೆಗಳ ಅಂತರದಲ್ಲಿ 2 ಬಾರಿ ಅವರ ಗಂಟಲ ದ್ರವ ಪರೀಕ್ಷೆ ಮಾಡಿದಾಗ ಕೋವಿಡ್ ನೆಗೆಟಿವ್ ವರದಿ ಬಂದಿದೆ. ಎಕ್ಸ್​ರೇ ಮೂಲಕ ಪರೀಕ್ಷೆ ಮಾಡಿ ಶ್ವಾಸಕೋಶದ ತೊಂದರೆ ಇಲ್ಲ ಎಂಬುದನ್ನು ವೈದ್ಯರು ದೃಢಪಡಿಸಿದ್ದಾರೆ. ಆದ್ದರಿಂದ ಆತನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ 11 ಜನರಿಗೆ ಕೋವಿಡ್ ಗುಣವಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

935 ಶಂಕಿತರು ಪತ್ತೆ: ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ಸಂಜೆಯಿಂದ 24 ಗಂಟೆ ಅವಧಿಯಲ್ಲಿ 935 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಂಗಳವಾರ ಇದ್ದ 13764 ನಿಗಾವಹಿಸಿದವರ ಸಂಖ್ಯೆ ಬುಧವಾರ 14699ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 13968 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 12436 ಜನರ ವರದಿ ನೆಗೆಟಿವ್ ಬಂದಿವೆ. 43 ಪ್ರಕರಣಗಳು ಪಾಸಿಟಿವ್ ಬಂದಿದ್ದು, 32 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 11 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನೂ 1500 ವರದಿಗಳು ಬರಬೇಕಿದೆ.

ವೈರಸ್ ಭೀತಿ ಹಿನ್ನೆಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯು ವಿದೇಶದಿಂದ ಆಗಮಿಸಿರುವ ಹಾಗೂ ಅವರ ಸಂಪರ್ಕಕ್ಕೆ ಒಳಗಾದ 14699 ಜನರ ಮೇಲೆ ನಿಗಾ ಇಟ್ಟಿದೆ. ಈ ಪೈಕಿ 5970 ಜನರು ಮನೆಯಲ್ಲೇ ಪ್ರತ್ಯೇಕವಾಗಿ (14 ದಿನ) ವಾಸವಾಗಿದ್ದಾರೆ. ಆಸ್ಪತ್ರೆ ಪ್ರತ್ಯೇಕ ವಾರ್ಡಗಳಲ್ಲಿ 34 ಜನ ದಾಖಲಾಗಿದ್ದಾರೆ. 5243 ಜನರು 14 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದರೆ, 3452 ಜನರು 28 ದಿನಗಳ ಪ್ರತ್ಯೇಕ ವಾಸ ಪೂರ್ಣಗೊಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net