

ಕಾರವಾರ: ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದ ವೈರಸ್ ವರ್ಷಾಂತ್ಯಕ್ಕೆ ನಿಯಂತ್ರಣದಲ್ಲಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಇದೇ ಖುಷಿಯಲ್ಲಿ ಜನ ಮೈಮರೆತರೆ ಮತ್ತೆ ಕರೊನಾ ಕಟ್ಟೆ ಒಡೆಯಬಹುದು ಎಂಬ ಆತಂಕದಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಹಲವು ದಿನಗಳಿಂದ ಕರೊನಾ ಸಾವಿನ ಸಂಖ್ಯೆ ಶೂನ್ಯಕ್ಕೆ ಇಳಿದಿದೆ. ದಿನಕ್ಕೆ 800 ಕ್ಕೂ ಅಧಿಕ ಜನರ ಸ್ವ್ಯಾಬ್ ಪರೀಕ್ಷೆ ಮಾಡಲಾಗುತ್ತಿದ್ದರೂ 20 ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿಲ್ಲ. ಕರೊನಾ ಕಾಲಘಟ್ಟದಲ್ಲಿ ಸುಮಾರು 8 ತಿಂಗಳ ದಣಿವಿಲ್ಲದೇ ದುಡಿದ ಆರೋಗ್ಯ ಇಲಾಖೆ ಕಾರ್ಯಕರ್ತರು, ಜಿಲ್ಲಾಡಳಿತಕ್ಕೆ ಇದು ಸಾವರಿಸಿಕೊಳ್ಳುವ ಕಾಲವಾಗಿದೆ.
ದುಬೈನಿಂದ ಭಟ್ಕಳಕ್ಕೆ ಮುಂಬೈ ಹಾಗೂ ಮಂಗಳೂರಿನ ಮೂಲಕ ಬಂದ ಇಬ್ಬರಲ್ಲಿ ಮಾರ್ಚ್ 23 ರಂದು ಪತ್ತೆಯಾದ ಕರೊನಾ ನಂತರ ಹಂತ ಹಂತವಾಗಿ ಇಡೀ ಜಿಲ್ಲೆಗೆ ವ್ಯಾಪಿಸಿತು. ಜುಲೈ, ಆಗಸ್ಟ್ ಹೊತ್ತಿಗೆ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದವು. ಕಾರವಾರ ಮೆಡಿಕಲ್ ಕಾಲೇಜ್ ಸೇರಿ ಜಿಲ್ಲೆಯ ವಿವಿಧ ಸರ್ಕಾರಿ ಆಸ್ಪತ್ರೆಗಳು, ಕರೊನಾ ಕೇರ್ ಸೆಂಟರ್ಗಳು ತುಂಬಿ ತುಳುಕುತ್ತಿದ್ದವು. ಈಗ ಕೇರ್ ಸೆಂಟರ್ಗಳು ಬಂದಾಗಿವೆ. ಆಸ್ಪತ್ರೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಕ್ರಿಯ ಪ್ರಕರಣಗಳಿವೆ. 184 ಕ್ಕೂ ಅಧಿಕ ಜನ ಮೃತಪಟ್ಟರು. ಮೃತರಲ್ಲಿ ಶೇ.80 ಕ್ಕೂ ಅಧಿಕ ಜನ ಇತರ ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರು ಎಂಬುದು ಗಮನಿಸಬೇಕಾದ ಅಂಶ.
