ಕಾಪು ನಿವಾಸಿ ಸಾವಿಗೆ ಕರೊನಾ ಕಾರಣವಲ್ಲ...

DC
Published on

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸ್ಪಷ್ಟನೆ

ಆರ್​ಟಿಪಿಸಿಆರ್​ ಪರೀಕ್ಷೆ ಕಡ್ಡಾಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಾಪು ತಾಲೂಕಿನ ಬೆಳ್ಳೆ ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ನಿಜ. ಆದರೆ, ಕರೊನಾ ಸೋಂಕಿನಿಂದ ಅಲ್ಲ. ಮೃತ ವ್ಯಕ್ತಿಯಲ್ಲಿ ಕರೊನಾ ಪಾಸಿಟಿವ್​ ತೀವ್ರ ಮಂದವಾಗಿತ್ತು ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸ್ಪಷ್ಟಪಡಿಸಿದ್ದಾರೆ.

65 ವರ್ಷದ ವ್ಯಕ್ತಿ ಅವರಾಗಿದ್ದು, ಕರಳು ಕ್ಯಾನ್ಸರ್​ಗೆ ತುತ್ತಾಗಿ ಆಪರೇಷನ್​ ಮಾಡಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಕಿಮೋಥೆರಪಿಯನ್ನೂ ಮಾಡಿಸಿಕೊಳ್ಳುತ್ತಿದ್ದರು. ಅವರು ಹೃದಯ ಚಿಕಿತ್ಸೆಗೂ ಒಳಗಾಗಿದ್ದು, ಅಧಿಕ ರಕ್ತದೊತ್ತಡ ಕಾಯಿಲೆಯೂ ಇತ್ತು. ಮೇ 29ರಂದು ಅವರು ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ಸಾವಿಗೆ ಕರೊನಾ ಸೋಂಕು ಕಾರಣವಲ್ಲ ಎಂದು ತಿಳಿಸಿದ್ದಾರೆ.

ಚಿಕಿತ್ಸೆ ವೇಳೆ ಅವರನ್ನು ಆರ್​ಟಿಪಿಸಿಆರ್​ ಟೆಸ್ಟ್​ಗೆ ಒಳಪಡಿಸಿದಾಗ ಮಂದವಾಗಿ ಕರೊನಾ ಸೋಂಕು ಇತ್ತು. ಅದು ಸಾವಿಗೆ ಕಾರಣವಾಗುವಷ್ಟು ಭಯಾನಕವಾಗಿ ಇರಲಿಲ್ಲ. ಅವರು ಮೃತಪಟ್ಟಿರುವುದು ಅನ್ಯ ಕಾರಣದಿಂದಾಗಿ. ಕಾಪು ತಹಸೀಲ್ದಾರ್​ ಪ್ರತಿಭಾ ಆರ್​. ಅವರು ಮೃತರ ಮನೆಗೆ ಭೇಟಿ ನೀಡಿ, ಮನೆಯವರ ಆರೋಗ್ಯ ವಿಚಾರಿಸಿದ್ದು, ಯಾರಿಗೂ ಕೋವಿಡ್​ ಲಕ್ಷಣಗಳಿಲ್ಲ ಎಂದು ಡಿಸಿ ತಿಳಿಸಿದ್ದಾರೆ.

ತಪಾಸಣೆ ಕಡ್ಡಾಯ

ಜ್ವರಬಾಧೆಯಿಂದ ಆಸ್ಪತ್ರೆಗೆ ಬರುವ ಎಲ್ಲರಿಗೂ ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಆರ್​ಟಿಪಿಸಿಆರ್​ ಪರೀಕ್ಷೆ ಮಾಡಿಸಲಾಗುತ್ತಿದೆ. ಕೆಲವರಲ್ಲಿ ಮಂದವಾಗಿ ವೈರಸ್​ ಲಕ್ಷಣ ಇದ್ದೇ ಇರುತ್ತದೆ. ಆದರೆ, ಅವು ಜೀವಕ್ಕೆ ಮಾರಕವಾಗುವ ರೀತಿಯಲ್ಲಿ ಇರುವುದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ ಉಡುಪಿ ಜಿಲ್ಲೆಯಲ್ಲಿ ಭೀಕರವಾಗಿ ಕರೊನಾ ಪಾಸಿಟಿವ್​ ಪತ್ತೆಯಾಗಿಲ್ಲ ಎಂದು ವಿದ್ಯಾಕುಮಾರಿ ವಿಜಯವಾಣಿಗೆ ಮಾಹಿತಿ ನೀಡಿದ್ದಾರೆ.

ಎಲ್ಲರ ಜೀವವೂ ಅಮೂಲ್ಯ. ಹೀಗಾಗಿ ಜ್ವರ ಬಂದಾಗ ನಿರ್ಲಕ್ಷ್ಯ ತೋರದೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಮಾಡಿಕೊಳ್ಳಬೇಕು. ಮಳೆಗಾಲ ಆಗಿದ್ದರಿಂದ ಸಹಜವಾಗಿಯೇ ನೆಗಡಿ, ಜ್ವರ ಬರುತ್ತದೆ. ಮಕ್ಕಳಿಗೆ ಜ್ವರ ಬಂದರೆ ಶಾಲೆಗೆ ಕಳುಹಿಸಬೇಡಿ. ತ್ವರಿತವಾಗಿ ಅವರಿಗೆ ಔಷಧೋಪಚಾರ ಮಾಡಲು ಪಾಲಕರು ಮುಂದಾಗಬೇಕು. | ಡಾ. ಕೆ.ವಿದ್ಯಾಕುಮಾರಿ. ಉಡುಪಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net