

ಪ್ರಭುಸ್ವಾಮಿ ಅರವಟಗಿಮಠ ನರೇಗಲ್ಲ
ಕರೊನಾ ಎರಡನೇ ಅಲೆ ಕೈಮೀರುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ 14 ದಿನಗಳ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸಿದೆ. ಅಗತ್ಯ ವಸ್ತುಗಳ ಅಂಗಡಿಗಳಿಗೆ ಮಾತ್ರ ಪರವಾನಗಿ ನೀಡಿರುವ ಸರ್ಕಾರ ಜವಳಿ ವ್ಯಾಪಾರಕ್ಕೆ ಕಡಿವಾಣ ಹಾಕಿದೆ. ಇದರಿಂದಾಗಿ ಜವಳಿ ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ವರ್ಷ ಜವಳಿ ವ್ಯಾಪಾರ ಆರಂಭಗೊಳ್ಳಬೇಕು ಎನ್ನುವಷ್ಟರಲ್ಲಿ ಕರೊನಾ ಪೆಟ್ಟು ನೀಡಿತು. ಮತ್ತೆ ಈ ವರ್ಷದ ವ್ಯಾಪಾರ ಪ್ರಾರಂಭದಲ್ಲಿಯೇ ಲಾಕ್ಡೌನ್ ಜಾರಿಯಾಗಿದ್ದು, ಹೋಳಿ, ಯುಗಾದಿ, ಮದುವೆ ಸೀಸನ್, ರಂಜಾನ್ ವ್ಯಾಪಾರ ಶೂನ್ಯವಾಗಿ ವ್ಯಾಪಾರಸ್ಥರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನಲುಗುವಂತಾಗಿದೆ. ಹೀಗಾಗಿ ವ್ಯಾಪಾರಸ್ಥರು ಚೇತರಿಸಿಕೊಳ್ಳುವುದೇ ಕಷ್ಟಕರವಾಗಿದೆ.
ಪಟ್ಟಣದಲ್ಲಿ ಹತ್ತಕ್ಕೂ ಹೆಚ್ಚು ಜವಳಿ ಅಂಗಡಿಗಳಿವೆ. ಯಲಬುರ್ಗಾ ತಾಲೂಕಿನ ತೊಂಡಿಹಾಳ, ಬಂಡಿಹಾಳ, ಬಿನ್ನಾಳ, ಹಂಚಿನಾಳ ಸೇರಿ ಸುತ್ತಲಿನ ದ್ಯಾಂಪೂರ, ಮಲ್ಲಾಪೂರ, ತೋಟಗಂಟಿ, ಜಕ್ಕಲಿ, ಮಾರನಬಸರಿ, ನಿಡಗುಂದಿಕೊಪ್ಪ, ಹಾಲಕೆರೆ, ಯರೇಬೇಲೇರಿ, ಕುರಡಗಿ, ಅಬ್ಬಿಗೇರಿ ಹಾಗೂ ಸುತ್ತಲಿನ ಹತ್ತಾರು ಹಳ್ಳಿಗಳ ಜನರು ಬಟ್ಟೆ ಖರೀದಿಗಾಗಿ ನರೇಗಲ್ಲ ಪಟ್ಟಣಕ್ಕೆ ಬರುತ್ತಿದ್ದರು. ಆದರೆ, ಲಾಕ್ಡೌನ್ ಪರಿಣಾಮವಾಗಿ ಬಟ್ಟೆ ಖರೀದಿ ಸಂಪೂರ್ಣ ಸ್ಥಗಿತಗೊಂಡಿದೆ.
ಸದ್ಯ ಲಾಕ್ಡೌನ್ನಲ್ಲಿ ಮದುವೆ, ಹಬ್ಬದ ಕಾರ್ಯಕ್ರಮಗಳಿಗೆ ಅವಕಾಶ ಇದ್ದರೂ, ಅವುಗಳು ಮನೆಗಳಿಗೆ ಮಾತ್ರ ಸೀಮಿತವಾಗಿವೆ. ಈ ಮಧ್ಯೆ ಮದುವೆ ಸೀಜನ್ ಮುಗಿದು, ಮಳೆಗಾಲ ಬಂದಿದೆ. ಪರಿಣಾಮ ಯಾವುದೇ ವ್ಯತ್ಯಾಸ ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಅದ್ದೂರಿ ಸಭೆ, ಸಮಾರಂಭಗಳಿಗೆ ಅವಕಾಶವಿಲ್ಲ. ಹೀಗಾಗಿ, ಶುಭ ಸಮಾರಂಭಗಳೇ ಇಲ್ಲದಿದ್ದರೆ ಜವಳಿ ವ್ಯಾಪಾರ ಅಷ್ಟಕಷ್ಟೆ. ಇದು ಜವಳಿ ಉದ್ಯಮಿಗಳ ಆತಂಕಕ್ಕೆ ಕಾರಣವಾಗಿದೆ.
