

ಕೋಲಾರ: ಕರೊನಾ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್‌ಡೌನ್‌ಗೆ ನಗರ-ಪಟ್ಟಣಕ್ಕಿಂತ ಹಳ್ಳಿಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ನಗರ, ಪಟ್ಟಣದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರು ಬೆವರು ಹರಿಸುತ್ತಿದ್ದಾರೆ. ಪೊಲೀಸ್ ಪಾಸ್ ಇದೆ ಎಂಬ ದರ್ಪದಿಂದ ತಿಳಿಗೇಡಿಗಳು ಅನವಶ್ಯಕವಾಗಿ ತಿರುಗಾಡುತ್ತಿರುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.
ಜನರಿಗೆ ತೊಂದರೆ ಆಗಬಾರದೆಂದು ಅಗತ್ಯ ವಸ್ತು ಖರೀದಿಗೆ ಸಮಯ ನಿಗದಿ ಮಾಡಿದ್ದರೂ ಕೆಲವರು ನಿಯಮ ಮೀರಿ ಕಾರು, ದ್ವಿಚಕ್ರ ವಾಹನಗಳಲ್ಲಿ ಓಡಾಡಿಕೊಂಡು ಸರ್ಕಾರದ ಉದ್ದೇಶಕ್ಕೆ ಭಂಗ ಉಂಟುಮಾಡುತ್ತಿದ್ದಾರೆ. ಪೊಲೀಸ್ ಪಾಸ್ ದುರ್ಬಳಕೆ ತಪ್ಪಿಸಲು ಅನಗತ್ಯವಾಗಿ ಓಡಾಡುವವರಿಂದ ಪಾಸ್ ಹಿಂಪಡೆಯಲು ಇಲಾಖೆ ನಿರ್ಧರಿಸಿದೆ.
ಜಿಲ್ಲೆಯಲ್ಲಿ ಕರೊನಾ ಸೋಂಕು ಕಂಡುಬಂದಿಲ್ಲವೆಂಬ ಭಂಡ ಧೈರ್ಯದಿಂದ ಕೆಲವರು ಓಡಾಡುತ್ತಿದು,್ದ ಏ.14ರವರೆಗೆ ಮನೆಯಲ್ಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದು ಪ್ರಜ್ಞಾವಂತರ ಅಳಲಾಗಿದೆ.
ಹಳ್ಳಿಗಳಲ್ಲಿ ಶೇ.95 ಲಾಕ್ ಡೌನ್ ಆಗಿದೆ, ಕಿರಾಣಿ ಅಂಗಡಿ ತೆರೆದಿದ್ದರೂ ವ್ಯಾಪಾರವಿಲ್ಲ, ಜಿಲ್ಲಾಡಳಿತ ಹಳ್ಳಿ ಜನತೆಯ ಅಲೆದಾಟ ತಪ್ಪಿಸಲು ಎಲ್ಲ ವ್ಯವಸ್ಥೆ ಮಾಡಿದೆ. ಕೆಲವೆಡೆ ಕುಡಿಯುವ ನೀರಿಗೆ ತೊಂದರೆಯಿದ್ದರೂ ಜನ ಬೀದಿಗೆ ಬರದಂತೆ ಮುಂಜಾಗ್ರತೆ ವಹಿಸಲಾಗಿದೆ.
ಆರೋಗ್ಯ ಇಲಾಖೆಯಿಂದ ಗ್ರಾಮಗಳ ಮೇಲೆ ನಿಗಾ ವಹಿಸಲಾಗಿದೆ, ಆಶಾ ಕಾರ್ಯಕರ್ತೆಯರು ನಿಗದಿಪಡಿಸಿರುವ ಜಾಗದಲ್ಲಿ ವಾಸ್ತವ್ಯವಿದ್ದು 24/7 ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಪಂನಿಂದ ಚರಂಡಿಗಳಿಗೆ ಫಿನಾಯಿಲ್ ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ, ಪೊಲೀಸರು ದಿನಕ್ಕೆ ಎರಡು ಬಾರಿ ಗಸ್ತು ತಿರುಗಿ ಜನರಲ್ಲಿ ಧೈರ್ಯ ತುಂಬುತ್ತಿದ್ದಾರೆ.
ಬಂಗಾರಪೇಟೆ ತಾಲೂಕಿನ ವಕ್ರಕುಂಟೆ ಗ್ರಾಮದ 6 ಜನ ಇತ್ತೀಚೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ, ಮದ್ದೂರಿಗೆ ಹೋಗಿ ವಾಪಸಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದೆ ಆತಂಕವನ್ನುಂಟು ಮಾಡಿದ್ದರು. ಈ ವ್ಯಕ್ತಿಗಳನ್ನು ಸ್ವಗ್ರಾಮದಲ್ಲೇ ಕ್ವಾರಂಟೈನ್ ಮಾಡುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬೇರೆಡೆಗೆ ಸ್ಥಳಾಂತರಿಸಿದೆ.
ಪಾಕರಹಳ್ಳಿ ಯುವಕ ಇಟಲಿಯಿಂದ ಮಾರ್ಚ್ ಮೊದಲ ವಾರದಲ್ಲೇ ಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮನೆಯಲ್ಲಿರಿಸಿ ಪೊಲೀಸ್ ಕಾವಲು ಹಾಕಲಾಗಿದೆ, ಜಿಲ್ಲೆಯ ಬೇರೆ ಯಾವುದೇ ತಾಲೂಕಿನಲ್ಲೂ ಗೊಂದಲ, ಭೀತಿ ಉಂಟಾಗಿಲ್ಲ, ಆದರೂ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.
ಕರೊನಾ ಹಿನ್ನೆಲೆಯಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ವಚ್ಛತೆಗೆ ಹಾಗೂ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಏನಾದರೂ ತೊಂದರೆ ಇದ್ದಲ್ಲಿ ತಾಪಂ ಇಒ, ಪಿಡಿಒಗಳಿಗೆ ಮಾಹಿತಿ ನೀಡಿದಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು, ಹಳ್ಳಿಯ ಜನತೆ ಕರೊನಾ ತಡೆಗೆ ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಎಚ್.ವಿ.ದರ್ಶನ್, ಸಿಇಒ, ಜಿಪಂ, ಕೋಲಾರ ಹಳ್ಳಿಗಳಲ್ಲಿ ಜಾಗೃತಿ ಹೆಚ್ಚಾಗಿದೆ, ನಗರ-ಪಟ್ಟಣ ಜನರಿಗಷ್ಟೇ ಸ್ಯಾನಿಟೈಸರ್, ಮಾಸ್ಕ್ ಕೊಟ್ಟರೆ ಸಾಲದು, ಹಳ್ಳಿಗಳಿಗೂ ಹಂಚಬೇಕು, ಮನೆಯಲ್ಲಿ ಉಳಿಯುವ ಜನರಿಗೆ ಅಗತ್ಯ ಪದಾರ್ಥಗಳ ಖರೀದಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುನಿಯಪ್ಪ, ಗ್ರಾಮಸ್ಥ, ಪಾಕರಹಳ್ಳಿ, ಬಂಗಾರಪೇಟೆ ತಾಲೂಕು