

ಶಿವಮೊಗ್ಗ: ಕರೊನಾ ನಿರ್ವಹಣೆ ಮುಂಜಾಗ್ರತಾ ಕ್ರಮ ವಹಿಸದ, ಕೇಂದ್ರ ಮತ್ತು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುವ ನಿರ್ದೇಶನಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಕೆ.ಬಿ.ಶಿವಕುಮಾರ್ ಎಚ್ಚರಿಕೆ ನೀಡಿದರು.
ಕರೊನಾ 3ನೇ ಅಲೆ ನಿಯಂತ್ರಿಸಲು ಸಾರ್ವಜನಿಕರ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಡಿಸಿ ಕಚೇರಿಯಲ್ಲಿ ಬುಧವಾರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಿಲ್ಲೆಯಲ್ಲಿ ಕರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಆ.5ರಿಂದ 15ರವರೆಗೆ ಕರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶಿಸಿದರು.
ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನಿಯಮ, ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪ್ರದರ್ಶಿಸಲು ಮತ್ತು ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲು ಹಾಗೂ ಈ ನಿಷೇಧಾಜ್ಞೆ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮತ್ತು ಇತರ ಸಕ್ಷಮ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಜಿಪಂ ಸಿಇಒ ಎಂ.ಎಲ್.ವೈಶಾಲಿ, ಎಡಿಸಿ ನಾಗೇಂದ್ರ ಎಫ್. ಹೊನ್ನಳ್ಳಿ, ಶಿವಮೊಗ್ಗ ಎಸಿ ಟಿ.ಎಲ್.ಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ನಗರಾಭಿವೃದ್ಧಿ ಕೋಶದ ಅಧಿಕಾರ ಮೂಕಪ್ಪ ಕರಿಭೀಮಣ್ಣವರ್, ಡಿಸಿಎಫ್ ನಾಗರಾಜ್ ಇತರರಿದ್ದರು.