ಇನ್ನು ಬಟ್ಟೆ ಹೊಲಿದು ಜೀವನ ನಡೆಸುವ ಟೈಲರ್ಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಜನರು ಬಟ್ಟೆ ಖರೀದಿಸಿದರೆ ಮಾತ್ರ ಹೊಲಿಗೆಗೆ ನೀಡುತ್ತಾರೆ. ಆದರೆ, ಬಟ್ಟೆ ಖರೀದಿಯೇ ಇಲ್ಲದಿರುವಾಗ ಟೈಲರ್ಗಳ ಹತ್ತಿರ ಯಾರು ಬರುತ್ತಾರೆ? ಇದರಿಂದಾಗಿ ಟೈಲರ್ಗಳು ಜೀವನ ನಡೆಸುವುದು ಅತಂತ್ರವಾಗಿದೆ. ಈ ತರನಾಗಿ, ಬಟ್ಟೆ ಅಂಗಡಿಗಳಿಗೆ ಬೀಗ ಬಿದ್ದಿದ್ದು ವ್ಯಾಪಾರಸ್ಥರ ಬದುಕು ಅತಂತ್ರವಾಗಿದೆ.
ರಂಜಾನ್ ಹಬ್ಬಕ್ಕಿಲ್ಲ ಹೊಸ ಬಟ್ಟೆ
ರಂಜಾನ್ ಹಬ್ಬ ಆಚರಣೆಗೆ ಪ್ರತಿಯೊಬ್ಬ ಮುಸ್ಲಿಂ ಸಮಾಜದವರು ಹೊಸ ಬಟ್ಟೆ ಖರೀದಿಸುವುದು ವಾಡಿಕೆ. ಆದರೆ, ಕರೊನಾ ಜನತಾ ಕರ್ಫ್ಯೂ, ಇದೀಗ ಲಾಕ್ಡೌನ್ ಹಿನ್ನಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತಿಲ್ಲ. ಇದರಿಂದಾಗಿ ಹಬ್ಬದ ಕಳೆಗುಂದಿದೆ.
ಲಕ್ಷಾಂತರ ರೂಪಾಯಿ ಬಂಡವಾಳ
ಮದುವೆ, ಸಾಲು ಸಾಲು ಹಬ್ಬಗಳ ವ್ಯಾಪಾರಕ್ಕೆಂದು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ವ್ಯಾಪಾರಸ್ಥರು ಬಟ್ಟೆ ಖರೀದಿಸಿದ್ದಾರೆ. ಆದರೆ, ಲಾಕ್ಡೌನ್ ಪರಿಣಾಮ ಅಂಗಡಿಗಳು ಬಂದ್ ಆಗಿದ್ದು, ಹಾಕಿದ ಬಂಡವಾಳ ಮರುಪಾವತಿಸುವುದು ಸಾಧ್ಯವಾಗದ ಪರಿಸ್ಥಿತಿ ನಿರ್ವಣವಾಗಿದೆ.
ಎರಡು ವರ್ಷಗಳಿಂದ ಬಟ್ಟೆ ವ್ಯಾಪಾರದ ಪ್ರಮುಖ ಹಂತದಲ್ಲಿಯೇ ಲಾಕ್ಡೌನ್ ಆಗುತ್ತಿದೆ. ಲಕ್ಷಾಂತರ ರೂಪಾಯಿಗಳ ಬಂಡವಾಳ ಹಾಕಲಾಗಿದೆ. ಆದರೆ, ಲಾಕ್ಡೌನ್ ಪರಿಣಾಮ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ದಿಕ್ಕು ತೋಚದಂತಾಗಿದೆ. ಬೆಳಗ್ಗೆ 6 ರಿಂದ 10 ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದ್ದು, ಬಟ್ಟೆ ಅಂಗಡಿಗಳಿಗೂ ಅವಕಾಶ ನೀಡುವ ಮೂಲಕ ಅಲ್ಪಸ್ವಲ್ಪ ವ್ಯಾಪಾರ ಮಾಡಿಕೊಳ್ಳಲು ಸರ್ಕಾರ ಅನುಕೂಲ ಮಾಡಬೇಕು.| ಮಲ್ಲಯ್ಯ ಪ್ರಭುಸ್ವಾಮಿಮಠ, ರಾಜು ರಾಜಪುರೋಹಿತ ಜವಳಿ ವ್ಯಾಪಾರಸ್ಥರು ನರೇಗಲ್ಲ
ಪ್ರತಿ ವರ್ಷದ ರಂಜಾನ್ನಲ್ಲಿ ಮನೆ ಮಂದಿಯೆಲ್ಲ ಹೊಸ ಬಟ್ಟೆಗಳನ್ನು ಖರೀದಿಸುತ್ತಿದ್ದೇವು. ಆದರೆ, ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಬ್ಬಕ್ಕೆ ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತಿಲ್ಲ. ಆನ್ಲೈನ್ನಲ್ಲಿ ರೇಡಿಮೇಡ್ ಬಟ್ಟೆ ಖರೀದಿಸಿದರೂ ಅವುಗಳು ಅಷ್ಟೊಂದು ಉತ್ತಮವಾಗಿರುವುದಿಲ್ಲ. ಗುಣಮಟ್ಟದ ಜವಳಿ, ಬಟ್ಟೆಗಳನ್ನು ಅಂಗಡಿಗಳಿಗೆ ಹೋಗಿ ಖರೀದಿಸಲು ಕರೊನಾ ಲಾಕ್ಡೌನ್ ಅಡ್ಡಿಯಾಗಿದೆ.| ಅಬ್ದುಲ್ಗಫಾರ್ ಬಾಲೇಸಾಬನವರ ನರೇಗಲ್ಲ ನಿವಾಸಿ