ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಐಸೋಲೇಷನ್ ವಾರ್ಡ್

dho office control room (1)
Published on

ತುಮಕೂರು: ಕರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ತೆರೆದಿರುವ ಐಸೋಲೇಷನ್ (ಪ್ರತ್ಯೇಕ) ವಾರ್ಡ್‌ಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದ ಮಹಡಿಯಲ್ಲಿ 10 ಹಾಸಿಗೆಗಳ ಐಸೋಲೇಶನ್ ವಾರ್ಡ್ ತೆರೆದಿದ್ದು ಈಗ ಹೆಚ್ಚುವರಿಯಾಗಿ 5 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಪರಿಣಿತ ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ. ದಿನದ 24 ಗಂಟೆ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಸನ್ನದ್ಧವಾಗಿದ್ದು ಅಗತ್ಯ ಔಷಧ, ಮೂಲಸೌಕರ್ಯಗಳನ್ನು ಒದಗಿಸಿದ ವಿಶೇಷ ವಾರ್ಡ್ ಕಾರ್ಯಾರಂಭ ಮಾಡಿದೆ.

ಕಂಟ್ರೋಲ್ ರೂಂ: ಕರೊನಾ ವೈರಸ್ ಲಕ್ಷಣ ಕಂಡು ಬರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಜನರು ಗೊಂದಲ ಪರಿಹರಿಸಿಕೊಳ್ಳಬಹುದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

ಇತ್ತೀಚೆಗೆ ವಿದೇಶದಿಂದ ಬಂದಂತಹ ನೆರೆ-ಹೊರೆಯವರಲ್ಲಿ ಕರೊನಾ ಲಕ್ಷಣ ಕಂಡುಬಂದರೆ ಜನಸಾಮಾನ್ಯರು ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ತಿಳಿಸಬೇಕು. ವ್ಯಕ್ತಿಯ ಮಾಹಿತಿ ಆಧರಿಸಿ, ಆತನನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿದರು.

ಜಿಪಂ ಸಿಇಒ ಶುಭಾ ಕಲ್ಯಾಣ್, ಡಿಎಚ್‌ಒ ಡಾ.ಬಿ.ಆರ್.ಚಂದ್ರಿಕಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ, ಆರ್‌ಎಂಒ ಡಾ.ವೀಣಾ ಇತರರಿದ್ದರು.

ಶಾಲಾ-ಕಾಲೇಜುಗಳಿಗೆ ರಜೆ: ಸರ್ಕಾರದ ಸೂಚನೆಯಂತೆ ಮುಂದಿನ ಒಂದು ವಾರ ಜಿಲ್ಲೆಯಲ್ಲಿ ಎಲ್ಲಾ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ತಿಳಿಸಿದ್ದಾರೆ. ಎಲ್ಲ ಸೂಚನೆಗಳನ್ನು ಪಾಲಿಸಲು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್ 19 ಸಹಾಯವಾಣಿ ಮಾಹಿತಿ ನೀಡಿ: ಕೋವಿಡ್-19 ರಾಜ್ಯದಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕಳೆದ 15 ದಿನಗಳಲ್ಲಿ ವಿದೇಶಿ ಪ್ರಯಾಣ ಮಾಡಿದ್ದವರು ಜಿಲ್ಲೆಯಲ್ಲಿದ್ದರೆ ಅವರ ಬಗ್ಗೆ ಮಾಹಿತಿ ನೀಡಲು ಆರೋಗ್ಯ ಇಲಾಖೆ ಮನವಿ ಮಾಡಿದೆ. ಕೋವಿಡ್ 19 ಸಹಾಯವಾಣಿ 0816 2278387, 2251414ಗೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಮಾಹಿತಿ ನೀಡಬಹುದಾಗಿದೆ.

20ವರೆಗೆ ವಂಡರ್‌ಲಾಗೆ ರಜೆ, ನಂದಿ ಗಿರಿಧಾಮಕ್ಕೆ ನಿಷೇಧ: ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ವಂಡರ್ ಲಾ ಇಂದಿನಿಂದ ಮಾ. 20ವರೆಗೆ ರಜೆ ಘೋಷಣೆ ಮಾಡಿದೆ. ನಂದಿ ಗಿರಿಧಾಮಕ್ಕೂ ಮಾ.14 ರಿಂದ ಮಾ.21 ರವರೆಗೆ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ.

