

ಲಕ್ಷೆ್ಮೕಶ್ವರ: ವೃತ್ತಿ ರಂಗಭೂಮಿ- ನಾಟಕ ಕಂಪನಿಗಳು ಮತ್ತು ಕಲಾವಿದರು ಕರೊನಾದಿಂದಾಗಿ ಜರ್ಜರಿತರಾಗಿದ್ದಾರೆ. ಕೋವಿಡ್ ಕಾರಣದಿಂದ ಆಟ ನಿಲ್ಲಿಸಿದ್ದ ನಾಟಕ ಕಂಪನಿಗಳು ಮರು ಪ್ರಾರಂಭವಾಗಿವೆ. ಆದರೆ, ಕರೊನಾ ಭೀತಿಯೋ ಅಥವಾ ನಾಟಕ ನೋಡುವ ಪ್ರವೃತ್ತಿ ಜನರಲ್ಲಿ ಕಡಿಮೆಯಾಗಿದೆಯೋ ಗೊತ್ತಿಲ್ಲ ನಾಟಕ ನೋಡಲು ನಿರೀಕ್ಷಿತ ಪ್ರೇಕ್ಷಕರು ಬಾರದಾಗಿದ್ದಾರೆ. ಪರಿಣಾಮ ಕಲಾವಿದರ ಬದುಕು ಅತಂತ್ರವಾಗಿದೆ.
ಪಟ್ಟಣದಲ್ಲಿ 5 ತಿಂಗಳ ಹಿಂದೆ ಬಿಡಾರ ಹೂಡಿರುವ ನವಲಗುಂದದ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ ನಿತ್ಯ ಎರಡು ಆಟಗಳನ್ನು ಪ್ರದರ್ಶಿಸುತ್ತಿದೆ. ಆದರೆ, ಪ್ರೇಕ್ಷಕರು ಬಾರದ್ದರಿಂದ ಕಲಾವಿದರು ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ನಿರ್ವಣವಾಗಿದೆ. ರಾಜ್ಯದಲ್ಲಿ ನಡೆಯಬೇಕಿದ್ದ ದೊಡ್ಡ ಜಾತ್ರೆಗಳು ಕರೊನಾದಿಂದಾಗಿ ರದ್ದಾಗಿವೆ. ಹೀಗಾಗಿ, ನಾಟಕ ಕಂಪನಿ ನಡೆಸುವುದು ಹೇಗೆ ಎಂಬ ಆತಂಕ ಕಂಪನಿ ಮಾಲೀಕರು ಮತ್ತು ಕಲಾವಿದರದ್ದು.
ಸಹಾಯಧನದ ನಿರೀಕ್ಷೆಯಲ್ಲಿ ಕಲಾವಿದರು: ನಾಡಿನ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯ ಉಳಿಸಿ- ಬೆಳೆಸುವ ಕಾರ್ಯ ಮಾಡುತ್ತಿರುವ ಕಲಾವಿದರು ಇಂದು ಊಟ, ಬಟ್ಟೆಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ನಾಟಕ ಟೆಂಟ್ನಲ್ಲಿ ಹಳೆಯ ಪರದೆಗಳು, ತಗಡಿನ ಶೆಡ್, ಮಡಚಲು ಬಾರದ ಕುರ್ಚಿಗಳು, ಹರಿದ ಕಟೌಟ್, ಬ್ಯಾನರ್, ಹಳೆಯ ಹಾಮೋನಿಯಂ, ಹರಿದ ತಬಲಾ ಯಾವುದನ್ನೂ ಬದಲಾಯಿಸದಂತಹ ದುಸ್ಥಿತಿ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕಲಾವಿದರ ಬದುಕು ಮೂರಾಬಟ್ಟೆಯಾಗಿದೆ. ಇವತ್ತಲ್ಲ ನಾಳೆ ಪರಿಸ್ಥಿತಿ ಸುಧಾರಿಸುತ್ತದೆ, ಸರ್ಕಾರ ಸಹಾಯಧನ ನೀಡುತ್ತದೆ ಎಂಬ ಆಶಾಭಾವದೊಂದಿಗೆ ನಾಟಕ ಕಲಾವಿದರು ಬದುಕು ಸಾಗಿಸುತ್ತಿದ್ದಾರೆ.
