

ಚಿಕ್ಕಮಗಳೂರು: ಕರೊನಾ ಮತ್ತು ಲಾಕ್ಡೌನ್ ಹಲವರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಕೆಲಸ ಅರಸಿ ಬೆಂಗಳೂರಿಗೆ ಹೋದವರು ಅಲ್ಲಿ ಕೆಲಸ ಇಲ್ಲದೆ ಹುಟ್ಟಿದ ಊರಿಗೆ ವಾಪಸ್ ಬಂದು ಸಿಕ್ಕ ಸಿಕ್ಕ ಕೆಲಸ ಮಾಡುತ್ತಿದ್ದಾರೆ. ಶಾಲೆಗಳು ಆರಂಭವಾಗದ ಕಾರಣ ಹಲವು ಖಾಸಗಿ ಶಾಲೆಗಳ ಶಿಕ್ಷಕರು ಕೆಲಸ ಇಲ್ಲದೆ ಜೀವನ ನಿರ್ವಹಣೆಗೆ ಬೇರೆ ದಾರಿ ಹುಡುಕುತ್ತಿದ್ದಾರೆ. ಲಾಕ್ಡೌನ್ ವೇಳೆ ಕೆಲಸವಿಲ್ಲದೆ ಕಾಫಿ ಮೂಟೆ ಹೊತ್ತು ಜೀವನ ನಿರ್ವಹಣೆ ಮಾಡುತ್ತಿದ್ದ ಖಾಸಗಿ ಶಾಲೆ ಕನ್ನಡ ಶಿಕ್ಷಕ ಈಗ ಗೇಣಿ ಗದ್ದೆಯಲ್ಲಿ ಭತ್ತ ನಾಟಿಗೆ ಮುಂದಾಗಿದ್ದಾರೆ.
ಬದಲಾವಣೆ ಜಗದ ನಿಯಮ ಎಂಬ ಮಾತಿದೆ. ಕರೊನಾ ಕಾಲಕ್ಕೆ ಇದು ಹೆಚ್ಚು ಪ್ರಸ್ತುತ ಎನ್ನುವಂತಾಗಿದ್ದು, ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿದೆ ಎಂಬುದಕ್ಕೆ ಶಿಕ್ಷಕ ಹೊಸಕೆರೆ ಎಚ್.ಎನ್.ಸಂದೀಪ್ ತಾಜಾ ಉದಾಹರಣೆಯಾಗಿದ್ದಾರೆ.
ಡಿಎಡ್ ಪದವೀಧರ ಸಂದೀಪ್, ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ 3 ಎಕರೆ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯ ಮಾಡಿದ್ದಾರೆ. ಮೂಟೆ ಹೊರುವುದರಿಂದ ಹಿಡಿದು ಕಾರ್ವಿುಕರೊಂದಿಗೆ ನಾಟಿ ಕಾಯಕಕ್ಕೆ ಕೈ ಜೋಡಿಸಿದ್ದಾರೆ.
2011ರಲ್ಲಿ ಮೈಸೂರು ವಿವಿಯಲ್ಲಿ ಬಿಎ ಪದವಿ ಪಡೆದ ನಂತರ ಸಕಲೇಶಪುರ ಕಾಲೇಜಿನಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಡಿ.ಎಡ್ ಪೂರ್ಣಗೊಳಿಸಿದ ಸಂದೀಪ್ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಬಿಎಲ್ಒ ಆಗಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಸೇವೆ ಸಲ್ಲಿಸಿ ಆರೋಗ್ಯದ ಸಮಸ್ಯೆಯಿಂದ ಸ್ವಂತ ಊರಾದ ಮೂಡಿಗೆರೆಗೆ ವಾಪಸಾಗಿದ್ದಾರೆ.
