ದೊಡ್ಡ ಗಡಿಯಾರದ ಮೇಲೂ ಕರೊನಾ ಕರಿನೆರಳು

5
Published on


ಮೈಸೂರು: ಅರಸರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಐತಿಹಾಸಿಕ ದೊಡ್ಡ ಗಡಿಯಾರದ ಮೇಲೂ ಕರೊನಾ ಪರಿಣಾಮ ಬೀರಿದೆ.
ಪುರಭವನದ ಮುಂಭಾಗವಿರುವ ಶತಮಾನ ಆಚರಣೆಯ ಅಂಚಿನಲ್ಲಿರುವ ದೊಡ್ಡ ಗಡಿಯಾರ ಈಗ ಸದ್ದಿಲ್ಲದೇ ನಿಂತಿದ್ದು, ಎರಡು ತಿಂಗಳಿನಿಂದ ಅದರ ನಿರ್ವಹಣೆ ಹೊಣೆ ಹೊತ್ತವರು ಇತ್ತ ಗಮನ ನೀಡಿಲ್ಲ.

ಕರೊನಾ ವೈರಸ್ ತಡೆಗಟ್ಟುವಲ್ಲಿಯೇ ಜಿಲ್ಲಾಡಳಿತ, ನಗರಪಾಲಿಕೆ ನಿರತವಾಗಿರುವುದರಿಂದ ಕೆಟ್ಟು ನಿಂತಿರುವ ನಗರದ ಆಕರ್ಷಣೀಯ ದೊಡ್ಡ ಗಡಿಯಾರ ದುರಸ್ತಿಗೆ ಸಂಬಂಧಪಟ್ಟವರು ಮನಸ್ಸು ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆಯೂ ಆಗಾಗ್ಗೆ ಕೆಟ್ಟು ದುರಸ್ತಿಗೊಂಡು ನಡೆಯುತ್ತಿದ್ದ ದೊಡ್ಡ ಗಡಿಯಾರ ಲಾಕ್‌ಡೌನ್ ಸಮಯದಲ್ಲಿ ಸಂಪೂರ್ಣವಾಗಿ ನಿಂತಿದೆ.

ಅಪಾಯದ ಅಂಚಿನಲ್ಲಿರುವ ದೊಡ್ಡ ಗಡಿಯಾರವನ್ನು ತಕ್ಷಣವೇ ದುರಸ್ತಿ ಮಾಡಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಒಂದೊಮ್ಮೆ ದೊಡ್ಡ ಗಡಿಯಾರದ ಗೋಪುರ ಉರುಳಿದರೆ ಅದು ಮೈಸೂರಿಗೆ ಕಳಂಕವಾಗಲಿದ್ದು, ಜನರು ತಲೆ ತಗ್ಗಿಸುವ ವಿಷಯವಾಗುತ್ತದೆ ಎಂದು ತಜ್ಞರ ಸಮಿತಿ ಅಭಿಪ್ರಾಯಕ್ಕೂ ಇನ್ನೂ ಮನ್ನಣೆ ದೊರೆತಿಲ್ಲ.

ಕರೊನಾ ವೈರಸ್ ಹರಡುವುದಕ್ಕೂ ಮುನ್ನ ಸ್ಥಳ ಪರಿಶೀಲನೆ ನಡೆಸಿ ತಜ್ಞರ ಸಮಿತಿ ಜಿಲ್ಲಾಧಿಕಾರಿ, ನಗರಪಾಲಿಕೆ ಆಯುಕ್ತರಿಗೆ ನೀಡಿದ್ದ ವರದಿ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ನಾಲ್ವಡಿಯವರಿಗಾಗಿ ನಿರ್ಮಾಣ: ದೊಡ್ಡಗಡಿಯಾರಕ್ಕೆ ತನ್ನದೇ ಅದ ಇತಿಹಾಸವಿದ್ದು, ಅಭಿವೃದ್ಧಿ ಪರ್ವ ಕಂಡ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಧಿಕಾರಾವಧಿಗೆ 25 ವರ್ಷ ತುಂಬಿದ್ದ ನೆನಪಿಗಾಗಿ ಅರಮನೆ ಅಧಿಕಾರಿಗಳು, ಸಿಬ್ಬಂದಿ ಹಣ ಸಂಗ್ರಹಿಸಿ 1927ರಲ್ಲಿ ಈ ಸ್ಮಾರಕ ನಿರ್ಮಿಸಿದ್ದರು. ಸುಮಾರು 75 ಅಡಿ ಎತ್ತರದ ಗೋಪುರ ನಿರ್ಮಿಸಿ ಅದರಲ್ಲಿ ಸುಮಾರು 5.5 ಅಡಿಯಷ್ಟು ಗಂಟೆ, 3 ಅಡಿಯಷ್ಟು ಗಡಿಯಾರ ನಿರ್ಮಿಸಲಾಗಿತ್ತು.