ಮಠದಿಂದ ಮನೆಗೆ ಹೊರಟ ಮಕ್ಕಳು!: ಮಹಾಮಾರಿ ಕರೊನಾ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಸಿದ್ಧಗಂಗಾ ಮಠದಲ್ಲಿಯೂ ಮಕ್ಕಳನ್ನು ಬೇಸಿಗೆ ರಜೆಗೆ ಬಿಡುಗಡೆ ಮಾಡುವ ಕಾರ್ಯ ಆರಂಭಿಸಲಾಗಿದೆ.

ಶ್ರೀಮಠದಲ್ಲಿ 12 ಸಾವಿರ ಮಕ್ಕಳಿದ್ದು ಪರೀಕ್ಷೆ ಮುಗಿದಿರುವ 1 ರಿಂದ 6ನೇ ತರಗತಿ ವಿದ್ಯಾರ್ಥಿಗಳು ಶುಕ್ರವಾರದಿಂದಲೇ ಮನೆಗಳಿಗೆ ತೆರಳಲು ಆರಂಭಿಸಿದರು. ಪರೀಕ್ಷೆ ಬರೆಯಬೇಕಿರುವ 7ರಿಂದ ಪಿಯುವರೆಗಿನ ಮಕ್ಕಳು ಮಾತ್ರ ಮಠದಲ್ಲಿ ಉಳಿಯಲಿದ್ದು ಪರೀಕ್ಷೆಗೆ ಹಾಜರಾಗಲಿದ್ದಾರೆ.

ರಜೆ ಘೋಷಿಸಿದ ವಿವಿ: ತುಮಕೂರು ವಿವಿ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಮಾ.14ರಿಂದ 28ರ ವರೆಗೆ ರಜೆ ಘೋಷಿಸಿದೆ. ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿಗಳು ಕೂಡಲೇ ಊರುಗಳಿಗೆ ತೆರಳುವಂತೆ ಕ್ರಮಕೈಗೊಳ್ಳಲು ವಾರ್ಡ್‌ನ್‌ಗಳಿಗೆ ಸೂಚಿಸಲಾಗಿದೆ.

ವಿದ್ಯಾರ್ಥಿಗಳಿಗಷ್ಟೇ ರಜೆ ಘೋಷಿಸಿರುವ ವಿವಿ ಆಡಳಿತ ಮಂಡಳಿ, ಆಡಳಿತ ವಿಭಾಗಗಳು, ಸ್ನಾತಕೋತ್ತರ ವಿಭಾಗಗಳು, ಘಟಕ ಕಾಲೇಜು ಹಾಗೂ ಇತರ ವಿಭಾಗದ ಬೋಧಕ, ಬೋಧಕೇತರ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ತಿಳಿಸಿದೆ.

ಜನ್ಮದಿನೋತ್ಸವ ಮುಂದೂಡಿಕೆ: ಏ.1ರಂದು ಡಾ.ಶಿವಕುಮಾರ ಸ್ವಾಮೀಜಿ ಜನ್ಮದಿನೋತ್ಸವ ಆಚರಣೆ ಮಾಡದಿರಲು ಸಿದ್ಧಗಂಗಾ ಮಠ ನಿರ್ಧರಿಸಿದೆ. ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಯಾವುದೇ ಕಾರ್ಯಕ್ರಮ ನಡೆಸದಿರಲು ಮಠ ನಿರ್ಧರಿಸಿದ್ದು ಸಹಕರಿಸಲು ಭಕ್ತರಲ್ಲಿ ಮನವಿ ಮಾಡಿದೆ.

ರಜೆ ಘೋಷಿಸಿದ ಸಿದ್ಧಗಂಗಾ ವಿದ್ಯಾಸಂಸ್ಥೆ : ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಮಾ.23ರ ವರೆಗೆ ರಜೆ ಘೋಷಿಸಿ ಸಂಸ್ಥೆಯ ಆಡಳಿತಾಧಿಕಾರಿ ಟಿ.ಕೆ.ನಂಜುಂಡಪ್ಪ ಆದೇಶಿಸಿದ್ದಾರೆ. ಮುಂದಿನ ಪರಿಸ್ಥಿತಿ ಹಾಗೂ ಸರ್ಕಾರದ ಸೂಚನೆ ನೋಡಿಕೊಂಡು ಭವಿಷ್ಯದ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net