

ಮಂಜುನಾಥ ಎಸ್.ಸಿ. ಹೊಸಕೋಟೆ
ಲಾಕ್‌ಡೌನ್ ಸಡಿಲಗೊಂಡಿದ್ದೇ ತಡ, ಮನೆಯಲ್ಲಿ ಕೂಡಿಹಾಕಿದಂತಿದ್ದ ಜನ, ಜಾತ್ರೆಗೆ ಸೇರಿದಂತೆ ರಸ್ತೆಗಳಲ್ಲಿ ಜಮಾವಣೆಯಾಗುತ್ತಿದ್ದಾರೆ. ಕರೊನಾ ಆತಂಕವಿಲ್ಲದೆ ಎಲ್ಲೆಂದರಲ್ಲಿ ಗುಂಪುಗೂಡುತ್ತಿರುವ ದೃಶ್ಯಗಳು ಸಾಮಾನ್ಯ ಎನ್ನುವಂತಾಗಿದೆ.
ಹೌದು..! ಷರತ್ತುಬದ್ಧ ನಿಯಮಗಳೊಂದಿಗೆ ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದ್ದರೆ ಹೊಸಕೋಟೆ ನಗರ ಸೇರಿ ಗ್ರಾಮಾಂತರ ಭಾಗಗಳಲ್ಲಿ ನಿಯಮ ಉಲ್ಲಂಘನೆ ಸಾಮಾನ್ಯ ಎನ್ನುವಂತಾಗಿದೆ. ಮಾಸ್ಕ್ ಧರಿಸುವುದನ್ನು ಮರೆತ ಜನ, ಗುಂಪು ಗುಂಪಾಗಿ ಸೇರಿ ರಸ್ತೆಗಳಲ್ಲೇ ಹರಟೆ ಹೊಡೆಯುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವುದು ಕಂಡುಬರುತ್ತಿದೆ. ತಾಲೂಕಿನಲ್ಲಿ ಈಗಾಗಲೇ ಸೋಂಕು ತಗುಲಿದ ವ್ಯಕ್ತಿಗಳು ಗುಣಮುಖರಾಗಿದ್ದರೂ ಕರೊನಾ ಆತಂಕ ಮಡುಗಟ್ಟಿದೆ. ಆದರೆ ಅನೇಕರು ಆತಂಕವಿಲ್ಲದೆ ರಸ್ತೆಗಳಲ್ಲಿ, ಪ್ರಮುಖ ಸರ್ಕಲ್‌ಗಳಲ್ಲಿ ಹರಟೆಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.
ಅಧಿಕಾರಿಗಳು ಗಪ್‌ಚುಪ್: ಮಾರುಕಟ್ಟೆಗಳಲ್ಲಿ ವರ್ತಕರು, ತರಕಾರಿ ಮಾರಾಟಗಾರರು, ಬೇಕರಿ, ಅಂಗಡಿ, ಮಳಿಗೆಗಳು, ಕಡೆಗೆ ವಾಹನ ಸವಾರರೂ ಸಹ ಸರ್ಕಾರದ ನಿಯಮ ಗಾಳಿಗೆ ತೂರಿ ವ್ಯಾಪಾರ ವಹಿವಾಟಿನತ್ತ ಗಮನ ನೀಡುತ್ತಿದ್ದಾರೆ. ನಗರದಲ್ಲಿನ ಅಧಿಕಾರಿಗಳು ಸಹ ಕಣ್ಣೆದುರೇ ಇಂಥ ದೃಶ್ಯಗಳು ಕಂಡುಬರುತ್ತಿದ್ದರೂ ಜಾಣಮೌನ ವಹಿಸಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತೆರೆಮರೆಯಲ್ಲಿರುವ ಕರೊನಾ ಮಹಾಮಾರಿ ತಾಲೂಕಿನಲ್ಲಿ ರುದ್ರನರ್ತನ ಆರಂಭಿಸುವ ಆತಂಕವಿದೆ. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಲಾಕ್‌ಡೌನ್ ಸಡಿಲಗೊಂಡಿದ್ದರೂ ಮುಂಜಾನೆಯಿಂದ ಸಂಜೆ 5 ರ ವರೆಗೆ ಮಾತ್ರ ಸಾರ್ವಜನಿಕರಿಗೆ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಸಂಜೆ 5 ರ ನಂತರ ತಾಲೂಕಿನಾದ್ಯಂತ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್ ಹಾಗೂ ಹಾಲು ಮಾರಾಟ ಮಳಿಗೆಗಳಿಗೆ ವಿನಾಯಿತಿ ನೀಡಿ ಉಳಿದೆಲ್ಲ ವಾಣಿಜ್ಯ ವ್ಯವಹಾರ ಸಂಪೂರ್ಣ ಬಂದ್ ಮಾಡಿಸಲಾಗುತ್ತಿದೆ. ಆದರೆ ಕೆಲವೊಂದು ಕಡೆಗಳಲ್ಲಿ ವಿನಾಯಿತಿ ಇಲ್ಲದ ಮಳಿಗೆಗಳಲ್ಲೂ ಅವಧಿ ಮೀರಿ ವ್ಯಾಪಾರ ವಹಿವಾಟು ನಿರಾತಂಕವಾಗಿ ನಡೆಯುತ್ತಿದೆ.
ಆರ್ಥಿಕ ಸುಧಾರಣೆಗಾಗಿ ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿದೆ. ಆದರೆ ಇದನ್ನು ಜನ ಅರ್ಥ ಮಾಡಿಕೊಳ್ಳದೆ ಸರ್ಕಾರದ ಮುಂಜಾಗ್ರತಾ ಕ್ರಮ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾಗುತ್ತದೆ. ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು, ಸಾರ್ವಜನಿಕರ ಸಹಕಾರವೂ ಬೇಕು. ಡಾ ನಾಗರಾಜ್, ಅಖಿಲ ಭಾರತ ವೈದ್ಯಕೀಯ ಸಂಘದ ತಾಲೂಕು ಅಧ್ಯಕ್ಷ ಹೊಸಕೋಟೆ