ಕ್ರಿಮ್ಸ್ನಲ್ಲಿ 793 ಜನರಿಗೆ ಚಿಕಿತ್ಸೆ: ಕಾರವಾರದ ಸರ್ಕಾರಿ ಮೆಡಿಕಲ್ ಕಾಲೇಜ್ನಲ್ಲಿ ಮೇ 1ರಿಂದ ಕರೊನಾ ಸೋಂಕಿತರಿಗೆ ವಿಶೇಷ ವಾರ್ಡ್ ವ್ಯವಸ್ಥೆ ಮಾಡಲಾಯಿತು. ಮೇ 12ಕ್ಕೆ ಲ್ಯಾಬ್ ತೆರೆಯಲಾಯಿತು.ಕರೊನಾದಿಂದ ಗಂಭೀರ ಸಮಸ್ಯೆ ಎದುರಿಸುತ್ತಿದ್ದ 793 ಜನರಿಗೆ ನಿರ್ದೇಶಕ ಡಾ. ಗಜಾನನ ನಾಯಕ ನೇತೃತ್ವದಲ್ಲಿ ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕರೊನಾ ಭಯ ಇದ್ದ ವೇಳೆ ಇಲ್ಲಿನ ಕದಂಬ ನೌಕಾನೆಲೆಯಲ್ಲಿರುವ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ರಿಯರ್ ಅಡ್ಮಿರಲ್ ಮಹೇಶ ಸಿಂಗ್ ವಿಶೇಷ ಆಸಕ್ತಿ ತೋರಿ ವ್ಯವಸ್ಥೆ ಮಾಡಿಕೊಟ್ಟರು. ಈ ಕಾರ್ಯ ದೇಶದ ಇತರ ರಕ್ಷಣಾ ಇಲಾಖೆಯ ಆಸ್ಪತ್ರೆಗಳಿಗೆ ಮಾದರಿಯಾಯಿತು.
13 ಜನರಲ್ಲಿ ಸೋಂಕು ಪತ್ತೆ: ಗುರುವಾರದ ವರದಿಯಂತೆ ಜಿಲ್ಲೆಯಲ್ಲಿ 13 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. 9 ಜನ ಗುಣವಾಗಿದ್ದಾರೆ. ಕುಮಟಾ, ಶಿರಸಿಯಲ್ಲಿ ತಲಾ 2, ಸಿದ್ದಾಪುರದಲ್ಲಿ 8, ಹಳಿಯಾಳದಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದೆ. ಕಾರವಾರದಲ್ಲಿ 11, ಅಂಕೋಲಾದಲ್ಲಿ 5, ಕುಮಟಾದಲ್ಲಿ 14, ಹೊನ್ನಾವರದಲ್ಲಿ 4, ಭಟ್ಕಳದಲ್ಲಿ 3, ಶಿರಸಿಯಲ್ಲಿ 13, ಸಿದ್ದಾಪುರದಲ್ಲಿ 20, ಯಲ್ಲಾಪುರದಲ್ಲಿ 6, ಹಳಿಯಾಳದಲ್ಲಿ 4, ಜೊಯಿಡಾದಲ್ಲಿ 3 ಸೇರಿ 89 ಸಕ್ರಿಯ ಪ್ರಕರಣಗಳಿವೆ. ಮುಂಡಗೋಡಿನಲ್ಲಿ ಯಾವುದೇ ಸಕ್ರಿಯ ಪ್ರಕರಣವಿಲ್ಲ.
ಪ್ರಮುಖಾಂಶಗಳು
ಮಾರ್ಚ್ 23ಕ್ಕೆ ಜಿಲ್ಲೆಯ ಭಟ್ಕಳದಲ್ಲಿ ದುಬೈದಿಂದ ಬಂದವರಲ್ಲಿ ಮೊದಲು ಕಾಣಿಸಿದ ವೈರಸ್
ಮೇ 1ರಿಂದ ಕಾರವಾರದಲ್ಲಿ ಕೋವಿಡ್ ವಿಶೇಷ ವಾರ್ಡ್ ಆರಂಭ
ಮೇ 12ರಿಂದ ಕಾರವಾರದಲ್ಲಿ ಕೋವಿಡ್ ಲ್ಯಾಬ್ ಪ್ರಾರಂಭ
ಇದುವರೆಗೆ ಜಿಲ್ಲೆಯಲ್ಲಿ 2,27,579 ಜನರ ಕೋವಿಡ್ ಪರೀಕ್ಷೆ
ಮೆಡಿಕಲ್ ಕಾಲೇಜ್ ಒಂದರಲ್ಲೇ 1,42,272 ಜನರ ಟೆಸ್ಟ್
ಎರಡು ಆರ್ಟಿ-ಪಿಸಿಆರ್ ಯಂತ್ರಗಳ ಮೂಲಕ ದಿನದ 24 ಗಂಟೆಯೂ 1800ಕ್ಕೂ ಅಧಿಕ ವೈರಸ್ ಪರೀಕ್ಷೆ ಮಾಡುತ್ತಿರುವ ಲ್ಯಾಬ್ ತಂತ್ರಜ್ಞರು