5 ಸಾವಿರ ರೂ. ಕೂಡ ಗಿಟ್ಟದು: ಮಹಿಳಾ ಕಲಾವಿದರು, ಸಹ ಕಲಾವಿದರು, ಸಂಗೀತ ಕಲಾವಿದರು, ತಾಂತ್ರಿಕ ಸಹಾಯಕರು ಸೇರಿ 20 ಕಲಾವಿದರ ತಂಡ ಇಲ್ಲಿದೆ. ಕಲಾವಿದರಿಗೆ ಗೌರವಧನ, ಊಟೋಪಚಾರ, ಆರೋಗ್ಯ, ಕಂಪನಿಯ ಇತರ ಖರ್ಚು ಸೇರಿ ದಿನಕ್ಕೆ 10 ಸಾವಿರ ರೂ. ಬೇಕು. ಆದರೆ, ನಿತ್ಯ ಸಂಜೆ ಮತ್ತು ರಾತ್ರಿ 2 ಆಟ ಪ್ರದರ್ಶಿಸಿದರೂ 5 ಸಾವಿರ ರೂ. ಸಂಗ್ರಹವಾಗುತ್ತಿಲ್ಲ. ಅಲ್ಲದೆ, ಪ್ರತಿವರ್ಷ ಕೆಲವು ನಾಟಕ ಕಂಪನಿಗಳಿಗೆ ನೀಡುವ ವಾರ್ಷಿಕ ಸಹಾಯಧನವನ್ನು ಕೂಡ ಸರ್ಕಾರ ನೀಡಿಲ್ಲ. ಹೀಗಾಗಿ, ನಾಟಕ ಕಂಪನಿ ನಿಭಾಯಿಸಿಕೊಂಡು ಹೋಗುವುದು ಕಷ್ಟವಾಗುತ್ತಿದೆ ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ ಕೆ.ಎನ್. ನಾಯಕ.
ಲಕ್ಷ್ಮೇಶ್ವರದಲ್ಲಿ ನಾಲ್ಕೈದು ತಿಂಗಳು ತಮ್ಮ ಕಷ್ಟಗಳನ್ನು ಯಾರಿಗೂ ಹೇಳದೆ ಕಲಾಸೇವೆ ನೀಡಿರುವ ಕಂಪನಿಯವರು, ಜ. 23 ಮತ್ತು 24 ರಂದು ಸಹಾಯಾರ್ಥ ಕಲಾ ಪ್ರದರ್ಶನ ನೀಡಲಿದ್ದಾರೆ. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರು, ಕಲಾಸಕ್ತರು ನಾಟಕ ನೋಡಿ ಕೈಲಾದಮಟ್ಟಿಗೆ ಸಹಾಯ- ಸಹಕಾರ ನೀಡಬೇಕು.| ಮಹದೇವಪ್ಪ ಕೊತ್ತಲ, ಎಸ್.ವಿ. ಕಮ್ಮಾರಹಿರಿಯ ಸಾಹಿತಿಗಳು, ಲಕ್ಷ್ಮೇಶ್ವರ
ನಾಟಕ ಕಂಪನಿಗಳಿಗೆ ಕಲಾಪ್ರೇಮಿಗಳು, ಪ್ರೇಕ್ಷಕರೇ ಜೀವಾಳ. ನಾಟಕ ನೋಡುವ ಮತ್ತು ನಮ್ಮಂತಹ ಕಲಾವಿದರ ಬದುಕಿಗೆ ಆಸರೆಯಾಗುವ ದೊಡ್ಡ ಮನಸ್ಸು ಮಾಡಬೇಕಿದೆ. ಸರ್ಕಾರ ಕೂಡ ನಾಟಕ ಕಂಪನಿಗೆ, ಕಲಾವಿದರಿಗೆ ಸಕಾಲಿಕ ಸಹಾಯಧನ, ಮಾಸಾಶನ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಸರ್ಕಾರದ ಯೋಜನೆ, ಕಾರ್ಯಕ್ರಮಗಳನ್ನು ನಾಟಕ ಕಂಪನಿ ಕಲಾವಿದರ ಮೂಲಕ ಪ್ರಚಾರ ಮಾಡಲು ಮುಂದಾಗಬೇಕು.| ಪ್ರವೀಣ ಬಾಗಲಕೋಟೆಶ್ರೀ ಗುರು ಕುಮಾರೇಶ್ವರ ನಾಟ್ಯ ಸಂಘದ ಮಾಲೀಕರು
ವೃತ್ತಿ ರಂಗಭೂಮಿ ಕಲಾವಿದರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೇರವಾಗಿ ಅವರ ಖಾತೆಗೆ ಜಮೆಯಾಗುತ್ತದೆ. ಪ್ರತಿವರ್ಷ ಸರ್ಕಾರ ನಾಟಕ ಅಕಾಡೆಮಿಯಿಂದ ವೃತ್ತಿ ರಂಗಭೂಮಿಗೆ ಕಾಯಕಲ್ಪದಡಿ ವಾರ್ಷಿಕ ಸಹಾಯಧನವನ್ನು ಅವರ ಖಾತೆಗೆ ಜಮೆ ಮಾಡುತ್ತದೆ.| ವೀರಯ್ಯಸ್ವಾಮಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ನಿರ್ದೇಶಕ, ಗದಗ