ಒಂದೇ ಕುಟುಂಬದ ನಾಲ್ವರಿಗೆ ಕರೊನಾ ದೃಢ

18blrp2
Published on

ಬೇಲೂರು: ಪಟ್ಟಣದ ಪಂಪ್‌ಹೌಸ್ ರಸ್ತೆಯ ಸರ್ವೋದಯ ಶಾಲೆಗೆ ತೆರಳುವ ಬೀದಿಯಲ್ಲಿ ಒಂದೇ ಕುಟುಂಬದ ನಾಲ್ವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲ ಸೋಂಕಿತರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ, ಸೋಂಕಿತರು ವಾಸವಿದ್ದ ಬೀದಿಯನ್ನು ಆರೋಗ್ಯಾಧಿಕಾರಿಗಳು ಸೀಲ್‌ಡೌನ್ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಸರ್ವೋದಯ ಶಾಲೆಗೆ ತೆರಳುವ ಬೀದಿಯಲ್ಲಿ ವಾಸವಿದ್ದ ಇಬ್ಬರು ವ್ಯಕ್ತಿಗಳಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಅವರನ್ನು ಚಿಕಿತ್ಸೆಗಾಗಿ ಒಂದು ವಾರದ ಮೊದಲೇ ದಾಖಲಿಸಲಾಗಿತ್ತು.

ಆದರೆ ಆ ಇಬ್ಬರು ಸೋಂಕಿತರ ಪ್ರಾಥಾಮಿಕ ಸಂಪರ್ಕದಲ್ಲಿದ್ದ 60 ವರ್ಷದ ವೃದ್ಧೆ , 20 ಹಾಗೂ 18 ವರ್ಷದ ಯುವತಿಯರು ಹಾಗೂ 16 ವರ್ಷದ ಯುವಕನ ಗಂಟಲು ದ್ರವವನ್ನು ಸಂಗ್ರಹಿಸಿ, ಎಲ್ಲರನ್ನು ಹೋಂ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಆದರೆ ಇಂದು ನಾಲ್ವರಿಗೂ ಕರೊನಾ ಪಾಸಿಟಿವ್ ಎಂದು ವರದಿ ಬಂದ ಹಿನ್ನೆಲೆಯಲ್ಲಿ ನಾಲ್ವರನ್ನು ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಿ ಅವರು ವಾಸವಿದ್ದ ಬೀದಿಯನ್ನು ಸೀಲ್‌ಡೌನ್ ಮಾಡಿಸಲಾಗಿದೆ ಎಂದರು.

ಕೋವಿಡ್ ವೈದ್ಯಾಧಿಕಾರಿ ಡಾ.ನರಸೇಗೌಡ ಮಾತನಾಡಿ, ಈಗಾಗಲೆ ತಾಲೂಕಿನಾದ್ಯಂತ ಕರೊನಾ ಸೋಂಕು ಹೆಚ್ಚು ಜನರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಾರ್ವಜನಿಕರು ತಾಲೂಕು ಆಡಳಿತದ ನಿರ್ದೇಶನ ಪಾಲಿಸುವ ಮೂಲಕ ಕಡ್ಡಾಯವಾಗಿ ಮಾಸ್ಕ್, ಪರಸ್ಪರ ಅಂತರದಿಂದಿದ್ದು, ಸ್ಯಾನಿಟೈಸರ್ ಮತ್ತು ಸೋಪು ಬಳಸಿ ಪದೇಪದೆ ಕೈಗಳನ್ನು ತೊಳೆಯುವ ಮೂಲಕ ಸೋಂಕು ಹರಡುವುದನ್ನು ತಡೆಗಟ್ಟಲು ಮುಂದಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net