ಸ್ಥಳೀಯ ವಿದ್ಯಾ ಸಂಸ್ಥೆಯಲ್ಲಿ ಒಂದು ವರ್ಷ, ನಂತರ ಚಿಕ್ಕಮಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಕನ್ನಡ ಶಿಕ್ಷಕನಾ, ಜತೆಗೆ ದೈಹಿಕ ಶಿಕ್ಷಕ ವೃತ್ತಿ ಮತ್ತು ಕೊರಿಯೋಗ್ರಾಫ್ ಮಾಡಿ ಕೈತುಂಬ ಸಂಬಳ ಪಡೆಯುತ್ತಿದ್ದರು. ಜಿಲ್ಲಾ ಆಟದ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ದಿನದಂದು ಇವರು ಕೊರಿಯೋಗ್ರಾಫ್ ಮಾಡಿದ ನೃತ್ಯರೂಪಕ ಬಹುಮಾನಕ್ಕೂ ಪಾತ್ರವಾಗಿದೆ ಎಂಬುದು ಗಮನಾರ್ಹ.
ಕರೊನಾ ಆರಂಭವಾದ ಮೇಲೆ ಬಹಳಷ್ಟು ಖಾಸಗಿ ಶಾಲೆ ಶಿಕ್ಷಕರಿಗೆ ವೇತನವಿಲ್ಲದೆ ಬೇರೆ ಉದ್ಯೋಗ ಕಂಡುಕೊಳ್ಳುವುದು ಅನಿವಾರ್ಯವಾಗಿದೆ.
ಹಲವರು ಜೀವನೋಪಾಯಕ್ಕಾಗಿ ಪರ್ಯಾಯ ಕೆಲಸ ಮಾಡುತ್ತಿದ್ದಾರೆ. ಸಂದೀಪ್ ಎರಡು ವರ್ಷದ ಹಿಂದೆ ದಾಂಪತ್ಯ ಬದುಕಿಗೆ ಪದಾರ್ಪಣೆ ಮಾಡಿದ್ದು, ಕುಟುಂಬ ನಿರ್ವಹಣೆಗಾಗಿ ಲಾಕ್ಡೌನ್ನಲ್ಲಿ ಶಿಕ್ಷಕ ವೃತ್ತಿ ಕೈ ತಪ್ಪಿದರೂ ಧೃತಿಗೆಡದೆ ತಿಂಗಳುಗಟ್ಟಲೆ ಕಾಫಿ ಮೂಟೆಹೊತ್ತಿದ್ದಾರೆ. ಈಗ ಸ್ವಗ್ರಾಮದ ಬಳಿ ಗದ್ದೆ ಗೇಣಿ ಪಡೆದು ಕೆಲಸದಲ್ಲಿ ತೊಡಗಿದ್ದಾರೆ.
ಡಿಎಡ್ನಲ್ಲಿ ಶೇ.89 ಅಂಕ ಪಡೆದು ಬೆಂಗಳೂರು, ಮೂಡಿಗೆರೆ, ಚಿಕ್ಕಮಗಳೂರಿನ ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡಿದ್ದು, ಕೈ ತುಂಬ ಸಂಬಳ ನೀಡಿದ್ದಾರೆ. ಕರೊನಾ ಲಾಕ್ಡೌನ್ ನಂತರ ಸಹಸ್ರಾರು ಶಿಕ್ಷಕರಿಗೆ ಕೆಲಸವಿಲ್ಲದಂತಾಗಿದೆ. ಸರ್ಕಾರ ಗಾರೆ ಕೆಲಸದವರಿಂದ ಹಿಡಿದು ವಿವಿಧ ವರ್ಗದ ಕಾರ್ವಿುಕರಿಗೆ ಧನ ಸಹಾಯಮಾಡಿದೆ. ಆದರೆ ಖಾಸಗಿ ಶಾಲೆ ಶಿಕ್ಷಕರು ಹಾಗೂ ಉಪನ್ಯಾಸಕರ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ ಎಂದು ಬೇಸರದಿಂದ ನುಡಿಯುತ್ತಾರೆ ಎಚ್.ಎನ್.ಸಂದೀಪ್.