

ಕುಶಾಲನಗರ: ಜಿಲ್ಲೆಯ ಪ್ರಮುಖ ವಾಣಿಜ್ಯ ನಗರಿ ಕುಶಾಲನಗರ ಕರೊನಾದಿಂದ ಅಕ್ಷರಶಃ ನಲುಗಿ ಹೋಗಿದೆ. ಕರೊನಾದಿಂದ ಶ್ರೀಮಂತರು ಮಧ್ಯಮ ವರ್ಗಕ್ಕೆ, ಮಧ್ಯಮ ವರ್ಗದವರು ಬಡ ವರ್ಗಕ್ಕೆ ಬಂದು ನಿಂತಿದ್ದಾರೆ.
ಯಾವುದೇ ವಾಣಿಜ್ಯ ಚಟುವಟಿಕೆ ನಿರೀಕ್ಷೆಯಷ್ಟು ನಡೆಯದಿರುವುದರಿಂದ ವಾಣಿಜ್ಯೋದ್ಯಮಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಬ್ಯಾಂಕ್‌ಗಳು ತಮ್ಮ ಸಾಲದ ಕಂತು ಕಟ್ಟದಿದ್ದರೂ ಅಡ್ಡಿಯಿಲ್ಲವೆಂದು ಹೇಳಿರುವುದರಿಂದ ಬಹುತೇಕರು ನಿಶ್ಚಿಂತೆಯಿಂದ ಇದ್ದಾರೆ.
ಆಗಸ್ಟ್ ಕೊನೆಯವರೆಗೆ ಸಾಲ ಮರುಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಹಣಕಾಸು ಸಂಸ್ಥೆಗಳು ಚೀಟಿ ನಡೆಸದಿರುವ ನಿರ್ಧಾರ ಮಾಡಿವೆ. ಅಲ್ಲಿಯ ತನಕ ಹೇಗಾದರೂ ಇರಬಹುದು, ಅಲ್ಪಸ್ವಲ್ಪ ವ್ಯಾಪಾರದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡಬಹುದೆಂಬ ಸಮಾಧಾನದಲ್ಲಿದ್ದಾರೆ.
ಆಗಸ್ಟ್ ನಂತರ ಬ್ಯಾಂಕ್ ಮತ್ತು ಖಾಸಗಿ ಲೇವಾದೇವಿದಾರರ ಸಾಲ ಮರುಪಾವತಿಗೆ ಒತ್ತಡ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ವರ್ತಕ ಶಿವಲಾಲ್ ಜೈನ್ ಆತಂಕ ವ್ಯಕ್ತಪಡಿಸುತ್ತಾರೆ.
ಕಟ್ಟಡ ಬಾಡಿಗೆಗೆ ಕೊಟ್ಟಿರುವ ಮಾಲೀಕರ ಸ್ಥಿತಿ ಅಯೋಮಯವಾಗಿದೆ. ಬಾಡಿಗೆ ಹಣದಿಂದಲೇ ಜೀವನ ರೂಪಿಸಿಕೊಂಡಿರುವ ಹಲವರಿಗೆ ಬಾಡಿಗೆ ಹಣ ಸಿಗದೆ, ಬಲವಂತವಾಗಿ ವಸೂಲು ಮಾಡಲಾಗದೆ ಸಂದಿಗ್ಧ ಪರಿಸ್ಥಿತಿ ಎದುರಾಗಿದೆ.
ಬಾಡಿಗೆ ಹಣಕ್ಕೆ ಒತ್ತಾಯ ಪಡಿಸಿದರೆ, ಮಳಿಗೆ ಖಾಲಿ ಮಾಡುತ್ತೇವೆ. ನಮ್ಮ ಮುಂಗಡ ಹಣ ಕೊಡಿ ಎನ್ನುವ ಮಟ್ಟಿಗೆ ಬಾಡಿಗೆದಾರರು ಬಂದು ನಿಂತಿದ್ದಾರೆ. ಇವರನ್ನು ಬಿಟ್ಟರೆ ಬೇರೆಯವರು ಬಾಡಿಗೆಗೆ ಕೇಳುವವರೇ ಇಲ್ಲದಂತೆ ಆಗಿದೆ. ಬಾಡಿಗೆ ಸ್ವಲ್ಪ ತಡವಾಗಿಯಾದರೂ ಕೊಡಿ ಮಳಿಗೆ ಮಾತ್ರ ಖಾಲಿ ಮಾಡಬೇಡಿ ಎಂದು ಕೇಳಿಕೊಳ್ಳುವಂತಾಗಿದೆ.
ಗ್ರಾಹಕರಂತೂ ದಿನಸಿ ಮತ್ತು ತರಕಾರಿ ಖರೀದಿಸುವುದನ್ನು ಬಿಟ್ಟರೆ ಬೇರೆ ಯಾವುದೇ ಖರೀದಿಗೆ ಒಪ್ಪುವುದಿಲ್ಲ. ಬಟ್ಟೆ, ಪೀಠೋಪಕರಣ, ಮೊಬೈಲ್ ಟಿವಿ ಅಂಗಡಿಗಳು ವ್ಯಾಪಾರವಿಲ್ಲದೆ ದಿನ ಕಳೆಯುತ್ತಿದ್ದಾರೆ. ಒಟ್ಟಿನಲ್ಲಿ ಕರೊನಾ ವೈರಸ್ ಹಲವರ ಜೀವನ ಶೈಲಿಯನ್ನೇ ಬದಲಿಸಿದೆ ಎನ್ನಬಹುದು.