ಹಿಂದಿನ ಕಾಲದಲ್ಲಿ ಸಾಕಷ್ಟು ಜನರ ಬಳಿ ಗಡಿಯಾರ ಇಲ್ಲದಿದ್ದರಿಂದ ದೊಡ್ಡ ಗಡಿಯಾರದಿಂದ ಹೊರ ಹೊಮ್ಮುವ ಗಂಟೆ ಶಬ್ಧದಿಂದ ಸುತ್ತಮುತ್ತಲ ಜನರು ಸಮಯ ತಿಳಿದುಕೊಳ್ಳಲು ಸಹಕಾರಿಯಾಗುತ್ತಿತ್ತು. ಆಗ ಹೆಚ್ಚಿನ ಸದ್ದು, ಗದ್ದಲ ವಾಹನಗಳ ದಟ್ಟಣೆ ಇಲ್ಲದಿದ್ದರಿಂದ ಗಂಟೆಯ ಶಬ್ಧ ಸುಮಾರು 5 ಕಿ.ಮೀ.ವರೆಗೂ ಕೇಳಿಸುತ್ತಿತ್ತು ಎನ್ನಲಾಗಿದೆ.

ಅಲ್ಲದೇ ಅರಮನೆ ಉತ್ತರ ದ್ವಾರದಲ್ಲಿ ನಿರ್ಮಾಣಗೊಂಡಿದ್ದ ಈ ದೊಡ್ಡಗಡಿಯಾರ ಒಂದು ರೀತಿ ಮೈಸೂರಿನ ಹೆಗ್ಗುರುತಾಗಿದೆಯಲ್ಲದೇ ಮೈಸೂರು ವೀಕ್ಷಿಸಲು ಬರುವ ಪ್ರವಾಸಿಗರ ಆಕರ್ಷಣೆಯ ಸ್ಥಳಗಳಲ್ಲಿ ಒಂದು ಎನಿಸಿಕೊಂಡಿತ್ತು.

ಆದರೆ ಅದನ್ನು ಸೂಕ್ತವಾಗಿ ನಿರ್ವಹಣೆ ಮಾಡದಿದ್ದರಿಂದ ಗಡಿಯಾರದ ಗೋಪುರದಲ್ಲಿ, ಗಂಟೆ ಕಟ್ಟಿರುವ ಜಾಗದಲ್ಲಿ ಬಿರುಕು ಕಾಣಿಸಿಕೊಂಡಿತು. ಗಡಿಯಾರ ಮಾಡುವ ದೊಡ್ಡ ಶಬ್ಧದಿಂದಾಗಿ ಗೋಡೆಗಳು ಒತ್ತಡ ತಾಳಲಾರದೆ ಬಿರುಕು ಬಿಟ್ಟಿದೆ ಎನ್ನುವ ಅಭಿಪ್ರಾಯವನ್ನು ತಜ್ಞರ ಸಮಿತಿ ನೀಡಿತ್ತು. ಹೀಗಾಗಿ ಪ್ರತಿ ಗಂಟೆಗೂ ಕೇಳಿಬರುತ್ತಿದ್ದ ಗಂಟೆ ಶಬ್ಧವನ್ನು 1990ರಲ್ಲಿ ಸ್ಥಗಿತಗೊಳಿಸಿ ಗಡಿಯಾರ ಮಾತ್ರ ಕಾರ್ಯ ನಿರ್ವಹಿಸುವಂತೆ ಮಾಡಲಾಗಿತ್ತು. ಆದರೆ ಈಗ ನಿರ್ವಹಣೆ ಕೊರತೆಯಿಂದ ಗಡಿಯಾರವೂ ನಿಂತಿದೆ.

ತಜ್ಞರಿಂದ ವರದಿ ಬಂದಿತ್ತು: ಆಗಾಗ್ಗೆ ಕೆಟ್ಟು ನಿಲ್ಲುತ್ತಿರುವ ಗಡಿಯಾರದ ದುರಸ್ತಿ ಜತೆಗೆ ಬಿರುಕು ಜಾಗದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಲು ಜಿಲ್ಲಾಡಳಿತದಿಂದ ನೇಮಕವಾಗಿದ್ದ ತಜ್ಞರ ಸಮಿತಿಯಿಂದ ವರದಿ ಬಂದಿತ್ತು.

ಡ್ರೋನ್ ಕ್ಯಾಮೆರಾ ಮೂಲಕ ಇಡೀ ಗಡಿಯಾರವನ್ನು ಪರಿಶೀಲಿಸಿದ ತಜ್ಞರ ಸಮಿತಿ, ಗೋಪುರ ಸೇರಿದಂತೆ ದೊಡ್ಡಗಡಿಯಾರದ ಗೋಡೆಗಳು ಬಿರುಕು ಬಿಟ್ಟಿರುವುದರಿಂದ ತಕ್ಷಣವೇ ದುರಸ್ತಿ ಮಾಡಬೇಕು. ಇಲ್ಲವಾದರೆ ಅಪಾಯ ಸಂಭವಿಸಬಹುದು ಎನ್ನುವ ಎಚ್ಚರಿಕೆ ನೀಡಿ, ತಕ್ಷಣವೇ ದುರಸ್ತಿಗೊಳಿಸಲು ಸಲಹೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net